ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ ಬೆಂಬಲಿಸಿ

ದಾವಣಗೆರೆ:

  ಅಭಿವೃದ್ಧಿಯ ದೃಷ್ಟಿಯಿಂದ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡಿದಂತೆ, ಬರುವ ಪಾಲಿಕೆ ಸೇರಿದಂತೆ ಇನ್ನಿತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ ಮನವಿ ಮಾಡಿದರು.

  ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣಮಂಟಪದಲ್ಲಿ ಭಾನುವಾರ, ಲೋಕಸಭಾ ಚುನಾವಣೆ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು, ಮತದಾರರು ಹಾಗೂ ಅಭಿಮಾನಿಗಳಿಗಾಗಿ ಜಿಲ್ಲಾ ಬಿಜೆಪಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದಂತೆಯೇ, ಮುಂಬರುವ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಜನರು ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.

    ಬರೀ ಶಾಸಕರು, ಸಂಸದರೇ ಎಲ್ಲವನ್ನೂ ಮಾಡಲಾಗುವುದಿಲ್ಲ. ಅಭಿವೃದ್ಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಸಹ ಮಹತ್ವದ್ದಾಗಿದೆ. ಜಿಲ್ಲೆಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹೀಗೆ ಎಲ್ಲಾ ಕಡೆಯಲ್ಲೂ ಬಿಜೆಪಿ ಗೆಲುವು ಸಾಧಿಸಿದರೆ, ಅಭಿವೃದ್ಧಿಗೆ ವೇಗ ಸಿಗಲಿದೆ ಎಂದ ಅವರು, ಇತ್ತೀಚಿಗೆ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹರಿಹರದಲ್ಲಿ ಬಿಜೆಪಿಗೆ ಕೇವಲ 5 ಸ್ಥಾನ ಬಂದಿದೆ. ಹೀಗಾದರೆ, ಜನರ ಕೆಲಸ, ಕಾರ್ಯಗಳಾಗುವುದಿಲ್ಲ. ಆದ್ದರಿಂದ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬೆಂಬಲ ನೀಡುವ ಮೂಲಕ, ಜನರು ಬಿಜೆಪಿಗೆ ಇನ್ನಷ್ಟು ಬಲ ತುಂಬಬೇಕೆಂದು ಕಿವಿಮಾತು ಹೇಳಿದರು.

   ಇನ್ನೂ ಕೆಲವೇ ದಿನಗಳಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದ್ದು, ಆಯಾ ವಾರ್ಡ್‍ನಲ್ಲಿ ಕೆಲಸ ಮಾಡುವ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು. ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದೆ ಎಂದರು.

   ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಲ್ಲಿ ಕೆಲ ಗೊಂದಲ, ಲೋಪ-ದೋಷವಿರುವುದರಿಂದ ತೊಂದರೆಯಾಗುತ್ತಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ಮಾರ್ಟ್ ಸಿಟಿ ಕೆಲಸಗಳನ್ನೂ ಚುರುಕುಗೊಳಿಸಲಾಗುವುದು. ಸ್ಮಾರ್ಟ್ ಸಿಟಿ ಸಮಿತಿಯಲ್ಲಿ ಪಾಲಿಕೆ ಮೇಯರ್, ಆಯುಕ್ತರು, ಚುನಾಯಿತ ಪ್ರತಿನಿಧಿಗಳು, ಸ್ಥಳೀಯರು, ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಸದಸ್ಯತ್ವ ಹೊಂದಿದ್ದಾರೆ. ಸ್ಮಾರ್ಟ್ ಸಿಟಿ ಸಭೆಗಳಿಗೆ ಶಾಸಕರು, ಸಂಸದರು ಹೋಗಬಹುದಾದರೂ ಕಮಿಟಿಯಲ್ಲಿ ಸ್ಥಾನವಿರುವುದಿಲ್ಲ. ಆದ್ದರಿಂದ ಸ್ಮಾರ್ಟ್ ಸಿಟಿ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಪ್ರಸ್ತುತ ಜಿಲ್ಲಾದ್ಯಂತ ಕುಡಿಯುವ ನೀರಿನ ಹಾಹಾಕಾರವಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಕೆಲವೇ ದಿನಗಳಲ್ಲಿ ಚಾಲನೆ ದೊರೆಯಲಿದೆ. ಹರಿಹರದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ ಕೊಂಡಜ್ಜಿ ಕೆರೆ ತುಂಬಿಸುವುದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 22 ಕೆರೆ ಏತ ನೀರಾವರಿ ಯೋಜನೆ, ಹೊನ್ನಾಳಿ ಹಾಗೂ ಜಗಳೂರು ತಾಲೂಕಿನ ಕೆರೆ-ಕಟ್ಟೆ ತುಂಬಿಸಲು ಮೊದಲ ಆದ್ಯತೆ ನೀಡಲಾಗುವುದು. ಶುದ್ಧ ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಒತ್ತು ನೀಡಬೇಕಿದ್ದು, ಇದಕ್ಕೆ ಸ್ಥಳೀಯ ಶಾಸಕರು ಸಹಕಾರ ಕೊಡಬೇಕೆಂದು ಮನವಿ ಮಾಡಿದರು.

      ರೈತರ ಆದಾಯ ದ್ವಿಗುಣಗೊಳಿಸುವುದು, ಸರ್ವರಿಗೂ ಸೂರು ಒದಗಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ. ಈ ದಿಸೆಯಲ್ಲಿ ಎಲ್ಲ ರೈತರಿಗೆ ವರ್ಷಕ್ಕೆ 6,000 ರೂ. ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ. ಸಮರ್ಪಕ ವಿದ್ಯುತ್ ಪೂರೈಕೆ, ಬೆಳೆಗೆ ನೀರು, ಸೂಕ್ತ ಬೆಲೆ ನಿಗಧಿಪಡಿಸಲು ಮೋದಿಯವರು ಯೋಜನೆ ರೂಪಿಸಿದ್ದಾರೆಂದು ಮಾಹಿತಿ ನೀಡಿದರು.

      ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಮೋದಿಯವರ ನಾಯಕತ್ವದಲ್ಲಿ ಇಡೀ ದೇಶದಲ್ಲೇ ಬಿಜೆಪಿ ಪಕ್ಷ ಬಹುಮತದಿಂದ ಗೆದ್ದಿದೆ. ಕರ್ನಾಟಕದಲ್ಲೂ ಯಡಿಯೂರಪ್ಪನವರ ನೇತೃತ್ವದಲ್ಲಿ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಲಮತಾ ಸೇರಿ ಒಟ್ಟು 26 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬಂದೇ ಬರುತ್ತವೆ. ಶೀಘ್ರದಲ್ಲಿಯೇ ಮೈತ್ರಿ ಸರ್ಕಾರ ಪತನವಾಗಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗವುದು ನಿಶ್ಚಿತ ಎಂದರು.

      ರಾಜ್ಯದಲ್ಲಿ 26 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿಗೆ ಇನ್ನೂ ಎರಡು ಸಚಿವ ಸ್ಥಾನಗಳು ನೀಡಬೇಕಾಗಿತ್ತು. ನಾಲ್ಕು ಬಾರಿ ಆಯ್ಕೆಯಾದ ಜಿ.ಎಂ.ಸಿದ್ದೇಶ್ವರ್ ಅವರಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ, ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

     ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ರಾಜ್ಯದಲ್ಲಿ ಅಪವಿತ್ರ ಮೈತ್ರಿ ಇದೇ ಎಂಬ ಸಂದೇಶವನ್ನು ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ರಾಜ್ಯ ಸರ್ಕಾರಕ್ಕೆ ರವಾನಿಸಿದ್ದಾರೆ. ಆದರೂ ಸಸಹ ಯಾವುದೇ ಅಭಿವೃದ್ಧಿಗೆ ಕಾರ್ಯಗಳಿಗೆ ಸಮ್ಮಿಶ್ರ ಸರಕಾರ ಅಧಿಕಾರಕ್ಕಾಗಿ ಜೋತು ಬಿದ್ದಿದ್ದು, ಈ ಸರ್ಕಾರ ಕೇವಲ ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸಿದರು.

      ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಮುಂಬರುವ ಪಾಲಿಕೆಯ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಇದೇ ರೀತಿಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಪಾಲಿಕೆಯಲ್ಲಿಯೂ ಬಿಜೆಪಿ ಬಾವುಟ ಹಾರಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಸನ್ಮಾನಿಸಲಾಯಿತು.

      ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ, ಪ್ರೊ.ಎನ್.ಲಿಂಗಣ್ಣ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ್, ರಾಜನಹಳ್ಳಿ ಶಿವಕುಮಾರ್, ಬಿ.ರಮೇಶ ನಾಯ್ಕ, ಹೆಚ್.ಎನ್.ಶಿವಕುಮಾರ್, ಮುಕುಂದಪ್ಪ, ಅಣಬೇರು ಜೀವನಮೂರ್ತಿ, ಧನಂಜಯ್ ಕಡ್ಲೇಬಾಳ್, ಲೋಕಿಕೆರೆ ನಾಗರಾಜ, ಪ್ರಭು ಕಲಬುರ್ಗಿ, ಹೆಚ್.ಆನಂದಪ್ಪ, ಕೆ.ಹೇಮಂತ ಕುಮಾರ, ಡಾ.ಮಂಜುನಾಥ ಗೌಡ್ರು, ಮೆಳ್ಳೆಕಟ್ಟೆ ನಾಗರಾಜ್, ಟಿ.ಗುರುಸಿದ್ಧನಗೌಡ, ಎಲ್.ಡಿ.ಗೋಣೆಪ್ಪ, ಟಿಪ್ಪು ಸುಲ್ತಾನ್, ಸೊಕ್ಕೆ ನಾಗರಾಜ್, ಗಾಯತ್ರಿ ಸಿದ್ದೇಶ್, ಹೆಚ್.ಸಿ.ಜಯಮ್ಮ, ಶೈಲಜಾ ಬಸವರಾಜ್, ಮಮತಾ ಮಲ್ಲೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link