ಕರ್ನಾಟಕದ ಮೇಲೂ ಅನುಕಂಪ ತೋರಿಸಿ ಪ್ರಧಾನಿಗಳೇ: ಡಾ.ಜಿ. ಪರಮೇಶ್ವರ

ಬೆಂಗಳೂರು:

    ಬಿಹಾರದಲ್ಲಿನ ನೆರೆ ಪರಿಸ್ಥಿತಿಗೆ ಅನುಕಂಪ ವ್ಯಕ್ತಪಡಿಸಿರುವ ಪ್ರಧಾನಿ ಕರ್ನಾಟಕಕ್ಕೂ ಅನುಕಂಪ ತೋರಲಿ ಎಂದು
ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

    ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ನೆರೆ ಪರಿಸ್ಥಿತಿ ಉಂಟಾಗಿ ಇಷ್ಟು ದಿನ ಕಳೆದರೂ ಸಣ್ಣ ಪರಿಹಾರ ಮೊತ್ತವನ್ನೂ ಕೇಂದ್ರ ಬಿಡುಗಡೆ ಮಾಡಿಲ್ಲ. ಸಿಎಂ ಯಡಿಯೂರಪ್ಪ ಇದುವರೆಗೂ ರಾಜ್ಯದಿಂದ ನಿಯೋಗ ಕರೆದುಕೊಂಡು ಹೋಗುವ ಧೈರ್ಯ ಮಾಡಿಲ್ಲ.

    ಪ್ರಧಾನ ಮಂತ್ರಿ, ಕೇಂದ್ರ ಗೃಹ ಮಂತ್ರಿಗಳು ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಬೇರೆ ರಾಜ್ಯಕ್ಕೆ ತೋರಿದ ಅನುಕಂಪ ನಮಗೂ ತೋರಿಸಿ. ಯಡಿಯೂರಪ್ಪ ಆಶಾವಾದಿ. ಕೇಂದ್ರದಿಂದ ಹಣ ಬಿಡುಗಡೆಯಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಹಣ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಎಡವುತ್ತಿದ್ದಾರೆ ಎಂದು ಹೇಳಿದರು.

    ಪರಿಹಾರವಿರಲಿ ಕರ್ನಾಟಕದ ಸಿಎಂ ಎಂಬ ಗೌರವ ಕೂಡ ಯಡಿಯೂರಪ್ಪ ಅವರಿಗೇ ಸಿಕ್ಕಿಲ್ಲ. ಇನ್ನು ರಾಜ್ಯಕ್ಕೆ ಪರಿಹಾರ ಹೇಗೆ ತರುತ್ತಾರೋ ಗೊತ್ತಿಲ್ಲ ಎಂದರು.

    ಯಡಿಯೂರಪ್ಪ ಅವರ ತಂತಿ ಮೇಲೆ ನಡೆಯುತ್ತಿರುವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಂತಿ ಮೇಲೆ ನಡೆದರೆ ಯಾವ ಕಡೆಯಲ್ಲಾದರೂ ಬೀಳಬಹುದು ಎಂದು ವ್ಯಂಗ್ಯವಾಡಿದರು. ಅವರ ಈ ಹೇಳಿಕೆ ಸರಕಾರ ಯಾವ ವೇಳೆಯಲ್ಲಾದರೂ ಬೀಳಬಹುದು ಎಂಬುದನ್ನು ಸ್ವತಂ ಮುಖ್ಯಮಂತ್ರಿಗಳೇ ಒಪ್ಪಿದಂತಿದೆ. ಒಟ್ಟಿನಲ್ಲಿ ಸರಕಾರದಲ್ಲಿ ಸ್ಥಿರತೆ ಕಾಣುತ್ತಿಲ್ಲ. ಈ ಸರಕಾರದ ಮೇಲೆ ಜನರಿಗೆ ಭರವಸೆ ಇಲ್ಲ ಎಂದು ಹೇಳಿದರು.

ಪ್ರತ್ಯೇಕ ಜಿಲ್ಲೆ ಅನಿವಾರ್ಯ:

    ಆಡಳಿತಾತ್ಮಕ ದೃಷ್ಟಿಯಿಂದ ತುಮಕೂರು ಜಿಲ್ಲೆಯ ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವುದು ಅನಿವಾರ್ಯವಿದೆ.
ಆಡಳಿತಾತ್ಮಕ ದೃಷ್ಟಿಯಿಂದಲೇ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಲಾಗಿದೆ. ಇತ್ತೀಚೆಗೆ ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂಬ ಕೂಗುಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಧುಗಿರಿಯನ್ನೂ ಸಹ ಪ್ರತ್ಯೇಕ ಜಿಲ್ಲೆಯಾಗಿಸಿ ಎಂಬ ಒತ್ತಾಯವನ್ನು ಮಾಡಿದ್ದೇನೆ ಎಂದರು.

    ತುಮಕೂರಿನಲ್ಲಿ 11 ವಿಧಾನಸಭಾ ಕ್ಷೇತ್ರ ಹಾಗೂ 10 ತಾಲೂಕುಗಳಿವೆ. ನಾನು ಮಧುಗಿರಿಯಿಂದ ಶಾಸಕನಾಗಿದ್ದ ಸಂದರ್ಭದಲ್ಲಿಯೂ ಪ್ರತ್ಯೇಕ ಜಿಲ್ಲೆಯ ಕೂಗು ಇತ್ತು. ಮಧುಗಿರಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿ ಮಾಡಿದ್ದೇವೆ. ಅನೇಕ ಉಪವಿಭಾಗಾಧಿಕಾರಿಗಳ ಕಚೇರಿಗಳಿವೆ.

    ಪ್ರತ್ಯೇಕ ಜಿಲ್ಲೆಗೆ ಜನಾಭಿಪ್ರಾಯವೂ ಇದೆ. ಬಳ್ಳಾರಿ ಇತರೆ ಜಿಲ್ಲೆ ವಿಭಜನೆ ವೇಳೆ ನಮ್ಮ ಜಿಲ್ಲೆಯನ್ನು ಪರಿಗಣಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap