ಬಡವರಿಗೆ ವಸತಿ ಯೋಜನೆಗಳ ಸೌಲಭ್ಯ ಕಲ್ಪಿಸಿ :ವಿ.ಸೋಮಣ್ಣ

ಚಿತ್ರದುರ್ಗ:

      ಅರ್ಹ ಬಡವರಿಗೆ ಮಾತ್ರ ಸರ್ಕಾರದ ವಿವಿಧ ವಸತಿ ಯೋಜನೆಗಳ ಸೌಲಭ್ಯಗಳು ತಲುಪಬೇಕು. ಯಾವುದೇ ಕಾರಣಕ್ಕೂ ಅನರ್ಹರು ವಸತಿ ಯೋಜನೆಯ ಸೌಲಭ್ಯ ಪಡೆಯುವಂತಾಗಬಾರದು. ಅರ್ಹತೆ ಇದ್ದವರಿಗೆ ಮಾತ್ರ ವಸತಿ ಸೌಲಭ್ಯ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

     ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲೆಯ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿವಿಧ ಹಂತದ ವಸತಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದವು. ನೆನೆಗುದಿಗೆ ಬಿದ್ದ ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡು ಇಂತಹ ವಸತಿ ಯೋಜನೆಗಳನ್ನು ಹಲವಾರು ಮಾರ್ಪಾಡುಗಳನ್ನು ಮಾಡಬೇಕಿದೆ. ವಸತಿ ಇಲಾಖೆಯ ಹಿರಿಯ ಅಧಿಕಾರಿಗಳು ವಸತಿ ಯೋಜನೆಯ ನ್ಯೂನತೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ಮುಲಾಜಿಗೆ ಒಳಗಾಗದೇ, ಮನೆ ಇಲ್ಲದೆ ಇದ್ದವರಿಗೆ ಮಾತ್ರ ಮನೆ ಸಿಗಬೇಕು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.

    ಜಿಲ್ಲೆಯು ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿನ ಜನರು ಬರಗಾಲದಿಂದಾಗಿ ತುಂಬಾ ನೋವನ್ನು ಅನುಭವಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಇಒಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತುಂಬಾ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

    2022 ಕ್ಕೆ ಸರ್ವರಿಗೂ ಸೂರು’ ಎಂಬುದು ಪ್ರಧಾನಿಗಳ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು. ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ವಸತಿ ಯೋಜನೆ ಕುಂಠಿತಗೊಂಡಿದೆ. ಚಿತ್ರದುರ್ಗ ನಗರದಲ್ಲಿ 1001 ವಸತಿ ಯೋಜನೆ ಸಮೀಕ್ಷೆಯಾಗಿದ್ದು, ಆದರೆ ಬ್ಯಾಂಕಿನ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಬ್ಯಾಂಕಿನವರು ಕಡ್ಡಾಯವಾಗಿ ಸಾಲಸೌಲಭ್ಯ ನೀಡಬೇಕು ಎಂದು ಹೇಳಿದರು.

ಪಿಡಿಒಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು:

    ವಸತಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ಪಿಡಿಒಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೂಚನೆ ನೀಡಿದರು. ಪಿಡಿಒಗಳು ಸರಿಯಾಗಿ ಕೆಲಸ ಮಾಡದಿದ್ದರೆ ಎಷ್ಟು ಸಾವಿರ ಮನೆ ಕೊಟ್ಟರೂ ಅರ್ಹರಿಗೆ ತಲುಪಿಸಲು ಸಾಧ್ಯವಿಲ್ಲ. ಪಿಡಿಒಗಳು ಗ್ರೌಂಡ್‍ಗೆ ಹೋಗಿ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಕುರಿತು ಎಲ್ಲಾ ತಾಲ್ಲೂಕಿನ ಇಒಗಳು ಗಮನಹರಿಸಬೇಕು. ವಸತಿ ಯೋಜನೆಗಳ ಸೌಲಭ್ಯಗಳ ಕುರಿತು ಅಧಿಕಾರಿಗಳು ಹೆಚ್ಚು ಗಮನಕೊಡಬೇಕು. ಸಮರ್ಪಕವಾಗಿ ಕಾರ್ಯನಿರ್ವಹಿಸದ ಪಿಡಿಓಗಳ ವಿರುದ್ಧ ಇಒಗಳಿಗೆ ಅಮಾನತು ಮಾಡುವ ಅಧಿಕಾರವನ್ನು ನೀಡಬೇಕು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಚಿವರಲ್ಲಿ ಮನವಿ ಮಾಡಿದರು.

ರೂ.10 ಸಾವಿರ ಕೋಟಿ ಬಿಡುಗಡೆ

    ರಾಜ್ಯದಲ್ಲಿ ಬಾಕಿ ಉಳಿದಿರುವ ವಿವಿಧ ವಸತಿ ಯೋಜನೆಗ¼ನ್ನು ಪೂರ್ಣಗೊಳಿಸಲು ರೂ. 10124 ಕೋಟಿ ರೂಗಳನ್ನು ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಕೊರೊನಾದ ಸಂಕಷ್ಟದ ಸಮಯದಲ್ಲೂ ಬಡವರಿಗೆ ರಾಜ್ಯ ಸರ್ಕಾರ ಅತ್ಯುತ್ತಮ ಕಾರ್ಯ ಮಾಡಿದೆ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

    ಹೆಚ್ಚು ಮನೆ ಮಂಜೂರಿಗೆ ಜಿ.ಪಂ. ಅಧ್ಯಕ್ಷೆ ಮನವಿ: ಬರದ ನಾಡು ಚಿತ್ರದುರ್ಗ ಜಿಲ್ಲೆಗೆ ವಿವಿಧ ವಸತಿ ಯೋಜನೆಗಳಡಿಯಲ್ಲಿ ಹೆಚ್ಚು ಮನೆ ಮಂಜೂರು ಮಾಡುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಎಸ್.ಸುರೇಶ್ ಬಾಬು ಕಂದಿಕೆರೆ ವಸತಿ ಸಚಿವ ವಿ.ಸೋಮಣ್ಣ ಅವರಲ್ಲಿ ಮನವಿ ಮಾಡಿದರು.

    ಮನೆ ಮಂಜೂರಾತಿಯಲ್ಲಿ ಯಾವುದೇ ಲೋಪ ದೋಷವಾಗದಂತೆ ಅರ್ಹ ಫಲಾನುಭವಿಗಳಿಗೆ ವಸತಿ ಯೋಜನೆಯ ಸೌಲಭ್ಯ ದೊರೆಯುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಕ್ಷೇತ್ರವಾರು ಸಾವಿರ ಮನೆ ಮಂಜೂರಾತಿಗೆ ಕ್ರಮ:

      ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾಕ್ಷೇತ್ರವಾರು ಒಂದೊಂದು ಕ್ಷೇತ್ರಕ್ಕೂ ವಿವಿಧ ವಸತಿಯೋಜನೆಗಳಡಿ ಒಂದು ಸಾವಿರ ಮನೆ ಮಂಜೂರಾತಿಗೆ ಕ್ರಮವಹಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ಜಿಲ್ಲೆಯ ಅಲೆಮಾರಿ, ಅರೆ ಅಲೆಮಾರಿ ಕುಟುಂಬಗಳಿಗೆ ಕ್ಷೇತ್ರವಾರು ತಲಾ 500 ಮನೆಗಳ ಪಟ್ಟಿ ಜೊತೆಗೆ ಇತರೆಯವರಿಗೆ 500 ಮನೆಗಳು ಸೇರಿ ಒಟ್ಟು ಸಾವಿರ ಮನೆಗಳನ್ನು ನೀಡಲಾಗುತ್ತದೆ, ಬಡವರಿಗೆ ಮನೆ ಕೊಡುವ ನೆಪದಲ್ಲಿ ರಾಜಕೀಯ ಮಾಡದೇ, ಜಾತಿ ತಾರತಾಮ್ಯ ಮಾಡದೇ ಅರ್ಹರಿಗೆ ಮನೆ ತಲುಪಿಸುವ ಕೆಲಸವಾಗಬೇಕು ಎಂದು ಸೂಚನೆ ನೀಡಿದರು.

     ಜಿಲ್ಲೆಯ ಆರು ತಾಲ್ಲೂಕು ವ್ಯಾಪ್ತಿಯಲ್ಲಿ 23,014 ಮನೆಗಳು ವಿವಿಧ ಹಂತಗಳಲ್ಲಿ ನಿರ್ಮಾಣವಾಗುತ್ತಿದ್ದು, ಸಂಬಂಧಪಟ್ಟ ಪಿಡಿಒಗಳು, ಇಒಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದರೆ ಕೂಡಲೇ ಹಣ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಸಂಸದ ಎ.ನಾರಾಯಣಸ್ವಾಮಿ, ಶಾಸಕರುಗಳಾದ ಪೂರ್ಣಿಮಾ ಕೆ.ಶ್ರೀನಿವಾಸ್, ಗೂಳಿಹಟ್ಟಿ ಡಿ.ಶೇಖರ್, ರಘುಮೂರ್ತಿ, ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ರಾಜೀವ್ ವಸತಿ ನಿಗಮದ ಮಹದೇವ್ ಪಸಾದ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap