ಪೊಲೀಸರಿಂದ ಪ್ರತಿಭಟನಾಕಾರರ ಬಂಧನ

ಚಳ್ಳಕೆರೆ

      ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಬುಧವಾರ ಇಲ್ಲಿನ ರೈತ ಸಂಘ, ಹಮಾಲರ ಸಂಘ ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಭಾರತ ಬಂದ್ ಹಿನ್ನೆಲೆಯಲ್ಲಿ ನೆಹರೂ ವೃತ್ತದಲ್ಲಿ ಪ್ರತಿಭಟಿಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿಸಿದರು.

     ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ ಕೆಲವು ಅಂಗಡಿ, ಹೋಟೆಲ್ ಮುಚ್ಚಿದ್ದು, ಈ ಬಗ್ಗೆ ಹೆಚ್ಚು ಪ್ರತಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಎಲ್ಲರೂ ತನ್ನ ಅಂಗಡಿಹೋಟೆಲ್‍ಗಳನ್ನು ತೆರೆದು ವ್ಯಾಪಾರ ಪ್ರಾರಂಭಿಸಿದರು. ಬಸ್, ಆಟೋ ಸಂಚಾರ ಎಂದಿನಂತೆ ಇತ್ತು. ಭಾರತ್ ಬಂದ್‍ಗೆ ಪ್ರಕ್ರಿಯ ನಿರಾಸವಾಗಿತ್ತು. ಶಾಲಾ, ಕಾಲೇಜುಗಳು ಎಂದಿನಂತೆ ನಡೆದವು.

     ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಸುಮಾರು 400ಕ್ಕೂ ಹೆಚ್ಚು ಕಾರ್ಮಿಕರು, ರೈತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮೆರವಣಿಗೆ ಮೂಲಕ ನೆಹರೂ ಸರ್ಕಲ್‍ಗೆ ಆಗಮಿಸಿ ಹರಿಪ್ರಸಾದ್ ಹೋಟೆಲ್ ಮುಂಭಾಗದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮೊದಲೇ ಮಾಹಿತಿ ನೀಡಿ ರಸ್ತೆ ಬಂದ್ ಮಾಡುವುದು ವಾಹನಗಳ ಓಡಾಟ ತಡೆಯುವುದು, ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು.

     ಆದರೆ, ಬೆಳಗ್ಗೆ ಸುಮಾರು 11ರ ಸಮಯದಲ್ಲಿ ಪ್ರತಿಭಟನಕಾರರು ಇಲ್ಲಿನ ನೆಹರೂ ವೃತ್ತದಲ್ಲಿ ವಾಹನಗಳನ್ನು ತಡೆಯಲು ಪ್ರಯತ್ನಿಸಿದರು. ಇದೇ ಸಂದರ್ಭದಲ್ಲಿ ಪೊಲೀಸರು ರಸ್ತೆ ತಡೆಯದಂತೆ ಸೂಚನೆ ನೀಡಿದರೂ ಆದರೂ ಸಹ ಪೊಲೀಸರ ಸೂಚನೆಯನ್ನು ಲೆಕ್ಕಿಸದ ಪ್ರತಿಭಟನಕಾರರು ರಸ್ತೆ ತಡೆಗೆ ಮುಂದಾದರು. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ರಾಜ್ಯ ಕಾರ್ಯದರ್ಶಿ ರೆಡ್ಡಿಹಳ್ಳಿ ವೀರಣ್ಣ ಸೇರಿದಂತೆ ಹಲವಾರು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ವ್ಯಾನ್‍ನಲ್ಲಿ ಕರೆದ್ಯೊಯಲು ಯತ್ನಿಸಿದಾಗ ಕೆಲವು ರೈತ ಮುಖಂಡರು ವ್ಯಾನ್ ಮುಂದಕ್ಕೆ ಚಲಿಸದಂತೆ ಅಡ್ಡಲಾಗಿ ಕೂತರು.

   ಸ್ಥಳದಲ್ಲಿ ಹಾಜರಿದ್ದ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮಹಲಿಂಗ ನಂದಗಾವಿ ಕೂಡಲೇ ಪೊಲೀಸರಿಗೆ ಸೂಚನೆ ನೀಡಿ ರಸ್ತೆ ಬಂದ್ ಮಾಡಲು ಯತ್ನಿಸಿದ ಎಲ್ಲರನ್ನೂ ವಶಕ್ಕೆ ಪಡೆಯುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪೊಲೀಸ್ ವ್ಯಾನ್ ಸೇರಿದಂತೆ ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್‍ನಲ್ಲಿ ಪ್ರತಿಭಟನ ನಿರತರ ಸುಮಾರು 225 ಜನರನ್ನು ವಶಕ್ಕೆ ಪಡೆದು ಬೆಂಗಳೂರು ರಸ್ತೆಯ ವೃತ್ತ ನಿರೀಕ್ಷಕ ಕಚೇರಿಗೆ ಕರೆತರಲಾಯಿತು. ಸ್ವಲ್ಪ ಸಮಯದ ನಂತರ ವಶಕ್ಕೆ ಪಡೆದ ಎಲ್ಲರನ್ನೂ ಬಿಡುಗಡೆಗೊಳಿಸಿದರು.

     ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ರೈತರು ಹಾಗೂ ಕಾರ್ಮಿಕ ಸಂಘಟನೆಗಳು ತಮ್ಮ ನ್ಯಾಯುತ ಬೇಡಿಕೆಗಳಿಗಾಗಿ ಧರಣಿ ನಡೆಸುತ್ತಿದ್ಧಾರೆ. ಆದರೆ, ಪೊಲೀಸರು ಯಾರಿಗೂ ಅವಕಾಶ ನೀಡದೆ ವಶಕ್ಕೆ ಪಡೆದು ನಮ್ಮ ನ್ಯಾಯುತ ಧರಣಿ ಸತ್ಯಾಗ್ರಹವನ್ನು ನಡೆಸದಂತೆ ಅಡ್ಡಿ ಪಡಿಸುತ್ತಿರುವುದು ವಿಷಾದನೀಯ ಎಂದರು. ರಾಜ್ಯ ಕಾರ್ಯದರ್ಶಿ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರಾಷ್ಟ್ರದ ಕೋಟಿ ಕೋಟಿ ಜನರ ಹಸಿವು ನಿವಾರಣೆಗೆ ಅನ್ನದಾತನ ಸೇವೆ ಬೇಕು. ಆದರೆ, ಅನ್ನದಾತನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಎರಡೂ ಸರ್ಕಾರಗಳು ಸಿದ್ದವಿಲ್ಲ. ರೈತರಿಗೆ ಬೆಂಬಲ ಬೆಲೆ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲು ಧರಣಿ ನಡೆಸುತ್ತಿದ್ದು, ಸರ್ಕಾರದ ಕ್ರಮ ಖಂಡನೀಯವೆಂದರು.

    ಈ ಸಂದರ್ಭದಲ್ಲಿ ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ, ಎಐಟಿಯುಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಹಮಾಲ ಸಂಘದ ಅಧ್ಯಕ್ಷ ಕೆ.ವೀರಭದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link