ಪೊಲೀಸ್ ಇಲಾಖೆ ಆವರಣದಲ್ಲಿ ದಲಿತರ ಕುಂದುಕೊರತೆ ಸಭೆ

ಕೊರಟಗೆರೆ

    ನಿರುದ್ಯೋಗ ಮತ್ತು ಬಡತನ ಎರಡನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಕೊರಟಗೆರೆ ಆರಕ್ಷಕ ವೃತ್ತ ನಿರೀಕ್ಷಕ ನದಾಫ್ ದಲಿತರಿಗೆ ಕಿವಿಮಾತು ಹೇಳಿದರು.

     ಪಟ್ಟಣದ ಪೊಲೀಸ್‍ಠಾಣೆಯ ಆವರಣದಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ದಲಿತರ ಕುಂದು ಕೊರತೆಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

     ಗ್ರಾಮೀಣ ಪ್ರದೇಶದಲ್ಲಿನ ಶಾಲೆಗೆ ಹೋಗದೆ ಮನೆಯಲ್ಲಿಯೇ ಉಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಬೇಕು. ಸರಕಾರದ ಹತ್ತಾರು ಯೋಜನೆಗಳ ಬಗ್ಗೆ ದಲಿತರಿಗೆ ವಿದ್ಯಾವಂತ ಯುವಕರು ಮಾಹಿತಿ ನೀಡಬೇಕು. ಸರಕಾರದ ಸೌಲಭ್ಯವನ್ನು ಪಡೆದು ಮುಖ್ಯವಾಹಿನಿಗೆ ಬರುವಂತಹ ಪ್ರಯತ್ನವನ್ನು ದಲಿತರು ಮಾಡಬೇಕು ಎಂದು ತಿಳಿಸಿದರು.

      ಆರಕ್ಷಕ ಉಪನಿರೀಕ್ಷಕ ಮಂಜುನಾಥ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳ ಬಗ್ಗೆ ಪ್ರತಿಯೊಬ್ಬ ನಾಗರಿಕನು ಜವಾಬ್ದಾರಿ ವಹಿಸಬೇಕು. ದಲಿತ ಕಾಲನಿಯಲ್ಲಿ ಮದ್ಯಪಾನ ಮತ್ತು ಇಸ್ಪೀಟ್ ಆಟ ಕಂಡುಬಂದರೆ ಪೊಲೀಸ್‍ಠಾಣೆಗೆ ದೂರು ನೀಡಿ ಸಹಕಾರ ನೀಡಬೇಕು. ಇಸ್ಪೀಟ್ ಅಡ್ಡೆಯ ಮೇಲೆ ದಾಳಿ ನಡೆಸಿ ಈಗಾಗಲೇ ಹತ್ತಾರು ಪ್ರಕರಣ ದಾಖಲಿಸಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದರು.
ದಲಿತ ಸೇನೆ ಉಪಾಧ್ಯಕ್ಷ ಜಯರಾಂ ಮಾತನಾಡಿ, ಕೊರಟಗೆರೆ ಕ್ಷೇತ್ರದ ದಲಿತ ಕುಟುಂಬಗಳಿಗೆ ಸ್ಮಶಾನಕ್ಕೂ ಜಾಗದ ಕೊರತೆ ಎದುರಾಗಿದೆ.

       ದಲಿತ ಕಾಲನಿಯಲ್ಲಿ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಅಬಕಾರಿ ಇಲಾಖೆ ಮಾರಾಟ ಮಾಡುವ ವ್ಯಕ್ತಿ ಮತ್ತು ಕೊಡುವ ವೈನ್ಸ್ ಮಾಲೀಕನ ವಿರುದ್ದವು ಸಹ ಕ್ರಮ ಕೈಗೊಳ್ಳಬೇಕು. ಮದ್ಯದ ಅಂಗಡಿಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದರು.

       ಡಿಎಸ್‍ಎಸ್ ಅಧ್ಯಕ್ಷ ಲಕ್ಷ್ಮೀನರಸಯ್ಯ ಮಾತನಾಡಿ, ಕಂದಾಯ ಮತ್ತು ಸಮಾಜಕಲ್ಯಾಣ ಇಲಾಖೆ ದಲಿತರ ಕುಂದುಕೊರತೆ ಸಭೆ ನಡೆಸಲು ಹಿಂದೇಟು ಹಾಕುತ್ತಿದೆ. ದಲಿತ ಕಾಲನಿ ಅಭಿವೃದ್ದಿಯ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲದಾಗಿದೆ. ನಾವು ಇಲಾಖೆಗೆ ಭೇಟಿ ನೀಡಿದರೂ ಸಹ ಅಧಿಕಾರಿ ವರ್ಗ ಕೈಗೆ ಸಿಗುವುದೇ ಕಷ್ಟಸಾಧ್ಯವಾಗಿದೆ. ದಲಿತರ ರಕ್ಷಣೆ ಮತ್ತು ಅಭಿವೃದ್ಧಿಗೆ ಅಧಿಕಾರಿ ವರ್ಗ ಸಹಕಾರ ನೀಡಬೇಕು ಎಂದು ಒತ್ತಾಯ ಮಾಡಿದರು.

     ಸಭೆಯಲ್ಲಿ ದಲಿತ ಮುಖಂಡರಾದ ಚಿಕ್ಕರಂಗಯ್ಯ, ಗಂಗರಂಗಯ್ಯ, ವೆಂಕಟೇಶ್, ಜಯರಾಂ, ನರಸಿಂಹಮೂರ್ತಿ, ವಿಭೂತಿಸಿದ್ದಪ್ಪ, ಗಂಗಣ್ಣ, ಸುರೇಶ್, ಶಿವರಾಮಯ್ಯ, ಸುಬ್ಬಣ್ಣ, ಹರೀಶ್, ಸಿದ್ದಲಿಂಗಯ್ಯ, ನಾಗೇಶ್, ನಾಗರಾಜು ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link