ತುಮಕೂರು
ತುಮಕೂರು ನಗರದಲ್ಲಿ ರೌಡಿ ಹಾವಳಿ ನಿಗ್ರಹಕ್ಕೆ ಪೊಲೀಸರು ಕೈಗೊಳ್ಳುತ್ತಿರುವ ಕಠಿಣ ಕ್ರಮಗಳಿಗೆ ನಗರಾದ್ಯಂತ ನಾಗರಿಕರ ವಲಯದಲ್ಲಿ ಸ್ವಾಗತ ವ್ಯಕ್ತವಾಗುತ್ತಿದೆಯಾದರೂ, ಕ್ರಮ ಕೈಗೊಳ್ಳುವಾಗ ಕೆಲವೆಡೆ ಪೊಲೀಸರು ನಾಗರಿಕರೊಡನೆ ಸೌಜನ್ಯರಹಿತವಾಗಿ ನಡೆದುಕೊಳ್ಳುತ್ತಾರೆಂಬ ಬೇಸರವೂ ವ್ಯಕ್ತಗೊಳ್ಳುತ್ತಿದೆ.
ತುಮಕೂರಿನ ಮಾಜಿ ಮೇಯರ್ ಎಚ್.ರವಿಕುಮಾರ್ ಅವರ ಹತ್ಯೆಯ ಬಳಿಕ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ದಿವ್ಯ ವಿ.ಗೋಪಿನಾಥ್ ಅವರ ಖಡಕ್ ನಿರ್ಧಾರ ಕೈಗೊಂಡು, “ರೌಡಿ ನಿಗ್ರಹ ದಳ” ರಚಿಸಿದ್ದಾರೆ. ಎಸ್ಪಿ ಅವರ ಸೂಚನೆ ಮೇರೆಗೆ ತುಮಕೂರು ನಗರಾದ್ಯಂತ ಪೊಲೀಸರು ಕೆಲವೊಂದು ಕಠಿಣ ಕ್ರಮ ಜರುಗಿಸುತ್ತಿದ್ದಾರೆ. ಬಾರ್ ಮತ್ತು ರೆಸ್ಟೋರೆಂಟ್‍ಗಳು ಹಾಗೂ ವೈನ್ ಶಾಪ್‍ಗಳ ಬಳಿ ಮತ್ತು ರಸ್ತೆಬದಿ ಸಣ್ಣಪುಟ್ಟ ಹೋಟೆಲ್‍ಗಳನ್ನು ಕ್ರಿಮಿನಲ್‍ಗಳು ಅಡ್ಡೆ ಮಾಡಿಕೊಂಡು, ರಾತ್ರಿ ವೇಳೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗುವರೆಂಬ ಮಾಹಿತಿ ಹಿನ್ನೆಲೆಯಲ್ಲಿ ನಗರಾದ್ಯಂತ ರಾತ್ರಿ 10-30 ಕ್ಕೆ ಅಂಗಡಿ ಮಳಿಗೆಗಳನ್ನು ಕಟ್ಟುನಿಟ್ಟಾಗಿ ಮುಚ್ಚಿಸುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಅದೇ ರೀತಿ ರೌಡಿಶೀಟರ್‍ಗಳ ಚಲನವಲನಗಳ ಮೇಲೂ ಹಗಲು ಮತ್ತು ರಾತ್ರಿ ತೀವ್ರ ನಿಗಾ ಇಟ್ಟಿದ್ದಾರೆ.
ರಾತ್ರಿ ವೇಳೆ ಅನುಮಾನಾಸ್ಪದವಾಗಿ ಸಂಚರಿಸುವವರನ್ನು ವಿಚಾರಣೆ ಮಾಡುತ್ತಿದ್ದಾರೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇಂತಹ ಕ್ರಮಗಳು ಒಳ್ಳೆಯದೆಂಬ ಭಾವನೆ ನಾಗರಿಕರಲ್ಲಿದ್ದು, ನಾಗರಿಕರು ಇವೆಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿ ಸ್ವಾಗತಿಸುತ್ತಿದ್ದಾರೆ.
ಆದರೆ ಈ ಕ್ರಮವನ್ನು ಜಾರಿಗೊಳಿಸುವಾಗ ಕೆಲವೆಡೆ ಪೊಲೀಸರು ಎಡವಟ್ಟು ಮಾಡಿಕೊಳ್ಳುತ್ತಿರುವುದು ಮಾತ್ರ ನಾಗರಿಕರ ವಲಯದಲ್ಲಿ ಬೇಸರ ಹಾಗೂ ಕೋಪಕ್ಕೆ ಗುರಿಯಾಗಿದ್ದು, ಚರ್ಚೆಗೆ ಆಸ್ಪದವಾಗುತ್ತಿದೆ.
“ನಗರದಲ್ಲಿರುವ ಅಂಗಡಿಗಳು, ಹೋಟೆಲ್‍ಗಳು ಹಾಗೂ ರಸ್ತೆ ಬದಿ ಅಂಗಡಿಗಳನ್ನು ರಾತ್ರಿ 10-30 ಕ್ಕೆ ಮುಚ್ಚಿಸುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ರಾತ್ರಿ 9 ಗಂಟೆಗೆಲ್ಲ ಪೊಲೀಸರು ಬಂದು ಬಲವಂತವಾಗಿ ಮುಚ್ಚಿಸತೊಡಗುತ್ತಾರೆ. ವ್ಯಾಪಾರಸ್ಥರಲ್ಲಿ ಒಂದು ರೀತಿಯ ಭಯದ ವಾತಾವರಣ ಮೂಡಿಸಿಬಿಡುತ್ತಾರೆ. ಕೆಲವೊಮ್ಮೆ ಅಂಗಡಿ ಮಾಲೀಕರ ಜೊತೆ ಹಾಗೂ ದಾರಿಹೋಕರ ಜೊತೆ ಪೊಲೀಸರು ಅನುಚಿತವಾಗಿ ವರ್ತಿಸಿಬಿಡುತ್ತಾರೆ. ಆ ಮೂಲಕ ಪೊಲೀಸರೇ ವಸತಿ ಪ್ರದೇಶಗಳಲ್ಲಿ ಒಂದು ರೀತಿಯ ಭಯವನ್ನು ಸೃಷ್ಟಿಸಿಬಿಡುತ್ತಾರೆ” ಎಂಬುದೇ ಈಗ ನಾಗರಿಕ ವಲಯದ ಅಸಂತೋಷಕ್ಕೆ ಕಾರಣವಾಗುತ್ತಿದೆ.
“ನಾವು ಮಹಾನಗರ ಪಾಲಿಕೆಯಿಂದ ಅಧಿಕೃತ ಪರವಾನಗಿ ಪಡೆದೇ ವ್ಯಾಪಾರ -ವಹಿವಾಟು ನಡೆಸುತ್ತೇವೆ. ಅದಕ್ಕಾಗಿ ಪಾಲಿಕೆಗೆ ಶುಲ್ಕ ಪಾವತಿಸುತ್ತೇವೆ. ತೆರಿಗೆ ಕಟ್ಟುತ್ತೇವೆ. ಕಾನೂನಿನ ಪ್ರಕಾರ ನಗರದ ಒಳಗೇ ಜನನಿಬಿಡ ಪ್ರದೇಶಗಳಲ್ಲೇ ವ್ಯಾಪಾರ ಮಾಡುವ ನಾವು ಪೊಲೀಸರಿಂದ ಕಿರಿಕಿರಿಗೆ ಒಳಗಾಗಬೇಕೇ?” ಎಂಬ ಪ್ರಶ್ನೆ ಮೂಡುತ್ತಿದೆ.
ನಾಗರಿಕರಿಗಾದ ಕಹಿ ಅನುಭವ
“ನಾನೊಬ್ಬ ವ್ಯಾಪಾರಿ. ದೊಡ್ಡ ಮಳಿಗೆ ಇದೆ. ಬೆಳಗಿನಿಂದ ರಾತ್ರಿಯವರೆಗೆ ವ್ಯಾಪಾರ-ವಹಿವಾಟು ನಡೆಯುತ್ತದೆ. ನಗರದೊಳಗಿನ ವಸತಿ ಪ್ರದೇಶದಲ್ಲೇ ನನ್ನ ಮಳಿಗೆ ಇದೆ. ರಾತ್ರಿ ಇನ್ನೂ 10-15 ಇರಬಹುದು. ಆಗಷ್ಟೇ ಅಂಗಡಿ ಬೀಗ ಹಾಕಿ, ನನ್ನ ಅಂಗಡಿ ಮುಂದೆಯೇ ಸ್ನೇಹಿತರೊಡನೆ ಮಾತನಾಡುತ್ತಿದ್ದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸ್ ಕಾನ್ಸ್‍ಟೆಬಲ್ ಒಬ್ಬರು ಏಕಾಏಕಿ ಏಕವಚನದಲ್ಲೇ ನನ್ನೊಡನೆ ಅನುಚಿತವಾಗಿ ವರ್ತಿಸಿದರು.
ಮನೆಗೆ ಹೋಗುವಂತೆ ತಾಕೀತು ಮಾಡಿದರು. ಇದನ್ನೇ ಆ ಕಾನ್ಸ್‍ಟೆಬಲ್ ಗೌರವಯುತವಾಗಿ ತಿಳಿಸಬಹುದಿತ್ತು. ನಾವೇನು ಕ್ರಿಮಿನಲ್‍ಗಳೇ? ಇದೇ ರಸ್ತೆಯಲ್ಲೇ ನಾವು ಅಂಗಡಿ ನಡೆಸುತ್ತಿರುವುದು ಆ ಪೊಲೀಸರಿಗೆ ಗೊತ್ತಿಲ್ಲವೇ? ನಾವು ಸರ್ಕಾರಕ್ಕೆ ತೆರಿಗೆ ಪಾವತಿಸುವುದಿಲ್ಲವೇ? ನಮ್ಮೊಡನೆ ಹೇಗೆ ನಡೆದುಕೊಳ್ಳಬೇಕೆಂಬ ಕನಿಷ್ಟ ಸೌಜನ್ಯವೂ ಇಲ್ಲದಿದ್ದರೆ ಹೇಗೆ?” ಎಂದು ತೀವ್ರ ಬೇಸರದಿಂದಲೇ ಓರ್ವರು ಇತ್ತೀಚೆಗಷ್ಟೇ ತಮಗಾದ ಕಹಿ ಅನುಭವವನ್ನು ಹೇಳಿಕೊಂಡಿದ್ದು, ನಗರದ ಪರಿಸ್ಥಿತಿಗೊಂದು ಕೈಗನ್ನಡಿಯಂತಿದೆ.
“ಎಸ್ಪಿ ಅವರ ಉದ್ದೇಶ ಒಳ್ಳೆಯದಿರಬಹುದು. ಆದರೆ ಅದನ್ನು ಜಾರಿಗೊಳಿಸುವ ಕೆಳಹಂತದ ಪೊಲೀಸರು ನಾಗರಿಕರೊಡನೆ ಹೇಗೆ ವರ್ತಿಸಬೇಕೆಂಬುದನ್ನು ಅರಿಯದಿದ್ದರೆ ಹೇಗೆ? ಎಸ್ಪಿ ಅವರು ಈ ನಿಟ್ಟಿನಲ್ಲಿ ಪೊಲೀಸರಿಗೆ ಸೂಕ್ತ ಸಲಹೆ -ಸೂಚನೆ ಕೊಡುವುದು ಒಳ್ಳೆಯದು” ಎಂದೂ ಅವರು ಹೇಳಿದರು.
ಮತ್ತೊಬ್ಬ ನಾಗರಿಕರೂ ಇದೇ ಬಗೆಯ ಅನುಭವ ಹೇಳಿಕೊಂಡರು. ಅವರು ಹೇಳಿದ್ದು :- “ನನಗೆ ಬಿಡುವಾಗುವುದೇ ರಾತ್ರಿ 9 ಗಂಟೆಯ ಬಳಿಕ. ನನ್ನ ಮಗನೊಡನೆ ಮನೆಗೆ ಪದಾರ್ಥಗಳನ್ನು ತರಲು ನಗರದ ಗಂಗೋತ್ರಿ ರಸ್ತೆಯಲ್ಲಿ ರಾತ್ರಿ 9-30 ರಲ್ಲಿ ಹೋಗುತ್ತಿದ್ದೆ. ಆಗ ಪೊಲೀಸರು ನನ್ನನ್ನು ತಡೆದು ತಕ್ಷಣವೇ ಮನೆಗೆ ಹೋಗುವಂತೆ ತಾಕೀತು ಮಾಡಿದರು. ನಾವು ಯಾರು- ಏಕೆ ಹೋಗುತ್ತಿದ್ದೇ ವೆ ಎಂಬುದನ್ನು ಪೊಲೀಸರು ಮೊದಲು ವಿಚಾರಿಸಬೇಕಲ್ಲವೇ? ಹೀಗಾದರೆ ನಮ್ಮ ದಿನದ ಕೆಲಸಗಳ ಬಳಿಕ ರಾತ್ರಿ ಅಂಗಡಿಗಳಿಗೆ ತೆರಳುವುದು ಹೇಗೆ?”
“ರಾತ್ರಿ 10-30 ರ ಬಳಿಕ ಅಂಗಡಿ ಮುಚ್ಚಿಸಲು ಪೊಲೀಸರು ಕ್ರಮ ಕೈಗೊಳ್ಳುತ್ತಿರುವುದನ್ನು ಒಪ್ಪೊಣ. ಆದರೆ ನಗರದ ಶಾಂತಿನಗರ ಹಾಗೂ ಸುತ್ತು ಮುತ್ತ ರಾತ್ರಿ 9 ಗಂಟೆಗೆಲ್ಲ ಅಂಗಡಿಗಳನ್ನು ಪೊಲೀಸರು ಬಲವಂತವಾಗಿ ಮುಚ್ಚಿಸಿಬಿಡುತ್ತಾರೆ. ಇದು ಸರಿಯೇ? ಇದರಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೂ ತೊಂದರೆ, ಜನತೆಗೂ ತೊಂದರೆ ಆಗುವುದೆಂಬುದನ್ನು ಪೊಲಿಸರು ಗಮನಿಸುವುದಿಲ್ಲವೇ?” ಎಂದು ಅಲ್ಲಿನ ಓರ್ವರು ಪ್ರಶ್ನಿಸುತ್ತಾರೆ.
ನಗರದ ಹಾಗೂ ನಾಗರಿಕರ ಹಿತದೃಷ್ಟಿಯಿಂದ ಪೊಲೀಸರು ಕೆಲವೊಂದು ಕ್ರಮ ಜರುಗಿಸುವುದು ಸರಿ. ಆದರೆ ನಾಗರಿಕರ ಜೊತೆ ಪೊಲೀಸರು ಸೌಜನ್ಯದಿಂದ ನಡೆದುಕೊಳ್ಳಬೇಕು. ರಾತ್ರಿ 9 ಗಂಟೆ ನಂತರ ಶಾಪಿಂಗ್ ಮಾಡುವವರಿರುತ್ತಾರೆ. ತಮ್ಮ ದೈನಂದಿನ ಕೆಲಸ ಕಾರ್ಯಗಳ ಬಳಿಕ ರಾತ್ರಿ ಊಟ ಮುಗಿಸಿ 10 ಗಂಟೆ ಸುಮಾರಿನಲ್ಲಿ ತಮ್ಮ ಬಡಾವಣೆಯಲ್ಲಿ ವಾಕಿಂಗ್ ಮಾಡುವವರಿರುತ್ತಾರೆ.
ಆಸ್ಪತ್ರೆ-ನರ್ಸಿಂಗ್ ಹೋಂಗಳಿಗೆ ಹೋಗಿ ಬರುವವರು ಇರುತ್ತಾರೆ. ದೂರದ ಊರುಗಳಿಗೆ ಕೆಲಸಕ್ಕೆ ತೆರಳಿ ರಾತ್ರಿ ನಗರದಲ್ಲಿನ ಮನೆಗೆ ಹಿಂತಿರುಗುವವರು ಇರುತ್ತಾರೆ. ವಿವಿಧ ಉದ್ದಿಮೆಗಳಲ್ಲಿ ಕೆಲಸ ಮಾಡುವವರು, ಪರಸ್ಥಳೀಯರು, ವಿದ್ಯಾರ್ಥಿಗಳು ಮೊದಲಾದವರು ಊಟಕ್ಕೆ ರಾತ್ರಿ ವೇಳೆ ಬಹುತೇಕ ಬೀದಿಬದಿ ಅಂಗಡಿಗಳನ್ನು ಅವಲಂಬಿಸಿರುತ್ತಾರೆ. ಆದರೆ ರಾತ್ರಿ 9 ಗಂಟೆಗೆಲ್ಲ ಪೊಲೀಸರು ಜನಸಂಚಾರದ ಮೇಲೆ ನಿರ್ಬಂಧ ವಿಧಿಸತೊಡಗಿದರೆ, ಅದು ಇಂತಹ ಜನರಿಗೆ ತುಂಬ ತೊಂದರೆ ಉಂಟು ಮಾಡಲಿದೆ. ಆದ್ದರಿಂದ ಪೆÇಲೀಸರು ಇದನ್ನು ವ್ಯವಸ್ಥಿತವಾಗಿ ಜಾರಿಗೆ ತರಬೇಕು ಎಂಬುದು ಜನಾಭಿಪ್ರಾಯವಾಗಿದೆ.
ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ವೈನ್ ಶಾಪ್‍ಗಳ ವಿರುದ್ಧ ಪೊಲೀಸರು ಅವುಗಳ ಸಮಯಕ್ಕೆ ಅನುಗುಣವಾಗಿ ಕಠಿಣ ಕ್ರಮ ಕೈಗೊಳ್ಳಲಿ. ಇದಕ್ಕೆ ಯಾರ ತಕರಾರೂ ಇರುವುದಿಲ್ಲ. ಆದರೆ ಇತರೆ ವ್ಯಾಪಾರ -ವಹಿವಾಟು- ಹೋಟೆಲ್‍ಗಳು- ಬೀದಿಬದಿ ಹೋಟೆಲ್‍ಗಳಿಗೆ ರಾತ್ರಿ 10-30 ರವರೆಗೂ ಕಾಲಾವಕಾಶ ಕೊಡುವುದು ಒಳ್ಳೆಯದು. ರಾತ್ರಿ ವೇಳೆ ಯಾರೂ ಸಹ ಅನಗತ್ಯವಾಗಿ ಸಂಚರಿಸುವುದಿಲ್ಲ. ಕಾರಣವಿರುವವರು ಮಾತ್ರ ಸಂಚರಿಸುತ್ತಾರೆ. ಆದ್ದರಿಂದ ರಾತ್ರಿ ವೇಳೆ ಪೊಲೀಸರು ವಿಚಾರಣೆ ಮಾಡುವಾಗ ಸ್ವಲ್ಪ ವಿವೇಚನೆ ಉಪಯೋಗಿಸಬೇಕು . ನಾಗರಿಕರೊಡನೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ