ಅಪಘಾತ ನಿಯಂತ್ರಣಕ್ಕೆ ಸರ್ವ ಸನ್ನದ್ಧವಾದ ಪೊಲೀಸರು…!!!

ಚಳ್ಳಕೆರೆ

      ಕಳೆದ ಹಲವಾರು ವರ್ಷಗಳಿಂದ ಚಳ್ಳಕೆರೆ ತಾಲ್ಲೂಕಿನ ವೃತ್ತ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಪಘಾತಗಳು ಹಾಗೂ ದುರ್ಮರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾಯೋನ್ಮುಖವಾಗಿದ್ದು, ಪ್ರಸ್ತುತ ಶ್ರೀರಂಗಪಟ್ಟಣ-ಬೀದರ್‍ನ ರಾಷ್ಟ್ರೀಯ, ರಾಜ್ಯ ಹೆದ್ದಾರಿ 150(ಎ)ವ್ಯಾಪ್ತಿಯಲ್ಲಿ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸನ್ನದ್ದವಾಗಿದೆ.

     ಕಳೆದ ವರ್ಷ ನಡೆದ ಅಪಘಾತಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್, ಹೆಚ್ಚುವರಿ ರಕ್ಷಣಾಧಿಕಾರಿ ಮಹಲಿಂಗ ನಂದಗಾವಿ ಮಾರ್ಗದರ್ಶನದಲ್ಲಿ ಉಪವಿಭಾಗದ ಡಿವೈಎಸ್ಪಿಯವರ ನೇತೃತ್ವದಲ್ಲಿ ಅಪಘಾತ ನಡೆಯುವ ಸ್ಥಳಗಳನ್ನು ಗುರುತಿಸಿ ಅವುಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಾಯೋನ್ಮುಖವಾಗುತ್ತಿದೆ ಎಂದು ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ತಿಳಿಸಿದರು.

      ಅವರು, ಮಂಗಳವಾರ ತಮ್ಮ ವೃತ್ತ ವ್ಯಾಪ್ತಿಯ ಹೆಗ್ಗೆರೆ ಗ್ರಾಮದ ಕ್ರಾಸ್‍ನಿಂದ ತಳಕು ಠಾಣಾ ವ್ಯಾಪ್ತಿಯ ಗರಣಿ ಕ್ರಾಸ್ ಬಳಿ ಬರುವ ಅಪಘಾತಗಳ ವಲಯಗಳನ್ನು ಗುರುತಿಸಿ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಮಕ್ಷಮದಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಅವಶ್ಯವಿರುವ ಹಲವಾರು ಕ್ರಮಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿ ನಡೆಯುವ ಅಪಘಾತಗಳನ್ನು ನಿಯಂತ್ರಣಗೊಳಿಸಲು ಹೆಚ್ಚು ಉಪಯುಕ್ತವಾಗುತ್ತದೆ ಎಂದಿದ್ಧಾರೆ.

     ಪ್ರತಿವರ್ಷ ಸರಾಸರಿ ಈ ಭಾಗದಲ್ಲಿ 300ಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ ಭೀಕರ ರಸ್ತೆ ಅಪಘಾತ ಹಾಗೂ ಲಘು ವಾಹನಗಳ ಡಿಕ್ಕಿಯೂ ಸೇರಿದ್ದು ನೂರಾರು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿರುವುದಲ್ಲದೆ, 500ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿ ಚಿಕಿತ್ಸೆ ಪಡೆದಿರುತ್ತಾರೆ. ಹೆಚ್ಚಿನ ಅಪಘಾತಗಳು ಸಂಜೆಯಿಂದ ಬೆಳಗಿನ ಜಾವದ ತನಕ ನಡೆಯುತ್ತಿದ್ದು ಹಗಲು ವೇಳೆಯಲ್ಲಿ ಮಾತ್ರ ಹೆಚ್ಚಿನ ಅಪಘಾತಗಳು ಕಂಡು ಬಂದಿಲ್ಲ.

       ಈ ಹಿನ್ನೆಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ರಾದೇಶಿಯ ವ್ಯವಸ್ಥಾಪಕರಿಗೆ ಪತ್ರ ಬರೆದು ಅಪಘಾತಗಳ ನಿಯಂತ್ರಣ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ವಿಷಯಕ್ಕೆ ಸಂಬಂಧಪಟ್ಟಂತೆ ಮಂಗಳವಾರ ಪ್ರಾಧಿಕಾರದ ಇಂಜಿನಿಯರ್ ಪ್ರವೀಣ್‍ಕುಮಾರ್, ವೃತ್ತ ನಿರೀಕ್ಷ ಎನ್.ತಿಮ್ಮಣ್ಣ ಅಪಘಾತ ನಡೆಯುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

      ಹೆಗ್ಗೆರೆ ಗೇಟ್, ಸಾಣೀಕೆರೆ, ಗೋಪನಹಳ್ಳಿ ಕ್ರಾಸ್, ಹೊಟ್ಟೆಪ್ಪನಹಳ್ಳಿ ಕ್ರಾಸ್, ಲಕ್ಷ್ಮೀಪುರ ಗೇಟ್, ನಗರಂಗೆರೆ ಗೇಟ್, ಬಳ್ಳಾರಿ ರಸ್ತೆ ಚಳ್ಳಕೆರೆಯಮ್ಮ ದೇವಸ್ಥಾನ ಸೇತುವೆ, ನಾಯಕನಹಟ್ಟಿ ಕ್ರಾಸ್, ಬುಡ್ನಹಟ್ಟಿ ಬಸ್ ನಿಲ್ದಾಣ, ಚಿಕ್ಕಮ್ಮನಹಳ್ಳಿ ಬಸ್ ನಿಲ್ದಾಣ, ಗಿರಿಯಮ್ಮನಹಳ್ಳಿ ಬಸ್ ನಿಲ್ದಾಣ, ತಳಕು, ನಾಯಕನಹಟ್ಟಿ, ಪರಶುರಾಮಪುರ ವ್ಯಾಪ್ತಿಯ ಅಪಘಾತ ಸ್ಥಳಗಳನ್ನು ಪರಿಶೀಲನೆ ನಡೆಸಿದರು.

      ಈ ಸಂದರ್ಭದಲ್ಲಿ ಅವರು ಕೆಲವೆಡೆ ಬಿಳಿ ಬಣ್ಣದ ಎಚ್ಚರಿಕೆ ಮಾಹಿತಿ ಫಲಕ ಹಾಗೂ ರಿಫ್ಲೆಕ್ಟಿಂಗ್ ಲೈಟ್, ಮಿರರ್, ಹಂಪ್ಸ್ ನಾಮಫಲಕ ಅಳವಡಿಸುವ ಬಗ್ಗೆ ಮುಕ್ತವಾಗಿ ಚರ್ಚಿಸಿ ಈ ಬಗ್ಗೆ ಅಧಿಕಾರಿಗಳಿಗೆ ವರದಿ ನೀಡಿ ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ಧಾರೆ.
ಒಟ್ಟಿನಲ್ಲಿ ಚಳ್ಳಕೆರೆ ವೃತ್ತ ವ್ಯಾಪ್ತಿಯಲ್ಲಿ ನಡೆಯುವ ಅಪಘಾತಗಳು ನಿಯಂತ್ರಣಗೊಂಡಲ್ಲಿ ನೂರಾರು ಜನರ ಪ್ರಾಣವನ್ನು ರಕ್ಷಣೆ ಮಾಡಿದಂತಾಗುತ್ತದೆ.

       ವಿಶೇಷವಾಗಿ ಸಂಜೆಯಿಂದ ಬೆಳಗಿನ ತನಕ ಒಮ್ಮೆಮ್ಮೆ ಒಂದೇ ರಾತ್ರಿಯಲ್ಲಿ ಎರಡ್ಮೂರು ಅಪಘಾತಗಳು ನಿರಂತರವಾಗಿ ನಡೆದು ಹಲವರು ಪ್ರಾಣವನ್ನು ಕಳೆದುಕೊಂಡ ಉದಾಹರಣೆಗಳು ಹಲವಾರು ಇವೆ. ಅಪಘಾತ ನಡೆದ ಕೂಡಲೇ ಸಾರ್ವಜನಿಕವಾಗಿ ಪೊಲೀಸ್ ಇಲಾಖೆಯ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಈ ಬಗ್ಗೆ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡರೂ ಸಹ ಅಪಘಾತಗಳ ನಿಯಂತ್ರಣವಾಗಿಲ್ಲ.

     ರಾತ್ರಿವೇಳೆ ಸಂಚರಿಸುವ ವಾಹನಗಳಿಗೆ ರಿಪ್ಲೆಕ್ಟರ್ ಲೈಟ್ ಹಾಗೂ ಮಿರರ್ ಕಂಡು ಬಂದಲ್ಲಿ ವಾಹನದ ವೇಗವನ್ನು ನಿಯಂತ್ರಿಸಿ ಅಪಘಾತಗಳನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ವಾಹನ ಚಾಲಕರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮನವಿ ಮಾಡಿದ್ಧಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap