ದಾವಣಗೆರೆ:
ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ, ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಸಡಿಲಗೊಳಿಸಬೇಕು ಹಾಗೂ 230 ರೂ. ಪ್ರೋತ್ಸಾವ ಧನ ಘೋಷಿಸಿ ಎರಡು ಸಾವಿರ ರೂ. ಕ್ವಿಂಟಾಲ್‍ನಂತೆ ಭತ್ತ ಖರೀದಿಸಬೇಕೆಂದು ಬಿಜೆಪಿ ಮುಖಂಡ ಬಿ.ಎಂ.ಸತೀಶ್ ಆಗ್ರಹಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಭತ್ತಕ್ಕೆ 1770 ರೂ. ಕನಿಷ್ಠ ಬೆಂಬಲ ಬೆಲೆಯನ್ನಾಗಿ ಘೋಷಿಸಿ, ಮೂರು ತಿಂಗಳು ಕಳೆದಿದೆ. ಆದರೆ, ರಾಜ್ಯ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭಿಸಲು ವಿಳಂಬ ಧೋರಣೆ ಅನುಸರಿಸಿದ್ದಲ್ಲದೇ, ಈಗ ಹತ್ತು ಹಲವು ಷರತ್ತುಗಳನ್ನು ಹಾಕಿ ರೈತರು ಭತ್ತ ಮಾರಾಟಕ್ಕೆ ಮುಂದೆ ಬಾರದಂತೆ ಮಾಡಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಭತ್ತ ಖರೀದಿಯ ಹಿನ್ನೆಲೆಯಲ್ಲಿ ಸಣ್ಣ ಮತ್ತು ದೊಡ್ಡ ರೈತರನ್ನಾಗಿ ವಿಂಗಡಿಸಿ ತಾರತಮ್ಯ ಮಾಡುತ್ತಿದೆ. ಅಲ್ಲದೆ, ಒಬ್ಬ ರೈತರಿಂದ ಕೇವಲ 40 ಕ್ವಿಂಟಾಲ್ ಮಾತ್ರ ಖರೀದಿಸುವುದಾಗಿ ಹೇಳಿದೆ. ಅಲ್ಲದೆ, ಭತ್ತ ಮಾರಾಟ ಮಾಡುವ ರೈತರು ಪಹಣಿಯಲ್ಲಿ ಬೆಳೆ ಕಾಲಂ ಅಲ್ಲಿ ಭತ್ತ ಎಂಬುದಾಗಿ ನಮೂದಾಗಿರುವ ಮತ್ತು ಈ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಣ ಪತ್ರ ಪಡೆದು, ಸಾಗುವಳಿ ಪತ್ರ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿ ಪತ್ರಗಳ ದಾಖಲೆಯನ್ನು ಸಲ್ಲಿಸಿ, ನೋಂದಾಯಿಸಿಕೊಳ್ಳಬೇಕಾಗಿದೆ.
ನಂತರ ಜಿಲ್ಲಾಡಳಿತ ರೈತರ ಮೊಬೈಲ್‍ಗೆ ಯಾವ ಅಕ್ಕಿ ಗಿರಣಿ ಮಾಲೀಕರ ಬಳಿ ಭತ್ತದ ಶ್ಯಾಂಪಲ್ ಕೊಂಡ್ಡೊಯ್ಯಬೇಕು ಎಂಬುದರ ಬಗ್ಗೆ ಎಸ್‍ಎಂಎಸ್ ಕಳುಹಿಸಲಿದೆ. ಬಳಿಕ ರೈತರು ತಗೆದುಕೊಂಡು ಹೋಗುವ ಭತ್ತದ ಮಾದರಿಯನ್ನು ನೂತನವಾಗಿ ನೇಮಕವಾಗಿರುವ ಅಸ್ಸೇಯರ್ ಗುಣಮಟ್ಟ ಪರೀಕ್ಷೆ ಮಾಡಲಿದ್ದಾರೆ. ನಂತರ ರೈತರು ತಮ್ಮ ಸ್ವಂತ ಚೀಲಗಳಲ್ಲಿ ಭತ್ತ ತುಂಬಿಕೊಂಡು ನಿಗದಿಯಾಗಿರುವ ಅಕ್ಕಿ ಗಿರಿಣಿಗೆ ಮಾರಾಟ ಮಾಡಿದ ಬಳಿಕ ಮೂರು ದಿನಗಳ ನಂತರ ರೈತರ ಖಾತೆಗೆ ಹಣ ಜಮೆಯಾಗಲಿದೆ. ಹೀಗೆ ಹಲವು ಕಠಿಣ ಷರತ್ತುಗಳನ್ನು ವಿಧಿಸಿರುವುದನ್ನು ಗಮನಿಸಿದರೆ, ಇದು ರಾಜ್ಯ ಸರ್ಕಾರದ ಕಣ್ಣೀರು ಒರೆಸುವ ತಂತ್ರವಾಗಿರುವಂತೆ ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣವೇ ಸರ್ಕಾರ ರಾಜ್ಯ ಸರ್ಕಾರ ಭತ್ತ ಖರೀದಿಗೆ ವಿಧಿಸಿರುವ ಷರತ್ತುಗಳನ್ನು ಸಡಿಲಗೊಳಿಸಿ, ಅಕ್ಕಿ ಗಿರಣಿಗಳಿಗೆ ರೈತರೇ ಭತ್ತ ತಂದು ಮಾರಾಟ ಮಾಡುವುದನ್ನು ರದ್ದು ಮಾಡಿ, ಹಿಂದೆ ಜಿಲ್ಲಾಡಳಿತವೇ ಖರೀದಿ ಕೇಂದ್ರ ಆರಂಭಿಸುತ್ತಿದ್ದ ಮಾದರಿಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ ಕೇಂದ್ರ ಸರ್ಕಾರ ಘೋಷಿಸಿರುವ 1770 ಕನಿಷ್ಠ ಬೆಂಬಲ ಬೆಲೆಯ ಜೊತೆಗೆ 230 ರೂ. ಪ್ರೋತ್ಸಾಹಧನ ಘೋಷಿಸಿ ಕ್ವಿಂಟಾಲ್ ಭತ್ತವನ್ನು 2000 ರೂ.ಗಳಂತೆ ಖರೀದಿಸಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ರಮೇಶ್ ನಾಯ್ಕ, ಎನ್.ರಾಜಶೇಖರ್, ಹೆಚ್.ಎನ್.ಶಿವಕುಮಾರ್, ಅಣಜಿ ಗುಡ್ಡೇಶ್, ವೆಂಕಟಗಿರಿ ನಾಯ್ಕ, ಸುರೇಶ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
