ಪ್ರಧಾನಿ ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು:ಡಾ.ಪರಮೇಶ್ವರ್ ವಾಗ್ದಾಳಿ

ತುಮಕೂರು:

      ರೈತರು, ಬಡವರ ಬಗ್ಗೆ ಚಿಂತಿಸದ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳಿಕೊಂಡೇ ಅಧಿಕಾರ ಮಾಡಿಕೊಂಡು ಬಂದರು. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

       ಗೊಲ್ಲ (ಯಾದವ) ಸಮುದಾಯ ಮುಖಂಡ ಜಿ.ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ಶಿರಾಗೇಟ್ ನಲ್ಲಿ ಆಯೋಜಿಸಿದ್ದ ಗೊಲ್ಲ ಸಮುದಾಯದ ಮುಖಂಡರುಗಳ ಚುನಾವಣಾ ನಿಮಿತ್ತ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರಿದ್ದಾರೆ. ಅವರಿಗಾಗಿ ನರೇಂದ್ರ ಮೋದಿ ಏನು ಮಾಡಿದ್ದಾರೆ. ಬಡ ರೈತನ ಸ್ಥಿತಿ ಚಿಂತಾಜನಕವಾಗಿದೆ. ಈ ಬಗ್ಗೆ ಯೋಚನೆ ಮಾಡಲಿಲ್ಲವೇಕೆ ಎಂದು ಪ್ರಶ್ನಿಸಿದರು.

       ಲೋಕಸಭಾ ಚುನಾವಣೆಗಳು ಘೋಷಣೆಯಾದ ಬಳಿಕ ನಡೆದ ಸೀಟು ಹಂಚಿಕೆಯಲ್ಲಿ ತುಮಕೂರಿನಲ್ಲಿ ಹಾಲಿ ನಮ್ಮ ಪಕ್ಷದ ಸಂಸದರೇ ಇದ್ದರು. ಆದರೆ ಸೀಟು ಹಂಚಿಕೆಯಾದಾಗ ಜೆಡಿಎಸ್‍ಗೆ ಈ ಕ್ಷೇತ್ರ ಬಿಟ್ಟುಕೊಟ್ಟ ಸಂದರ್ಭದಲ್ಲಿ ನಮಗೆ ತುಂಬಾ ಆತಂಕವಾಯಿತು. ಖುದ್ದು ದೇವೇಗೌಡರನ್ನೇ ಭೇಟಿ ಮಾಡಿ ಬರುವುದಾದರೆ ನೀವೇ ಬನ್ನಿ, ನಿಮ್ಮ ಬದಲಿಗೆ ಬೇರೆ ಯಾರಾದರೂ ಬರುವವರಿದ್ದರೆ ಕ್ಷೇತ್ರವನ್ನು ನಮಗೇ ಬಿಟ್ಟುಕೊಡಿ ಎಂದು ಮನವಿ ಮಾಡಿದ್ದೆವು.

        ಆನಂತರ ರಾಹುಲ್ ಗಾಂಧಿಯವರೇ ಕರೆ ಮಾಡಿ ದೇವೇಗೌಡರು ಯಾವ ಕ್ಷೇತ್ರ ಕೇಳುತ್ತಾರೋ ಆ ಕ್ಷೇತ್ರವನ್ನು ಬಿಟ್ಟುಕೊಡಿ ಎಂದರು. ಅದರಂತೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಮೈತ್ರಿ ಪಕ್ಷಗಳೆರಡೂ ಸೇರಿ ಈಗ ಪ್ರಚಾರಕ್ಕೆ ಬಂದಿದ್ದೇವೆ. ನಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಮೈತ್ರಿ ಪಕ್ಷದ ಅಭ್ಯರ್ಥಿಗೆ ನೀಡಿ ಗೆಲುವು ಸಾಧಿಸಲು ಅವಕಾಶ ಮಾಡಿಕೊಡಿ ಎಂದರು.

         ನಮ್ಮ ಸಮಾಜದಲ್ಲಿ ಅತ್ಯಂತ ಹಿಂದುಳಿದ ಸಮುದಾಯವೆಂದರೆ ಗೊಲ್ಲ ಸಮುದಾಯ. ನಾಗರಿಕತೆಯಿಂದ ಇನ್ನೂ ದೂರವೇ ಉಳಿದಿದೆ. ಎಲ್ಲರೂ ನಾಚೋಕು ಕಲಿತಿದ್ದರೆ ಈ ಸಮುದಾಯ ಇನ್ನು ಅಲ್ಲಿಯೇ ಇದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ಹೋಗುವ ವಾತಾವರಣ ನಿರ್ಮಾಣವಾಗಬೇಕು. ಈ ಸಮುದಾಯದಿಂದ ನಾನು ಮಧುಗಿರಿಯಲ್ಲಿ ಶಾಸಕನಾಗಲು ಸಾಧ್ಯವಾಯಿತು. ಋಣ ತೀರಿಸುವ ಜವಾಬ್ದಾರಿ ನನ್ನದಿದೆ ಎಂದರು.

         ಮಧುಗಿರಿ ಶಾಸಕನಾದಾಗ ಅಲ್ಲಿನ ಹಟ್ಟಿಗೆ ಹೋಗಿದ್ದಾಗ ನನ್ನನ್ನು ಆ ಜನ ನಂಬಿದ ರೀತಿ, ಇಂದಿಗೂ ಆ ಪ್ರೀತಿಯನ್ನು ಉಳಿಸಿಕೊಂಡಿರುವ ಉದಾಹರಣೆಗಳನ್ನು ಡಾ.ಜಿ.ಪರಮೇಶ್ವರ್ ಸ್ಮರಿಸಿಕೊಂಡರು. ಈ ಸಮುದಾಯದಲ್ಲಿ ರಾಜಕೀಯ ನಾಯಕರಿಲ್ಲ. ಎ.ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಿದಾಗ ಬೇರೆ ಪಕ್ಷಕ್ಕೆ ಹೋಗದೇ ಇದ್ದರೆ ಖಂಡಿತ ನಾನು ಅವರನ್ನು ಎಂಎಲ್‍ಸಿ ಮಾಡುತ್ತಿದ್ದೆ. ನಾನು ಆಗ ಕೆಪಿಸಿಸಿ ಅಧ್ಯಕ್ಷನಾಗಿದ್ದರೂ ಸಹ ಅವರಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗಲಿಲ್ಲ ಎಂಬ ನೋವು ನನಗಿದೆ. ಆದರೆ ನಾನಾಗ ಅಸಹಾಯಕನಾಗಿದ್ದೆ. ಒಂದು ವೇಳೆ ನನ್ನ ಮಾತು ಕೇಳಿದ್ದರೆ ಖಂಡಿತ ಇಂದು ಎಂಎಲ್‍ಸಿ ಆಗಿ ಇರುತ್ತಿದ್ದರು ಎಂದು ಸಭಿಕರಿಂದ ಬಂದ ಪ್ರಶ್ನೆಗಳಿಗೆ ಅವರು ಉತ್ತರಿಸಿ ಮಾತನಾಡಿದರು.

        ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದೇವೇಗೌಡರಿಂದ ಈ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಸಮುದಾಯಗಳು ಮನಸ್ಸು ಮಾಡಿ ಗೌಡರ ಗೆಲುವಿಗೆ ಸಹಕರಿಸಬೇಕು. ಆ ಮೂಲಕ ಹೊಸದೊಂದು ಬದಲಾವಣೆಗೆ ಎಲ್ಲರೂ ಕಾರಣರಾಗಬೇಕು ಎಂದರು.

         ಗುಬ್ಬಿ ಕ್ಷೇತ್ರದಲ್ಲಿ ನಾನು ಪ್ರಥಮ ಬಾರಿಗೆ ಪಕ್ಷೇತರನಾಗಿ ಸ್ಪರ್ಧೆ ಮಾಡಿದಾಗ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದವರೇ ಯಾದವರು. ಇವರ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.

       ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಶಾಸಕ ತಿಪ್ಪೇಸ್ವಾಮಿ, ವೀರಭದ್ರಯ್ಯ, ಮಾಜಿ ಶಾಸಕರುಗಳಾದ ಡಾ.ಎಸ್.ರಫೀಕ್ ಅಹಮದ್, ಕೆ.ಷಡಕ್ಷರಿ, ಹೆಚ್.ನಿಂಗಪ್ಪ, ಸುಧಾಕರಲಾಲ್, ಜೆಡಿಎಸ್ ವಕ್ತಾರ ರಮೇಶ್ ಬಾಬು, ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಮಾಜಿ ಅಧ್ಯಕ್ಷ ಕೆಂಚಮಾರಯ್ಯ, ಕೊಂಡವಾಡಿ ಚಂದ್ರಶೇಖರ್, ಜೆಡಿಎಸ್ ಕಾರ್ಯದರ್ಶಿ ಮಹಾಲಿಂಗಪ್ಪ, ವೀರಣ್ಣಗೌಡ, ಕಾಂಗ್ರೆಸ್ ಮುಖಂಡರುಗಳಾದ ಜಿ.ಚಂದ್ರಶೇಖರ ಗೌಡ, ಪುಟ್ಟರಾಜು, ಹೊನ್ನಗಿರಿಗೌಡ, ದೀಪು ಸೇರಿದಂತೆ ವಿವಿಧ ಮುಖಂಡರುಗಳು ಭಾಗವಹಿಸಿದ್ದರು.

ರಾಹುಲ್ ಆರ್ಡರ್

       ತುಮಕೂರು ಕ್ಷೇತ್ರದಲ್ಲಿ ದೇವೇಗೌಡರಿಗೆ ಸೀಟು ಹಂಚಿಕೆಯಾಗಲು ರಾಹುಲ್ ಗಾಂಧಿಯವರ ಆರ್ಡರ್ ಕಾರಣ. ಹಾಲಿ ಸಂಸದರಿಗೆ ಟಿಕೆಟ್ ನೀಡಬೇಕೆಂದು ನಾವು ಒತ್ತಾಯಿಸುತ್ತಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರೇ ಕರೆ ಮಾಡಿ ದೇವೇಗೌಡರು ಯಾವ ಕ್ಷೇತ್ರ ಕೇಳುತ್ತಾರೋ ಅದನ್ನು ಅವರಿಗೆ ಬಿಟ್ಟುಕೊಡಿ ಎಂದರು. ಅವರ ಮಾತನ್ನು ನಾವು ಕೇಳಬೇಕಲ್ಲವೇ? ನಾವೀಗ ಮೈತ್ರಿ ಧರ್ಮ ಪಾಲಿಸಿಕೊಂಡು ನಿಮ್ಮ ಮುಂದೆ ಬಂದಿದ್ದೇವೆ.
        ಮಧುಗಿರಿ ಶಾಸಕರಾಗುವ ಸಂದರ್ಭದಲ್ಲಿ ಗೊಲ್ಲರಹಟ್ಟಿಗಳಿಗೆ ಹೋಗಿ ಮತ ಯಾಚನೆ ಮಾಡಿದ ಸಂದರ್ಭ, ಆನಂತರ ಅವರು ತೋರಿಸಿದ ಪ್ರೀತಿ, ಪ್ರತಿವರ್ಷ ಆ ಹಟ್ಟಿಗಳ ಬೂತ್‍ಗಳಲ್ಲಿ ಸಂಪೂರ್ಣವಾಗಿ ನನ್ನ ಪರ ಮತಗಳು ಬರುತ್ತಿದ್ದ ರೀತಿ ಇವೆಲ್ಲವನ್ನೂ ಪರಮೇಶ್ವರ್ ವಿವರಿಸುತ್ತಿದ್ದರು. ತಕ್ಷಣವೇ ಮಾಧ್ಯಮದವರತ್ತ ನೋಡಿ ಇವೆಲ್ಲವನ್ನೂ ಬರೆಯಬೇಡ್ರಿ, ನೀವು ಪ್ರೆಸ್‍ನವರು ನಂಬೋಕಾಗೋಲ್ಲ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap