ಶಿರಾ
ತಾಲ್ಲೂಕಿನ ಕಳ್ಳಂಬೆಳ್ಳ ಹಾಗೂ ಶಿರಾ ಕೆರೆಗೆ ಹೇಮಾವತಿ ನೀರನ್ನು ಪೂರೈಸಲಾಗುತ್ತಿದ್ದು ಈವರೆಗೂ ಈ ಎರಡೂ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಿಕೊಳ್ಳಲಾಗಿಲ್ಲ. ಈ ಎರಡೂ ಕೆರೆಗಳ ಜೊತೆಗೆ ಮದಲೂರು ಕೆರೆಗೂ ಕೂಡ ನಿಯಮಾನುಸಾರ ಹೇಮಾವತಿ ನೀರನ್ನು ಪೂರೈಸುವಂತೆ ಒತ್ತಾಯಿಸಿ ನ.13 ರಂದು ತಾ. ರೈತ ಸಂಘ, ಹಸಿರು ಸೇನೆ ಸೇರಿದಂತೆ ವಿವಿಧ ರೈಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ತಿಳಿಸಿದ್ದಾರೆ.
ನಂಜುಂಡಪ್ಪ ವರದಿಯನ್ವಯ ಪ್ರತಿ ವರ್ಷವೂ 0.90 ಟಿ.ಎಂ.ಸಿ. ನೀರನ್ನು ಹರಿಸುವಂತೆ ನೀರಾವರಿ ಸಮಿತಿಯು ತೀರ್ಮಾನಿಸಿದ್ದು, ಈವರೆಗೂ ಶಿರಾ, ಕಳ್ಳಂಬೆಳ್ಳ, ಮದಲೂರು ಕೆರೆಗಳಿಗೆ ಮೀಸಲಾದಷ್ಟು ನೀರನ್ನು ಪಡೆಯಲಾಗಿಲ್ಲ. ಕಳೆದ ನೂರು ದಿನಗಳಿಂದ ಹೇಮಾವತಿಯ ನೀರು ಹರಿಯುತ್ತಿದ್ದರೂ ನೀರು ಹರಿಯುವ ಪ್ರಮಾಣದ ಕಡಿಮೆಯಿಂದಾಗಿ ಕೆರಗಳನ್ನು ತುಂಬಿಸಿಕೊಳ್ಳಲಾಗಿಲ್ಲ ಎಂದು ಕೆಂಚಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಡಿಯುವ ನೀರಿನ ಉದ್ದೇಶದಿಂದ ಈ ಮೂರೂ ಕೆರೆಗಳು ಭರ್ತಿಯಾಗುವವರೆಗೂ ಸರ್ಕಾರ ಹೇಮಾವತಿಯ ನೀರನ್ನು ಪೂರೈಸಬೇಕು ಎಂದು ಒತ್ತಾಯಿಸಿ ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಪ್ರತಿಭಟನೆಯನ್ನು ಕೈಗೊಳ್ಳಲಾಗಿದ್ದು ಸಾರ್ವಜನಿಕರು, ರೈತಪರ ಸಂಘಟನೆಗಳು, ಇನ್ನಿತರ ಸಂಘಟನೆಗಳು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೆಂಚಪ್ಪ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ