ಬೆಂಗಳೂರು
ಈಗಲ್ಟನ್ ರೆಸಾರ್ಟ್ನಲ್ಲಿ ನಡೆದಿರುವ ಶಾಸಕರಾದ ಗಣೇಶ್ ಹಾಗೂ ಆನಂದ್ಸಿಂಗ್ ಅವರ ನಡುವಣ ಹೊಡೆದಾಟ ಪ್ರಕರಣವನ್ನು ದಾಖಲಿಸಿ ವಿಚಾರಣೆ ನಡೆಸಲು ಬಿಡದಿ ಪೊಲೀಸರು ಮುಂದಾಗಿದ್ದಾರೆ.
ಶಾಸಕ ಗಣೇಶ್ನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ಸಿಂಗ್ ಬಗ್ಗೆ ಅಪೋಲೋ ಆಸ್ಪತ್ರೆ ತನ್ನ ಮೆಡಿಕೋ ಲೀಗಲ್ ಕೇಸ್(ಎಂಎಲ್ಸಿ)ನಲ್ಲಿ ಹಲ್ಲೆಯನ್ನು ಉಲ್ಲೇಖಿಸಿ ವರದಿಯನ್ನು ಶೇಷಾದ್ರಿಪುರಂ ಪೊಲೀಸರಿಗೆ ನೀಡಿದ್ದು ಅದನ್ನು ಬಿಡದಿ ಪೊಲೀಸರಿಗೆ ಕೃತ್ಯ ನಡೆದ ವ್ಯಾಪ್ತಿಗೆ ಬರುವ ಬಿಡದಿ ಪೊಲೀಸರಿಗೆ ವರ್ಗಾಯಿಸಲಾಗಿದೆ.
ಆಸ್ಪತ್ರೆ ನೀಡಿರುವ ಎಂಎಲ್ಸಿ ವರದಿ ಹಿನ್ನೆಲೆಯಲ್ಲಿ ಹಲ್ಲೆಗೊಳಗಾದ ಶಾಸಕ ಆನಂದ್ ಸಿಂಗ್ ಅವರಿಂದ ಘಟನೆಯ ಬಗ್ಗೆ ಮಾಹಿತಿ ಸಂಗ್ರಹ ದಾಖಲಿಸಲು ಪೊಲೀಸರು ಮುಂದಾಗಿದ್ದರು.ಆದರೆ ಗಾಯಗೊಂಡಿದ್ದ ಆನಂದ್ಸಿಂಗ್ ಆರೋಗ್ಯದಲ್ಲಿ ಇನ್ನೂ ಚೇತರಿಕೆ ಕಂಡಿರಲಿಲ್ಲ.ಹೀಗಾಗಿ ಆಸ್ಪತ್ರೆ ವೈದ್ಯರು ಆನಂದ್ ಸಿಂಗ್ ವಿಚಾರಣೆಗೆ ಅವಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.
ಆನಂದ್ ಸಿಂಗ್ ಆರೋಗ್ಯದಲ್ಲಿ ಇನ್ನೂ ಚೇತರಿಕೆ ಕಾಣಬೇಕಿದೆ. ಆದ್ದರಿಂದ ಸದ್ಯಕ್ಕೆ ಅವರ ಬಳಿ ಯಾರನ್ನು ಬಿಡುವುದಿಲ್ಲ ಎಂದು ವೈದ್ಯರು ಪೊಲೀಸರಿಗೆ ಹೇಳಿದ್ದಾರೆ.ವೈದ್ಯರ ಸೂಚನೆಯಂತೆ ಪೊಲೀಸರು ಆನಂದ್ ಸಿಂಗ್ ಹೇಳಿಕೆ ದಾಖಲಿಸದೇ ವಾಪಸ್ಸಾಗಿದ್ದಾರೆ.
ಒಂದು ವೇಳೆ ಈ ಘಟನೆ ಬಗ್ಗೆ ಆನಂದ್ ಸಿಂಗ್ ಹೇಳಿಕೆ ದಾಖಲಿಸಿದರೆ ಕಂಪ್ಲಿ ಶಾಸಕ ಗಣೇಶ್ ಗೆ ಹೊಸ ಸಂಕಷ್ಟ ಶುರುವಾಗಲಿದೆ. ಈಗಾಗಲೇ ಎಂಎಲ್ಸಿ ವರದಿಯಲ್ಲಿ ಗಂಭೀರವಾಗಿ ಹಲ್ಲೆಯಾಗಿದೆ ಎಂದು ನಮೂದಿಸಲಾಗಿದೆ.ಸದ್ಯಕ್ಕೆ ಆನಂದ್ ಸಿಂಗ್ ವಿಚಾರಣೆ ಬಳಿಕ ಪೊಲೀಸರು ದೂರು ಸ್ವೀಕರಿಸಿ ಪ್ರಕರಣ ದಾಖಲಿಸುತ್ತಾರೆ. ನಂತರ ಶಾಸಕ ಗಣೇಶ್ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಕುಟುಂಬಸ್ಥರ ಪಟ್ಟು
ಗಣೇಶ್ ವಿರುದ್ಧ ಕ್ರಮ ಕೈಗೊಳ್ಳಿ ಅಥವಾ ದೂರಿಗೆ ಅವಕಾಶ ಕೊಡಿ ಎಂದು ಆನಂದ್ ಸಿಂಗ್ ಕುಟುಂಬಸ್ಥರ ಪಟ್ಟು ಹಿಡಿದಿದ್ದಾರೆ. ಕುಟುಂಬಸ್ಥರು ಪಟ್ಟು ಹಿಡಿಯುತ್ತಿದ್ದಂತೆ ಅವರ ಮನವೊಲಿಕೆಗೆ ಕೈ ನಾಯಕರು ರಾತ್ರಿಯಿಂದ ಸರ್ಕಸ್ ಆರಂಭಿಸಿದ್ದಾರೆ. ದೂರು, ತನಿಖೆ ಎಂದು ಹೋದರೆ ಎಲ್ಲರಿಗೂ ಮುಜುಗರ ಆಗುತ್ತದೆ ಎಂದು ಹೇಳಿ ಆನಂದ್ ಸಿಂಗ್ ಜೊತೆ ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ. ಆದರೆ ಕುಟುಂಬದವರು ದೂರು ದಾಖಲಿಸಲೇಬೇಕು. ಗಣೇಶ್ ಮೇಲೆ ಕಾನೂನು ರೀತಿಯ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹೀಗಾಗಿ ಕುಟುಂಬದವರ ಮನವೊಲಿಸಲು ಕೈ ನಾಯಕರು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ