ದಾವಣಗೆರೆ:
ಮಹಾತ್ಮ ಗಾಂಧೀಜಿಯವರ ಇಚ್ಛೆಯಂತೆ ನೆಹರು ದೇಶದ ಪ್ರಪ್ರಥಮ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿರುವುದನ್ನು ಪ್ರಶ್ನಿಸುವ ಮೂಲಕ ಪ್ರಧಾನಿ ನರೇಂದ್ರ ಗಾಂಧೀಜಿ ಅವರಿಗೆ ಅಪಮಾನಿಸುತ್ತಿದ್ದಾರೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಆರೋಪಿಸಿದ್ದಾರೆ.
ನಗರದ ಎಂ.ಸಿ.ಸಿ. ‘ಎ’ ಬ್ಲಾಕ್ನಲ್ಲಿರುವ ತಮ್ಮ ಗೃಹಕಛೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ಏರ್ಪಡಿಸಿದ್ದ ನೆಹರುರವರ 130ನೇ ಜನ್ಮ ದಿನಾಚರಣೆಯಲ್ಲಿ ನೆಹರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಪ್ರಧಾನಿಯಾಗಿ ಮೋದಿ ಅಧಿಕಾರಕ್ಕೆ ವಹಿಸಿದ ದಿನದಿಂದಲೂ ಇಂದಿನ ವರೆಗೆ, ನೆಹರು ಮನೆತನಕ್ಕೆ ಅಗೌರವ ತೋರಿಸುವ ಮೂಲಕ ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.
ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ನೆಹರು ಕುಟುಂಬರವರನ್ನು ಅಗೌರವಿಸುತ್ತಿರುವ ಬಿಜೆಪಿಗೆ ಬರಲಿರುವ ಚುನಾವಣೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಅವರು, ಪಂಡಿತ್ ಜವಹರಲಾಲ್ ನೆಹರುರವರ ದೇಶಸೇವೆ ಅನನ್ಯವಾಗಿದ್ದು, ಯಾರೂ ಏನೇ ಅಪಪ್ರಚಾರ ಮಾಡಿದರೂ ಈ ದೇಶದ ಜನತೆ ಸೂರ್ಯ ಚಂದ್ರರಿರುವ ವರೆಗೂ ನೆಹರು ಮನೆತನವನ್ನು ಮರೆಯಲಾರರು ಎಂದರು.
ಅಗರ್ಭ ಶ್ರೀಮಂತ ಕುಟುಂಬದಲ್ಲ್ಲಿ ಜನಿಸಿದ ನೆಹರು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಭಾರತಕ್ಕೆ ಮರಳಿದಾಗ ಬ್ರಿಟೀಷ್ ದಬ್ಬಾಳಿಕೆಯಲ್ಲಿ ದೇಶ ನಲುಗಿತ್ತು. ದೇಶದ ಸ್ವತಂತ್ರ್ಯಕ್ಕಾಗಿ ರಾಷ್ಟ್ರಪಿತ ಮಹಾತ್ಮಗಾಂಧಿಜಿಯವರ ನೇತೃತ್ವದಲ್ಲಿ ದೇಶಾದ್ಯಂತ ದೊಡ್ಡ ಹೋರಾಟ ನಡೆದಿತ್ತು. ನೆಹರುರವರು ಗಾಂಧಿಜಿಯವರ ಪರಮ ಶಿಷ್ಯರಾಗಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಸ್ವಾತಂತ್ರ್ಯ ಹೋರಾಟದಲ್ಲಿ ನೆಹರುರವರು 8 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದರು. ಅವರ ಭವ್ಯ ಬಂಗಲೆ ಆನಂದ ಭವನವನ್ನು ಸ್ವಾತಂತ್ರ್ಯ ಹೋರಾಟದ ಕೇಂದ್ರವಾಗಿ ಮಾರ್ಪಡಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿವರೊಡನೆ ನೆಹರುರವರು ಸತ್ಯ, ಧರ್ಮ, ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಪಡೆಯಲು ಅತ್ಯಂತ ಯಶಸ್ವಿಯಾಗಿ ದುಡಿದಿದ್ದರು ಎಂದು ಸ್ಮರಿಸಿದರು.
ಭಾರತ ಸ್ವಾತಂತ್ರ್ಯಗೊಂಡ ಮೇಲೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮನದಾಳದಂತೆ ರಾಷ್ಟ್ರದ ಪ್ರಪ್ರಥಮ ಪ್ರಧಾನ ಮಂತ್ರಿ ಹುದ್ದೆಯನ್ನು ಅಲಂಕರಿಸಿ, ಸತತವಾಗಿ 17 ವರ್ಷಗಳ ಕಾಲ ದೇಶದ ಸರ್ವತೋಮುಖ ಅಭಿವೃದ್ದಿಗೆ ತಮ್ಮನ್ನು ಸಮರ್ಪಿಸಿಕೊಂಡು ನವಭಾರತ ನಿರ್ಮಾಣಕ್ಕೆ ಶ್ರಮಿಸಿದ್ದರು ಎಂದು ನೆನಪಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಅಲ್ಲಾವಲ್ಲಿ ಗಾಜಿಖಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಶ್ರಫ್ ಅಲಿ, ಡಿ.ಶಿವಕುಮಾರ್, ಹೆಚ್.ರಮೇಶ್, ಮಂಜುನಾಥ್, ಎಸ್.ಪಿ.ಎಸ್ ನಗರದ ಹೆಚ್ ಹರೀಶ್, ಅಬ್ದುಲ್ ಜಬ್ಬಾರ್, ಲಿಯಾಖತ್ ಅಲಿ, ಹೆಚ್.ಕೆ. ಮುಶಾರಫ್, ಮಮ್ತಾಜ್ ಬೇಗಂ, ರಾಜೇಶ್ವರಿ ಉಮೇಶ್, ಖಾಜಿ ಖಲೀಲ್, ಸಲೀಮ್ ಜಾವಿದ್, ಹೆಲ್ಪ್ ಲೈನ್ ರಹಮತ್ತ್ವುಲ್ಲಾ, ಕೆ.ಜಿ. ರಹಮತ್ವುಲ್ಲಾ, ಬಾಬು, ಭೀಮೇಶ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ