ದಾವಣಗೆರೆ:
ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸಲು ಭಾನುವಾರ ರೋಟರಿ ಸಂಸ್ಥೆಯಿಂದ ನಗರದಲ್ಲಿ ಮಕ್ಕಳ ಸ್ಕೆಟಿಂಗ್ ಜಾಥಾ ನಡೆಸಲಾಯಿತು.ಅನಗರದ ಕ್ಕಮಹಾದೇವಿ ರಸ್ತೆಯಲ್ಲಿನ ಎವಿಕೆ ಕಾಲೇಜು ಎದುರು ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಅವರಿಂದ ಚಾಲನೆ ಪಡೆದ ಮಕ್ಕಳ ಸ್ಕೆಟಿಂಗ್ ಜಾಗೃತಿ ಜಾಥಾವು ಪಿಜೆ ಹೋಟೆಲ್ ವರೆಗೆ ಸಾಗಿ ಮುಕ್ತಾಯವಾಯಿತು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ದಿನೇಶ್ ಕೆ. ಶೆಟ್ಟಿ, ಯಾವುದೇ ಒಂದು ದೇಶದ ಅಭಿವೃದ್ಧಿಯು ಆರೋಗ್ಯಕರ ಮಕ್ಕಳ ಮೇಲೆ ನಿಂತಿರುತ್ತದೆ. ಹೀಗಾಗಿ ಮಕ್ಕಳಿಗೆ ಆರೋಗ್ಯ ಕಲ್ಪಿಸುವುದು ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಸರ್ಕಾರದ ಪೋಲಿಯೋ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿ ಹೊರಹೊಮ್ಮಿರುವುದು ಸಂತಸದ ಸಂಗತಿಯಾಗಿದೆ. ಪೋಲಿಯೋ ಲಸಿಕೆ ಹಾಕಿಸದಿದ್ದರೆ, ಮಕ್ಕಳ ಮೇಲುಂಟಾಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವುದು ನಿಜಕ್ಕೂ ಉತ್ತಮ ಕಾರ್ಯವಾಗಿದೆ ಎಂದರು.
ರೋಟರಿ ಮಾಜಿ ಜಿಲ್ಲಾ ರಾಜ್ಯಪಾಲ ಆರ್.ಎಸ್.ನಾರಾಯಣ ಸ್ವಾಮಿ ಮಾತನಾಡಿ, 1985ರಿಂದಲೂ ಸರ್ಕಾರ, ಸಂಘ, ಸಂಸ್ಥೆಗಳ ಜೊತೆಯಲ್ಲಿ ರೋಟರಿ ಸಂಸ್ಥೆ ಈ ಪೋಲಿಯೋ ನಿರ್ಮೂಲನಾ ಕಾರ್ಯಕ್ಕೆ ಕೈಜೋಡಿಸುತ್ತಾ ಬಂದಿದೆ. ಪ್ರಪಂಚದ 240 ದೇಶಗಳಲ್ಲಿ ಈಗ ಪೋಲಿಯೋ ಸಮಸ್ಯೆ ಇಲ್ಲ. ನಮ್ಮ ಭಾರತವು ಕಳೆದ 4 ವರ್ಷಗಳಿಂದ ಪೋಲಿಯೋ ಮುಕ್ತ ರಾಷ್ಟ್ರವಾಗಿ ಹೊರ ಹೊಮ್ಮಿದೆ ಎಂದು ಹೇಳಿದರು.
ರೋಟರಿ ಸಹಾಯಕ ರಾಜ್ಯಪಾಲ ವಿಶ್ವಜಿತ್ ಜಾಧವ್ ಮಾತನಾಡಿ, ಈ ಪಲ್ಸ್ ಪೋಲಿಯೋ ಲಸಿಕಾ ಜಾಗೃತಿ ಅಭಿಯಾನವನ್ನು ಹಿಂದುಳಿದ ಪ್ರದೇಶಗಳಲ್ಲಿ ಮಾಡುತ್ತಾ ಬಂದಿದ್ದು, ಈ ವರ್ಷ ಮಕ್ಕಳಿಂದ ವಿಶೇಷವಾಗಿ ರೋಲರ್ ಸ್ಕೆಟಿಂಗ್ ಮೂಲಕ ಜಾಥಾ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ನಮ್ಮ ಈ ಕಾರ್ಯಕ್ಕೆ ಸಹಕಾರ ನೀಡಿವೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಮಲ್ಲರಸಾ ಕಾಟ್ವೆ, ಬಸವರಾಜ್ ಹೆಚ್.ಜಿ., ನಯನ ಪಾಟೀಲ, ವಿಶಾಲ ಸಂಘವಿ, ಈಶ್ವರ ಸಿಂಗ್, ಬದ್ರಿನಾಥ, ಸುಜಿತ್, ಉಮೇಶ ಶೆಟ್ಟಿ, ಪವನ ಪಡಗಲ್, ನವಲೆ, ರೋಟರ್ಯಾಕ್ಟ್‍ನ ಅಧ್ಯಕ್ಷ ಪೃಥ್ವಿ, ಪ್ರವೀಣ ಕುಮಾರ್, ಮಹಮ್ಮದ್ ಗೌಸ್, ಶ್ರೀಕಾಂತ ಬಗಾರೆ, ಡಿ.ಎಂ.ನಾಗರಾಜ, ಸುರೇಶಕುಮಾರ, ಚನ್ನಬಸವ ಶೀಲವಂತ್, ಚೇತನಕುಮಾರ್, ರಾಜು ಭಂಡಾರಿ, ಯುವರಾಜ, ದಾವಣಗೆರೆ ಜಿಲ್ಲಾ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಡಿ.ಆರ್.ನರೇಂದ್ರ, ಕಾರ್ಯದರ್ಶಿ ನಿರಂಜನ ತೆಲಗಾವಿ ಮತ್ತಿತರರು ಭಾಗವಹಿಸಿದ್ದರು.