ತುಮಕೂರು
ಬೀಗ ಹಾಕಿದ ಮನೆಗಳನ್ನು ಕಳ್ಳಕಾಕರಿಂದ ರಕ್ಷಿಸಲು ತುಮಕೂರು ಜಿಲ್ಲಾ ಪೊಲೀಸ್ ಲಾಕ್ಡ್ ಹೌಸ್ ಮಾನಿಟಿಂಗ್ ಸಿಸ್ಟಮ್ ತುಮಕೂರು ಜಿಲ್ಲಾ ಪೊಲೀಸ್ ಆಪ್ ಮೂಲಕ ವಿನೂತನ ಪ್ರಯೋಗ ಆರಂಭಿಸಿದೆ.ಮನೆ ಮಾಲೀಕರು ಈ ಆಪ್ ಅನ್ನು ಡೌನ್‍ಲೋಡ್ ಮಾಡಿಕೊಂಡು, ಪೊಲೀಸ್ ಇಲಾಖೆಯಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗುವ ವೇಳೆ ಪೊಲೀಸರಿಗೆ ಮಾಹಿತಿ ನೀಡಿದರೆ, ಅವರು ಮನೆಯಲ್ಲಿ ಕ್ಯಾಮರಾ ಅಳವಡಿಸಿ, ಆ ಮೂಲಕ ನಿಗಾ ವಹಿಸುತ್ತಾರೆ. ಮನೆಯವರು ನಿರಾತಂಕವಾಗಿ ಮನೆ ಬಿಟ್ಟು ಹೋಗಬಹುದು, ವಾಪಾಸ್ ಬರುವವರೆಗೂ ಮನೆ ಪೊಲೀಸರ ಕಣ್ಗಾವಲಿನಲ್ಲಿರುತ್ತದೆ.
ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಕಾರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಈ ಕಾರ್ಯಕ್ರಮ ರೂಪಿಸಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯೋಗ ಮಾಡಲಾಗುತ್ತಿದೆ ಎಂದು ಎಸ್ಪಿ ಡಾ. ವಂಶಿಕೃಷ್ಣ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆಂಡ್ರಾಯ್ಡ್ ಪ್ಲೇ ಸ್ಟೋರ್‍ನಿಂದ LHMS tumakuru police ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ, ನಿಮ್ಮ ಮನೆಯಯಿಂದ ಅಪ್ಲಿಕೇಶನ್‍ನಲ್ಲಿ ರಿಜಿಸ್ಟರ್ ಮಾಡಿ, ಓಟಿಪಿ ನಂಬರ್ ಪಡೆಯಬೇಕು. ಊರಿಗೆ ಹೋಗುವ ದಿನ request police watch ಮಾಡಿ. ಆಗ ಪೊಲೀಸರು ನಿಮ್ಮ ಮನೆಗೆ ಬಂದು ಕ್ಯಾಮರಾ ಅಳವಡಿಸುತ್ತಾರೆ. ಕ್ಯಾಮರಾ ಅಳವಡಿಕೆಗೆ 50 ಜನ ಪೊಲೀಸರಿಗೆ ತರಬೇತಿ ನೀಡಲಾಗಿದೆ. 180 ಡಿಗ್ರಿ ವ್ಯಾಪ್ತಿಯಲ್ಲಿ ಈ ಕ್ಯಾಮರಾ ದೃಶ್ಯ, ಧ್ವನಿಯನ್ನು ಸೆರೆ ಹಿಡಿಯುತ್ತದೆ. ಮನೆ ಲಾಕ್‍ಡೌನ್ ಆಗಿದ್ದ ಅವಧಿಯಲ್ಲಿ ಕಳ್ಳಕಾಕರು ಮನೆ ವ್ಯಾಪ್ತಿಗೆ ಬಂದರೆ ಕಂಟ್ರೋಲ್ ರೂಂನಲ್ಲಿ ಅಲಾರಾಂ ಹೊಡೆಯುತ್ತದೆ. ಇದನ್ನು ಗಮನಿಸುವ ಸಿಬ್ಬಂದಿ ಆ ಮನೆ ವ್ಯಾಪ್ತಿಯಲ್ಲಿ ಬೀಟ್‍ನಲ್ಲಿರುವ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಪೊಲೀಸರು ತಕ್ಷಣ ಹೋಗಿ ಕಳ್ಳರನ್ನು ಹಿಡಿಯುತ್ತಾರೆ ಹಾಗೂ ಈ ಮೂಲಕ ಕಳ್ಳತನ ತಡೆಯಲು ಸಹಾಯವಾಗುತ್ತದೆ ಎಂದು ಎಸ್ಪಿ ಹೇಳಿದರು.
ಸದ್ಯಕ್ಕೆ ತುಮಕೂರು ನಗರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಲಾಕ್‍ಡೌನ್ ಹೌಸ್ ಮಾನಿಟರಿಂಗ್ ಸಿಸ್ಟಂ ಅಳವಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸುವ ಉದ್ದೇಶವಿದೆ. ಈಗ ಒಂದು ಮನೆಯಲ್ಲಿ 15 ದಿನಗಳ ಕಾಲ ಮಾನೀಟರಿಂಗ್ ಮಾಡಲಾಗುತ್ತದೆ. ಇದೂವರೆಗೆ ಒಂದು ಸಾವಿರಕ್ಕೂ ಹೆಚ್ಚು ಮನೆಯವರು ಆಪ್ ಡೌನ್‍ಲೋಡ್ ಮಾಡಿಕೊಂಡಿದ್ದಾರೆ, ಇವರಲ್ಲಿ 300ಕ್ಕೂ ಹೆಚ್ಚು ಜನ ನೊಂದಣಿ ಮಾಡಿ, ತಮ್ಮ ಒಟಿಪಿ ನಂಬರ್ ಪಡೆದಿದ್ದಾರೆ ಎಂದು ಎಸ್ಪಿ ಡಾ. ವಂಶಿಕೃಷ್ಣ ಹೇಳಿದರು.
ಎಲ್‍ಹೆಚ್‍ಎಂಎಸ್ ತುಮಕೂರು ಪೊಲೀಸ್ ಆಪ್‍ನಲ್ಲಿ ಹೆಸರು, ಮನೆ ನಂಬರ್‍ಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ, ರಿಜಿಸ್ಟರ್ ಮಾಡಿಸಬೇಕು. ಮನೆಗೆ ಬೀಗ ಹಾಕಿ ಊರಿಗೆ ಹೋಗುವ ಸಂದರ್ಭದಲ್ಲಿ ಆಪ್‍ನಲ್ಲಿ ರಿಕ್ವೆಸ್ಟ್ ವಾಚ್ ಆಪ್ಷನ್‍ನಲ್ಲಿ ಯಾವಾಗಿನಿಂದ ಯಾವತ್ತಿನವರೆಗೆ, ಎಷ್ಟು ದಿನ ಮನೆಗೆ ಬೀಗ ಹಾಕಿ ಹೋಗುವುದರ ಬಗ್ಗೆ ಮಾಹಿತಿ ನೀಡಬೇಕು.
ಮನೆಗೆ ಬೀಗ ಹಾಕಿಕೊಂಡು ದೂರದ ಸ್ಥಳಗಳಿಗೆ ಹೋಗುವ ಮುಂಚೆ ಸ್ಥಳೀಯ ಪೊಲೀಸರಿಗೆ ವಿಚಾರ ತಿಳಿಸಿದಾಗ ಅವರು ತಮ್ಮ ಮನೆಗೆ ಬಂದು ಮನೆಯನ್ನು ನಿಗಾ ವಹಿಸಲು ಮುಂದಿನ ವ್ಯವಸ್ಥೆ ಮಾಡುತ್ತಾರೆ. ಆ ಸಮಯದಲ್ಲಿ ನಿಮ್ಮ ಮನೆ ನಿಗಾ ವ್ಯವಸ್ಥೆಯಲ್ಲಿರುತ್ತದೆ. ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಂಗೆ ರವಾನಿಸಲಾಗುತ್ತದೆ. ಸಾರ್ವಜನಿಕರು ಪೊಲೀಸ್ ಇಲಾಖೆಯ ಈ ಉಚಿತ ಸೇವೆಯನ್ನು ಉಪಯೋಗಿಸಿಕೊಂಡು, ಪೊಲೀಸರೊಂದಿಗೆ ಸಹಕರಿಸಿ ತಮ್ಮ ಆಸ್ತಿಪಾಸ್ತಿಗಳನ್ನು ಜೋಪಾನವಾಗಿಡಲು ಎಸ್ಪಿ ಕೋರಿದರು.
ಸದ್ಯಕ್ಕೆ 100ಕ್ಕೂ ಹೆಚ್ಚು ಕ್ಯಾಮರಾಗಳು ಬಂದಿವೆ, ಅಗತ್ಯವಿದ್ದರೆ ಹೆಚ್ಚುವರಿ ಕ್ಯಾಮರಾಗಳನ್ನು ಸರಬರಾಜು ಮಾಡಲು ಸ್ಟಾರ್ಟ್ ಸಿಟಿ ಲಿಮಿಟೆಡ್ ಸಿದ್ಧವಿದೆ. ಜ್ಯೂವೆಲ್ಲರಿ ಅಂಗಡಿ, ಮತ್ತಿತರ ವ್ಯಾಪಾರ ಮಳಿಗೆಗಳವರು ತಾವೇ ಕ್ಯಾಮರಾ ಖರೀದಿಸಿ ಈ ಆಪ್ ಡೌನ್‍ಲೋಡ್ ಮಾಡಿ ಪೊಲೀಸ್ ಸೇವೆ ಪಡೆಯಬಹುದು ಎಂದು ತಿಳಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
