ತುಮಕೂರು
ಪ್ರಧಾನಿ ನರೇಂದ್ರ ಮೋದಿವರು ಜನವರಿ 3ರಂದು ತುಮಕೂರಿಗೆ ಆಗಮಿಸಿ, ಎರಡನೇ ಹಂತದ ಕೃಷಿ ಸಮ್ಮಾನ್ ಯೋಜನೆಯನ್ನು ಅನುಷ್ಠಾನಗೊಳಿಸುವರು. ಇದರ ಅಂಗವಾಗಿ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ನಗರಕ್ಕೆ ಆಗಮಿಸಿದ್ದ ಸಚಿವರು, ಸಮಾವೇಶ ನಡೆಸಲು ಉದ್ದೇಶಿಸಿರುವ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಭೇಟಿ ನೀಡಿ, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಕಾರ್ಯಕ್ರಮದ ಸಿದ್ಧತೆ ಕುರಿತು ಚರ್ಚೆ ನಡೆಸಿದರು.
ಅಂದು ಬೆಳಿಗ್ಗೆ ಮೋದಿಯವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಮಠದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ನಂತರ ರೈತರ ಸಮಾವೇಶದಲ್ಲಿ ಭಾಗವಹಿಸಿ ಎರಡನೇ ಹಂತದ ಕೃಷಿ ಸಮ್ಮಾನ್ ಯೋಜನೆಗೆ ಚಾಲನೆ ನೀಡುವರು. ಸಮಾವೇಶದಲ್ಲಿ ಸುಮಾರು 50 ಸಾವಿರ ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ರೈತರ ಆದಾಯ ದ್ವಿಗುಣಗೊಳಿಸುವ ಮೋದಿಯವರ ಆಶಯದ ಯೋಜನೆಗಳಲ್ಲಿ ಕೃಷಿ ಸಮ್ಮಾನ್ ಯೋಜನೆಯೂ ಮಹತ್ವವಾದದ್ದು ಎಂದ ಸಚಿವರು, ಈ ಬಾರಿ ಈ ಯೋಜನೆಗೆ ಪ್ರಧಾನಿಯವರು ತುಮಕೂರಿನಲ್ಲಿ ಚಾಲನೆ ನೀಡುತ್ತಿರುವುದು ವಿಶೇಷ ಎಂದರು.
ಪೌರತ್ವ ತಿದ್ದುಪಡಿ ಮಸೂದೆ ಬಗ್ಗೆ ಕಾಂಗ್ರೆಸ್‍ನವರು ತಪ್ಪು ತಿಳುವಳಿಕೆ ಹರಡಿ ಜನರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ಜನರಿಗೆ ಈ ಮಸೂದೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ರಾಜ್ಯಾದ್ಯಂತ ಪ್ರಚಾರ ಅಭಿಯಾನ ಆರಂಭಿಸಿ, ಪೌರತ್ವ ತಿದ್ದುಪಡಿ ಮಸೂದೆ
ಅನುಷ್ಠಾನಗೊಳಿಸುವುದಾಗಿ ಹೇಳಿದರು. ಜೊತೆಗೆ ತನ್ನ ಪಕ್ಷದಿಂದಲೂ ಪ್ರಚಾರ ಕಾರ್ಯ ಶುರು ಮಾಡುವುದಾಗಿ ತಿಳಿಸಿದರು.
ಪೌರತ್ವ ಮಸೂದೆ ವಿರುದ್ಧದ ಪ್ರತಿಭಟನೆಗಳು ಮುಗಿದು ರಾಜ್ಯದಲ್ಲಿ ಈಗ ಶಾಂತ ವಾತಾವರಣವಿದೆ. ಮಂಗಳೂರು ಗೋಲಿ ಬಾರ್ ಪ್ರಕರಣ ಬಗ್ಗೆ ತನಿಖೆ ನಡೆಸಲಾಗುತ್ತದೆ. ಅಮಾಯಕರ ಮೇಲೆ ಗೋಲಿಬಾರ್ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ, ಬೆಂಕಿ ಹಚ್ಚುವವರು, ಕಲ್ಲು ತೂರುವವರು, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಪೆಟ್ರೋಲ್ ಬಾಂಬ್ ಎಸೆಯುವವರು ಅಮಾಯಕರೇ ಎಂದು ಸಚಿವ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ಕೇಳಿದರು.
ಎಲ್ಲದರ ತನಿಖೆ ನಡೆಯುತ್ತದೆ, ತನಿಖೆ ನಂತರ ಸತ್ಯಾಂಶ ಗೊತ್ತಾಗುತ್ತದೆ ಎಂದು ಹೇಳಿದರು.ಶಾಸಕ ಜಿ .ಬಿ. ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಡಾ. ಹುಲಿನಾಯ್ಕರ್, ಸುರೇಶ್‍ಗೌಡ, ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್, ಎಸ್ಪಿ ಡಾ. ವಂಶಿಕೃಷ್ಣ, ಅಡಿಷನಲ್ ಎಸ್ಪಿ ಉದೇಶ್ ಮತ್ತಿತರರು ಹಾಜರಿದ್ದರು.