ಬೆಂಗಳೂರು
ಚಿತ್ರದುರ್ಗದಿಂದ ನಗರಕ್ಕೆ ಕಾಲ್ನಡಿಗೆಯಲ್ಲಿ ಬಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಸಾವಿರಾರು ಮಹಿಳೆಯರು ಕರ್ನಾಟಕವನ್ನು ಸಂಪೂರ್ಣ ಮದ್ಯ ನಿಷೇಧ ರಾಜ್ಯ ಮಾಡಬೇಕೆಂದು ಇಲ್ಲದಿದ್ದರೆ ಹೋರಾಟವನ್ನು ತೀವ್ರ ಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಂಪೂರ್ಣ ಮದ್ಯ ನಿಷೇಧಗೊಳಿಸಲು ಆಗ್ರಹಿಸಿ ಕಾಲ್ನಡಿಗೆಯಲ್ಲಿ ಸೋಮವಾರವೇ ಬಂದಿದ್ದ ಸಾವಿರಾರು ಮಹಿಳೆಯರು ಮಲ್ಲೇಶ್ವರಂ ಮೈದಾನದಲ್ಲಿ ಸೇರಿ ಅಲ್ಲಿಂದ ವಿಧಾನಸೌಧ ಮುತ್ತಿಗೆಗೆ ಹಾಕಲು ಹೊರಟಾಗ ಮಾರ್ಗ ಮಧ್ಯೆಯೇ ಪೊಲೀಸರು ತಡೆದು ಫ್ರೀಡಂಪಾರ್ಕ್‍ಗೆ ಕರೆದೊಯ್ದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕನಸುಗಳಲ್ಲಿ ಪ್ರಮುಖವಾದ ಮದ್ಯ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧವಾಗಿರುವ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಘವು ಇದೇ ತಿಂಗಳ 19 ರಿಂದ ಚಿತ್ರದುರ್ಗದಿಂದ ಸುಮಾರು 200 ಕಿಲೋ ಮೀಟರ್ ದೂರಪಾದಯಾತ್ರೆ ಆರಂಭಿಸಿದ್ದು ಇದರಲ್ಲಿ 3 ಸಾವಿರಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದಾರೆ.
ಮಹಿಳೆಯರೊಂದಿಗೆ ನೂರಾರು ಮಂದಿ ಪುರುಷರು ಬೆಂಬಲ ನೀಡಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ವಯಸ್ಸಾದವರು, ಗರ್ಭಿಣಿಯರು, ಎಳೆಯ ಮಕ್ಕಳ ತಾಯಂದಿರು, ಕುಡಿತದ ಚಟಕ್ಕೆ ಬಿದ್ದು,ಕಿರುಯ ವಯಸ್ಸಿಗೆ ವಿಧವೆಯಾದ ಮಹಿಳೆಯರು ಭಾಗವಹಿಸಿದ್ದ ದೃಶ್ಯ ಕಂಡಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಮಾತನಾಡಿ, ಮದ್ಯಪಾನದಿಂದ ಸಾವು ಸಂಭವಿಸುತ್ತಿದ್ದು, ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಆದರೆ, ಮದ್ಯ ಮಾರಾಟಕ್ಕೆ ಸರ್ಕಾರ ಉತ್ತೇಜನ ನೀಡುತ್ತಿದೆ’ ಎಂದು ದೂರಿದರು.
ಮದ್ಯವು ಜನರ ಆರೋಗ್ಯ ಮತ್ತು ಬುದ್ಧಿಯನ್ನು ಕೆಡಿಸುತ್ತಿದೆ. ಮದ್ಯ ಮಾರಾಟದಿಂದ ಬಂದ ತೆರಿಗೆ ಹಣದಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಪಾಪದ ಹಣದಲ್ಲಿ ಆಡಳಿತ ನಡೆಸುವುದು ಸರಿಯಲ್ಲ ಎಂದರು.
ಜೈಲ್ ಭರೋ ಚಳುವಳಿ
ಮದ್ಯ ನಿಷೇಧ ಆಂದೋಲನವನ್ನು ಮತ್ತಷ್ಟು ತೀವ್ರಗೊಳಿಸಲು ಮತ್ತು ಮಹಿಳೆಯರಿಗೆ ಆಗುತ್ತಿರುವ ಸಮಸ್ಯೆಗಳಿಂದ ಮುಕ್ತರಾಗಲು ಇಂದು ರಾಜ್ಯದ ಹೆಸರಾಂತ ಅನೇಕ ಗಣ್ಯರು 500 ಮಹಿಳೆಯರೊಂದಿಗೆ ಜೈಲ್ ಭರೋ ಚಳುವಳಿ ನಡೆಸಲಿದ್ದಾರೆ.
ಉಳಿದಂತೆ ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಇದೇ ಚಳುವಳಿ ಮುಂದುವರೆಯಲಿದೆ. ಸಂವಿಧಾನ ಉಲ್ಲಂಘನೆ ಮಾಡುತ್ತಿರುವ ಸರಕಾರಕ್ಕೆ ತಮ್ಮ ಗ್ರಾಮಗಳಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಮದ್ಯದ ಬಾಟಲಿಗಳನ್ನು ತಂದು ರಾಶಿಹಾಕಿ ಸುಡಲಾಗುತ್ತದೆ ಎಂದು ಆಂದೋಲನದ ಸದಸ್ಯೆಯೊಬ್ಬರು ಹೇಳಿದರು.
ಮದ್ಯ ನಿಷೇಧಿಸುವಂತೆ ಹೋರಾಟ ನಡೆಸಿತ್ತಿರುವ ಮಹಿಳೆಯರಿಗೆ ವ್ಯಾಪಕ ಬೆಂಬಲ ದೊರೆತ್ತಿದ್ದು, ಈಗಾಗಲೇ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಸೇರಿದಂತೆ ರೈತ, ಮಹಿಳಾ, ವಿದ್ಯಾರ್ಥಿ ಸೇರಿದಂತೆ ದಲಿತ ಸಂಘಟನೆಗಳು ಬೆಂಬಲ ಸೂಚಿಸಿವೆ.
ಇನ್ನೊಂದೆಡೆ ಮುಖ್ಯಮಂತ್ರಿ ಮೇಲೆ ಒತ್ತಡ ತರಲು ಆಗಲೇ ಸಾಮಾಜಿಕ ಹೋರಾಟಗಾರರಾದ ಎಸ್.ಆರ್. ಹಿರೇಮಠ ಹಾಗೂ ಸಾಹಿತಿ ದೇವನೂರು ಮಹಾದೇವ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮಹಿಳೆಯರ ಅಹವಾಲಿಗೆ ಸ್ಪಂದಿಸುವಂತೆ ಕೋರಿದ್ದಾರೆ
ಬಿಗಿ ಭದ್ರತೆ
ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋರ್ ನೇತೃತ್ವದಲ್ಲಿ 1 ಎಸಿಪಿ , 5 ಇನ್ಸ್ ಪೆಕ್ಟರ್ ಸೇರಿದಂತೆ 250 ಮಂದಿ ಸಿಬ್ಬಂದಿಯನ್ನು ಪ್ರತಿಭಟನೆಯ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು150 ಮಂದಿ ಮಹಿಳಾ ಸಿಬ್ಬಂದಿ ಭದ್ರತೆ ನಿಯೋಜನೆಗೊಂಡಿದ್ದರು
ಸ್ಪಂದಿಸಿದ ಸರ್ಕಾರ’
ಮದ್ಯ ನಿಷೇಧಕ್ಕೆ ಆಗ್ರಹಿಸಿ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ 2,500 ರಿಂದ 3,000 ಮಹಿಳೆಯರು ಚಿತ್ರದುರ್ಗದಿಂದ ನಡೆಸುತ್ತಿರುವ ಬೆಂಗಳೂರು ಚಲೋ ಪಾದಯಾತ್ರೆ 130 ಕಿಮೀ ಕ್ರಮಿಸಿ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಯಾವೊಬ್ಬ ಜನಪ್ರತಿನಿಧಿಯೂ, ಸರ್ಕಾರವೂ, ವಿರೋಧ ಪಕ್ಷದವರೂ ಸಹ ನಮ್ಮ ತಮ್ಮ ಅಭಿಪ್ರಾಯ ಕೇಳಿಲ್ಲ ಮತ್ತು ಅವರ ಅಭಿಪ್ರಾಯ ತಿಳಿಸಿಲ್ಲ .ಪ್ರತಿಭಟನಾ ನಿರತ ಮಹಿಳೆ ಮೀನಾಕ್ಷಿ ಹಿರೇಯಾಳ್ ಆರೋಪಿಸಿದರು.
ಮದ್ಯ ಬಂದ್ ಮಾಡಿ
ಸರ್ಕಾರ ಒಂದು ಕೈನಿಂದ ಉಚಿತ ಅಕ್ಕಿ ಕೊಟ್ಟು, ಸಾಲ ಮನ್ನಾ ಮಾಡುತ್ತಿದೆ. ಆದರೆ, ಇನ್ನೊಂದು ಕಡೆ ಕುಡಿತಕ್ಕೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು ನಮಗೆ ಅಕ್ಕಿ, ಸಾಲ ಬೇಡ ಮದ್ಯ ಬಂದ್ ಮಾಡಿ ಮಹಿಳೆ ಸಾವಿತ್ರಮ್ಮಆಗ್ರಹಿಸಿದರು.
ಸರ್ಕಾರ ಒಂದು ಕೈನಿಂದ ಉಚಿತ ಅಕ್ಕಿ ಕೊಟ್ಟು, ಸಾಲ ಮನ್ನಾ ಮಾಡುತ್ತಿದೆ. ಆದರೆ ಇನ್ನೊಂದು ಕಡೆ ಕುಡಿತಕ್ಕೆ ಪ್ರೋತ್ಸಾಹ ನೀಡುತ್ತಾ ಬಡ, ರೈತ, ಕೂಲಿ ಕಾರ್ಮಿಕರ ಕುಟುಂಬವನ್ನು ಬೀದಿಗೆ ತಳ್ಳುತ್ತಾ, ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದ್ಯಾಗ್ ಬಂದೀವಿ.
ಮತ್ತೊಬ್ಬ ಮಹಿಳೆ ಮುನಿರತ್ನಮ್ಮ ಮಾತನಾಡಿ ನಮ್ಮ ಮಕ್ಕಳೇ ಕುಡಿತದ ಚಟ ಅಂಟಿಸಿಕೊಂಡು, ಹೊಲ, ಮನೆ ಎಲ್ಲಾ ಕಳ್ಕೊಂಡವ್ರೆ. ಊರಾಗ ನಮ್ಮಂಗೆ ಹಲವು ಮಂದಿ ಎಲ್ಲಾ ಕಳ್ಕೊಂಡು ಬೀದ್ಯಾಗ್ ಬಂದೀವಿ. ಕೂಲಿ ನಾಲಿ ಮಾಡಿ ಬದುಕ್ ಬ್ಯಾಕಾದ ಸ್ಥಿತಿ ನಮ್ಮದಾಗಿದೆ ಎಂದರು.
ಗಂಡಸರು ಕುಡಿದು ಅನಾರೋಗ್ಯಕ್ಕೆ ತುತ್ತಾಗಿ ಕೊನೆಗೊಂದು ದಿನ ನಮ್ಮನ್ನೆಲ್ಲಾ ಅನಾಥರಾಗಿಸಿ ಸಾಯುತ್ತಿದ್ದಾರೆ ಎಂದು ಹೇಳುತ್ತಲೆ ಕಣ್ಣೀರು ಸುರಿಸಿದ ಅವರು, ಸರ್ಕಾರ ಮದ್ಯ ನಿಷೇಧ ಮಾಡಲಿ ಎಂದು ಕೈ ಮುಗಿದು ಮನವಿ ಮಾಡಿದರು.
ನನಗೀಗ 27 ವರ್ಷ ನನ್ನ ಗಂಡ ಕುಡಿದು ಕುಡಿದು ಶಿವನ ಪಾದ ಸೇರ್ಕಂಡ. ನಾನು ಶಾಲೆಗೆ ಹೋಗಿಲ್ಲ. ತರಕಾರಿ ಮಾರಿ ಮಕ್ಕಳನ್ನು ಸಾಕಬೇಕಾಗಿದೆ. ಜೀವನ ಸಾಗಿಸೋದು ಭಾಳ ಕಷ್ಟ ಆಗೈತಿ. ನಮ್ಮಂತಹ ಎಷ್ಟೋ ಮಂದಿ ಹೆಣ್ಣು ಮಕ್ಕಳು ಇದೇ ರೀತಿ ಸಂಕಷ್ಟದಾಗ ಕೈ ತೊಳೀತಿದ್ದಾರೆ’ ಎಂದು ಬಳ್ಳಾರಿ ಜಿಲ್ಲೆ ಕೋಗಳಿಯ ಮಂಗಳಗೌರಿ ನುಡಿದರು.
ಉಗ್ರ ಹೋರಾಟ ಎಚ್ಚರಿಕೆ
ಮದ್ಯ ಮಾರಾಟ ಮಾಡೋದ್ರಿಂದ ಸರಕಾರಕ್ಕೆ ಲಾಭ ಅಂತಾರೆ. ಇದರಿಂದ ಲಕ್ಷಾಂತರ ರೂ. ದುಡಿಯೋ ನಮ್ಮ ಗಂಡೈಕಳ ಜೀವಾನೇ ಹೋಗ್ತಿದೆ. ನಿತ್ಯ ಮಕ್ಕಳು ಕುಡಿದು ಬಂದು ಅಪ್ಪ-ಅಮ್ಮ ಮನದಂತೆ ಹೊಡಿಯಾಕ ಹತ್ಯಾರ. ನಮ್ಮ ಜೀವನಕ್ಕ ಯಾರ್ ದಿಕ್ಕು’ ಹೀಗೆ ನುಡಿಯುತ್ತಾರೆ ರಾಯಚೂರಿನ ಹಸೀನಾ ಬೇಗಂ.
ಪ್ರತಿಭಟನೆ ನಿರತ ಸಾವಿರಾರು ಮಹಿಳೆಯರ ಆಳಲು.ಸರ್ಕಾರವೇ ಮದ್ಯ ನಿಷೇಧ ಮಾಡಿದರೆ, ನಾವು ಸಂತೋಷಕರ ಬದುಕು ಕಟ್ಟಿಕೊಳ್ಳಬಹುದು ಎಂದು ಅವರ ಆಶಯ. ಇನ್ನೂ, ಸರ್ಕಾರದ ಆದೇಶವಾಗುವರೆಗೂ, ಫ್ರೀಡಂ ಪಾರ್ಕ್ ಬಿಟ್ಟು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.