ವಿಷ ಪ್ರಸಾದ ಪ್ರಕರಣ:ವಿಚಾರಣೆ ತೀವ್ರಗೊಳಿಸಿದ ಪೊಲೀಸರು..!!

ಬೆಂಗಳೂರು

    ಚಿಂತಾಮಣಿ ಗಂಗಮ್ಮ ಗುಡಿ ವಿಷ ಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧ ಅನುಮಾನದ ಮೇಲೆ ಅಮರಾವತಿ, ಲಕ್ಷ್ಮಿ ಸೇರಿದಂತೆ ಹಲವರನ್ನ ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ.

      ಪ್ರಸಾದ ಸೇವಿಸಿ ಮೃತಪಟ್ಟ ಕವಿತಾ ಸಂಬಂಧಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ವಶಕ್ಕೆ ತೆಗೆದುಕೊಂಡ ಲಕ್ಷ್ಮಿ ಹಾಗೂ ಅಮರಾವತಿ ಪೊಲೀಸರ ಮುಂದೆ ನಾವು ವಿಷ ಬೆರೆಸಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

        ಪ್ರಸಾದ ತಯಾರಿಕೆ ವೇಳೆ ಕೆಟ್ಟಿದ್ದ ಕೊಬ್ಬರಿ, ಅವಧಿ ಮೀರಿದ ತುಪ್ಪ ಬಳಸಿದ್ದ ವಿಚಾರವನ್ನ ಲಕ್ಷ್ಮಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಈ ನಡುವೆ ಪ್ರಸಾದ ಸೇವಿಸಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸರಸ್ವತಮ್ಮ ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ ಎರಡಕ್ಕೇರಿದೆ.

         ಮೃತ 56 ವರ್ಷದ ಸರಸ್ವತಮ್ಮ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿಯ ನಿವಾಸಿ. ಊರ ಹಬ್ಬಕ್ಕೆಂದು ಮಗಳು ಗೌರಿ ಮನೆಗೆ ಬಂದಿದ್ದರು. ಆದರೆ ವಿಧಿಯ ಆಟವೇ ಬೇರೆ ಇದ್ದಿದರಿಂದ ಬಾರದ ಲೋಕಕ್ಕೆ ಸರಸ್ವತಮ್ಮ ಹೋಗಿದ್ದಾರೆ. ಇನ್ನೂ 11 ಮಂದಿ ಕೋಲಾರ-ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

          ಸುಳ್ವಾಡಿ ವಿಷ ದುರಂತದ ಬಳಿಕ ಎಲ್ಲವನ್ನು ಅನುಮಾನದಿಂದ ನೋಡಬೇಕಾಗಿ ಬಂದಿದೆ. ಗಂಗಮ್ಮನ ಪ್ರಸಾದಕ್ಕೆ ಯಾರಾದರೂ ಉದ್ದೇಶಪೂರ್ವಕವಾಗಿ ವಿಷ ಬೆರೆಸಿ ಮಾರಣಹೋಮಕ್ಕೆ ಸಂಚು ರೂಪಿಸಿದ್ದಾರೆಯೇ ಎನ್ನುವ ಅನುಮಾನ ಕಾಡುತ್ತಿದೆ. ಇದೇ ಅನುಮಾನದ ಮೇಲೆ ಅಮರಾವತಿ, ಲಕ್ಷ್ಮಿ ಸೇರಿದಂತೆ ಹಲವರನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

           ಗಂಗಮ್ಮನ ದೇವಸ್ಥಾನದಲ್ಲಿ ಭಕ್ತರು ಸೇವಿಸಿದ ಪ್ರಸಾದದಲ್ಲಿ ವಿಷ ಬೆರೆತಿರುವ ಸಾಧ್ಯತೆ ಇಲ್ಲ. ಬೆಳಗ್ಗೆ ಸಿದ್ಧಪಡಿಸಿದ್ದ ಪ್ರಸಾದವನ್ನ ಸಂಜೆ ವಿತರಿಸಲಾಗಿದೆ. ಪ್ರಸಾದ ರೆಡಿಯಾಗಿ ಹೆಚ್ಚು ಸಮಯ ಆಗಿದ್ದರಿಂದ ಅದು ವಿಷಾಹಾರವಾಗಿ ಪರಿವರ್ತನೆಗೊಂಡಿರಬಹುದು. ಅಥವಾ ಪ್ರಸಾದ ಸಿದ್ಧಪಡಿಸಿದ ವ್ಯಕ್ತಿಗೆ ಸ್ಟೈಫಲೋ ಕೋಕುಸ್ ಸೋಂಕು ತಗುಲಿರುವ ಸಾಧ್ಯತೆ ಇದೆ. ಸೋಂಕಿನ ಬ್ಯಾಕ್ಟೀರಿಯಾ ಪ್ರಸಾದದ ಜೊತೆ ಭಕ್ತರ ಹೊಟ್ಟೆ ಸೇರಿ ವಿಷಾಹಾರವಾಗಿ ಬದಲಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ

         ಇನ್ನು ದೇವಾಲಯದಲ್ಲಿ ನೂರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿತ್ತು.. ಆದರೆ ಮೂರು ಕುಟುಂಬಗಳ ಸದಸ್ಯರು ಮಾತ್ರ ಅಸ್ವಸ್ಥರಾಗಿದ್ದಾರೆ. ಇದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆ ಮುಂದುವರೆದಿದೆ. ಇದು ಸುಳ್ವಾಡಿ ವಿಷ ದುರಂತ ಆಗದಿದ್ದರೆ ಸಾಕು ಎಂದು ಜನರು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link