ಮಕ್ಕಳನ್ನು ಎಸೆಯದೆ ಮಮತೆಯ ತೊಟ್ಟಿಲಲ್ಲಿ ಇಡಿರಿ

ಪಾವಗಡ

          ಮಕ್ಕಳು ದೇಶದ ಆಸ್ತಿಯಾಗಿದ್ದು, ಮಕ್ಕಳ ರಕ್ಷಣೆಯು ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿರುತ್ತದೆ ಎಂದು ತಹಸೀಲ್ದಾರ್ ಡಿ.ವರದರಾಜು ತಿಳಿಸಿದರು.

           ಸೋಮವಾರ ಪಾವಗಡ ಪಟ್ಟಣದ ಎಸ್.ಎಸ್.ಕೆ. ಬಯಲು ರಂಗಂದಿರದಲ್ಲಿ ತಾಲ್ಲ್ಲೂಕು ಆಡಳಿತ, ಶಿಶು ಅಭಿವೃದ್ದಿ ಯೊಜನಾಧಿಕಾರಿಗಳ ಕಚೆರಿ, ತಾಲ್ಲೂಕು ಆಸ್ಪತ್ರೆವತಿಯಿಂದ ಹಮ್ಮಿಕೊಂಡಿದ್ದ ಪರಿತ್ಯಕ್ತ ನವಜಾತ ಶಿಶುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕೆಲವರು ತಮಗೆ ಬೇಡವಾದ ಮಕ್ಕಳನ್ನು ರಸ್ತೆ ಬದಿ, ಚರಂಡಿ, ಗಿಡದ ಪೊದೆಗಳು, ಹೊಲ-ಗದ್ದೆ ಮುಂತಾದ ಅಪಾಯಕಾರಿ ಸ್ಥಳಗಳಲ್ಲಿ ಬಿಟ್ಟು ಹೊಗುತ್ತಿರುವ ಪ್ರಕರಣಗಳು ಜರುಗುತ್ತಿವೆ. ತಮ್ಮದಲ್ಲದ ತಪ್ಪಿಗೆ ಅಮಾಯಕ ಮಕ್ಕಳು ಜೀವ ಕಳೆದು ಕೊಳ್ಳುತ್ತಿವೆ. ಆದ್ದರಿಂದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಖಡ್ಡಾಯವಾಗಿ ಗರ್ಭಿಣಿ ಸ್ತ್ರೀಯರನ್ನು ನೋಂದಣಿ ಮಾಡಿಸಿ ಎಂದರು.

           ಅಭಿವೃದ್ದಿ ಯೋಜನಾಧಿಕಾರಿ ಶಿವಕುಮಾರಯ್ಯ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಇಲ್ಲಿವರೆಗೂ 21 ಪರಿತ್ಯಕ್ತ ಮಕ್ಕಳು ಸಿಕ್ಕಿವೆ. ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಈ ಮಕ್ಕಳನ್ನು ಹಾರೈಕೆ ಮಾಡುತ್ತಿದ್ದು ,5 ವರ್ಷ ಪೂರೈಸಿದ ಮಕ್ಕಳನ್ನು ದತ್ತು ನೀಡಲಾಗುವುದು. ದತ್ತು ಪಡೆಯುವ ದಂಪತಿಗಳು ಆನ್‍ಲೈನ್‍ನಲ್ಲಿ ಅರ್ಜಿ ನೋಂದಣಿ ಮಾಡಿಕೊಂಡರೆ ಇಲಾಖೆಯಿಂದ ಅವರ ಸ್ಥಿತಿಗತಿ ಅಧ್ಯಯನ ಮಾಡಿ ಮಕ್ಕಳನ್ನು ದತ್ತು ನೀಡಲಾಗುವುದು ಎಂದು ತಿಳಿಸಿದರು.

          ಡಾ. ವೆಂಕಟೇಶ್ ಮೂರ್ತಿ ಮಾತನಾಡಿ, ಬೇಡವಾದ ಮಗುವನ್ನು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರಿರಿಸಿರುವ ಮಮತೆಯ ತೊಟ್ಟಿಲಲ್ಲಿ ಇಡಬೇಕು. ಬೇಡವಾದ ಗರ್ಭ ಧರಿಸಿದವರನ್ನು ಗುರ್ತಿಸಿ ಅವರಿಗೆ ಮಾಹಿತಿ ನೀಡಿ ಮಕ್ಕಳನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು. ಮಕ್ಕಳ ರಕ್ಷಣಾ ಘಟಕದ ಸಂಪನ್ಮೂಲ ವ್ಯಕ್ತಿ ಕವಿತಾ ಮಾತನಾಡಿ, ರಕ್ಷಣೆ ಮಾಡಿದ ಪರಿತ್ಯಕ್ತ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ದತ್ತು ಪಡೆದುಕೊಳ್ಳಬಹುದು. ಹಿಂದೂ ದತ್ತು ಕಾಯ್ದೆ ಪ್ರಕಾರ ರಕ್ತ ಸಂಬಂಧಿಗಳಲ್ಲಿ ದತ್ತು ಪಡೆಯುವ ಬಗ್ಗೆ ಮಾಹಿತಿ ನೀಡಿದರು.

          ಕಾರ್ಯಕ್ರಮದಲ್ಲಿ ಗರ್ಭಪಾತ, ಕಾನೂನು ಪ್ರಕಾರ ದತ್ತು ಪಡೆಯುವ ಬಗ್ಗೆ, ಅನಧಿಕೃತವಾಗಿ ದತ್ತು ತೆಗೆದುಕೊಂಡವರಿಗೆ ಶಿಕ್ಷೆ ಮತ್ತಿತರ ವಿಚಾರಗಳ ಬಗ್ಗೆ ಸಂವಾದ ಜರುಗಿತು. ತಾ. ವೈದ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ, ತಾ.ಪಂ. ಎಂ.ಓ. ರಂಗನಾಥ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಛೇರಿಯ ವ್ಯವಸ್ಥಾಪಕ ಸೈಯದ್ ರಕೀಬ್, ಮೇಲ್ವಿಚಾರಕ ಡಿ.ಎಂ. ಮಣಿ, ಜಯಲಕ್ಷ್ಮೀ, ರಾಜೇಶ್ವರಿ, ತಾಲ್ಲೂಕಿನ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ನಸ್ರ್ಗಳು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link