ಮಧುಗಿರಿ
ಪರಿಶಿಷ್ಟ ಜಾತಿ ವರ್ಗಗಳ ಸರ್ಕಾರಿ ನೌಕರರ ಸಮನ್ವಯ ಸಮಿತಿಯಿಂದ ತುಮಕೂರು ಜಿಲ್ಲೆಯಿಂದ ಚುನಾಯಿತರಾಗಿ ಉಪಮುಖ್ಯಮಂತ್ರಿಗಳಾಗಿರುವ ಡಾ. ಜಿ.ಪರಮೇಶ್ವರ, ಕಾರ್ಮಿಕ ಸಚಿವರಾದ ವೆಂಕಟರಮಣಪ್ಪ, ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್ ಹಾಗೂ ಎಲ್ಲ ಚುನಾಯಿತ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭವನ್ನು ನ. 1 ರಂದು ತುಮಕೂರಿನ ಎಸ್.ಐ.ಟಿ.ಯ ಬಿರ್ಲಾ ಆಡಿಟೋರಿಯಂನಲ್ಲಿ ಏರ್ಪಡಿಸಲಾಗಿದೆ.
ಎಲ್ಲಾ ಪರಿಶಿಷ್ಟ ಜಾತಿ ವರ್ಗಗಳ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು, ಪರಿಶಿಷ್ಟ ಜಾತಿ ವರ್ಗಗಳ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ, ಜಿಲ್ಲಾ ಕಾರ್ಯದರ್ಶಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ತಿಳಿಸಿದ್ದಾರೆ.
ಅವರು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸಮನ್ವಯ ಸಮಿತಿಯಿಂದ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಿಂದ ಆಯ್ಕೆಯಾದ ಉಪಮುಖ್ಯಮಂತ್ರಿಗಳು, ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುವ ಮೂಲಕ ಎಸ್ಸಿ/ಎಸ್ಟಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ಸಹಕಾರಿಯಾಗಲಿದೆ. ಪರಿಶಿಷ್ಟ ಜಾತಿ ವರ್ಗಗಳ ಸರ್ಕಾರಿ ನೌಕರರಿಗೆ
ಸಂವಿಧಾನಬದ್ದವಾಗಿ ಲಭ್ಯವಾಗಬೇಕಾದ ಸವಲತ್ತುಗಳನ್ನು ದೊರಕಿಸುವುದು, ಬಡ್ತಿ ಮೀಸಲಾತಿಯನ್ನು ನೀಡಿ ಅವರ ಹಿತರಕ್ಷಣೆ ಮಾಡುವುದು, ಬ್ಯಾಕ್‍ಲಾಗ್ ಹುದ್ದೆಗಳನ್ನು ತುಂಬುವುದು ಸೇರಿದಂತೆ ಎಸ್ಸಿ/ಎಸ್ಟಿ ಸರ್ಕಾರಿ ನೌಕರರಿಗೆ ಬಡ್ತಿ ಮತ್ತಿತರ ತಾರತಮ್ಯಗಳನ್ನು ಸರಿಪಡಿಸಲು ಕೋರಲಾಗುವುದು ಎಂದು ತಿಳಿಸಿದರು.
ಎಲ್ಲ ಎಸ್ಸಿ/ಎಸ್ಟಿ ಸರ್ಕಾರಿ ನೌಕರರು ಒಂದೆಡೆ ಸೇರುವ ಮೂಲಕ ಐಕ್ಯತೆಯನ್ನು ಮೂಡಿಸಿ, ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ದಿ ಹೊಂದಲು ಸಹಕಾರಿಯಾಗಲಿದೆ. ಸಮಾರಂಭಕ್ಕೆ ಆಗಮಿಸುವ ಎಸ್ಸಿ/ಎಸ್ಟಿ ಸರ್ಕಾರಿ ನೌಕರರಿಗೆ ಡಿ.ಡಿ.ಪಿ.ಐ ಕಚೇರಿ ಬಳಿ ಬೆಳಗ್ಗೆ 11 ಗಂಟೆಗೆ ಬಸ್ಸಿನ ಸೌಲಭ್ಯ ಒದಗಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ/ಎಸ್ಟಿ ಸರ್ಕಾರಿ ನೌಕರರು ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದ್ದಾರೆ.
ಸಭೆಯಲ್ಲಿ ತಾಲ್ಲೂಕು ಸಮನ್ವಯ ಸಮಿತಿ ಸದಸ್ಯರಾದ ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹಯ್ಯ, ಎಸ್.ಎನ್. ಹನುಮಂತರಾಯಪ್ಪ, ಸಂಜಯ್, ಸಿ.ರಾಮಣ್ಣ, ಫಣೀಂದ್ರನಾಥ್, ಕಾಮರಾಜು, ನರಸಿಂಹಮೂರ್ತಿ ಟಿ.ಎನ್., ರಾಘವೇಂದ್ರ, ಚಿಕ್ಕರಂಗಪ್ಪ, ರಾಜು ಮತ್ತಿತರ ನೌಕರರು ಭಾಗವಹಿಸಿದ್ದರು.
