ಕಂಪ್ಯೂಟರ್ ಆಪರೇಟರ್ ವಿರುದ್ದ ರಾಜಕೀಯ ಷಡ್ಯಂತ್ರದ

ಕೊರಟಗೆರೆ:-

       ಹಗಲಿರುಳು ಶ್ರಮ ಪಟ್ಟು ಸರ್ಕಾರಿ ಕಛೇರಿಯ ಸಮಯಕ್ಕಿಂತಲೂ ಹೆಚ್ಚು ಕೆಲಸ ಮಾಡಿ, ರಾಜ್ಯದಲ್ಲಿ 7 ನೇ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಕಾರಣರಾದ ಕಂಪ್ಯೂಟರ್ ಆಪರೇಟರ್ ವಿರುದ್ದ ರಾಜಕೀಯ ಷಡ್ಯಂತ್ರದ ಮೂಲಕ ವರ್ಗಾವಣೆಗೊಳಿಸಲು ಕೆಲ ಜನರು ಪ್ರಯತ್ನ ಪಡುತ್ತಿರುವುದು ಖಂಡನೀಯ ವಿಚಾರವಾಗಿದೆ ಎಂದು ಗ್ರಾ, ಪಂ ಮಾಜಿ ಸದಸ್ಯ ಜಯರಾಮ್ ವಿಷಾದ ವ್ಯಕ್ತಪಡಿಸಿದರು.

      ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದ ನಾಡಕಚೇರಿಯಲ್ಲಿ ಸತತ 4 ವರ್ಷದಿಂದ ಕೆಲಸ ಮಾಡುತ್ತಿರುವ ಗೊರವನಹಳ್ಳಿ ಗ್ರಾಮದ ದಲಿತ ಯುವತಿ ರಾಜೇಶ್ವರಿ ವರ್ಗಾವಣೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿ ಬುಧವಾರ ಮಾತನಾಡಿದರು.
ನಾಡಕಚೇರಿ ಕಂಪ್ಯೂಟರ್ ಆಪರೇಟರ್ ವರ್ಗಾವಣೆ ಮಾಡುವಂತೆ ರಾಜಕೀಯ ಪಿತೂರಿ ನಡೆಸಿ ಮಾನ್ಯ ರಾಜ್ಯದ ಡಿಸಿಎಂ ಡಾ.ಜಿ.ಪರಮೇಶ್ವರ್‍ಗೆ ದೂರು ನೀಡಿರುವುದು ಸೂಕ್ತವಲ್ಲ. ಮಾನ್ಯ ಡಿಸಿಎಂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿದ ಪರಿಣಾಮ ಯುವತಿಯ ಮೇಲೆ ಆರೋಪ ಬಂದಿದೆ. ದಲಿತ ಮಹಿಳೆಯ ಮೇಲೆ ರಾಜಕೀಯ ಮುಖಂಡರು ದಬ್ಬಾಳಿಕೆ ನಡೆಸುವುದು ಸೂಕ್ತವಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

         ಹೊಳವನಹಳ್ಳಿ ಹೋಬಳಿ ಕೇಂದ್ರದ ನಾಡಕಚೇರಿಗೆ 100ಕ್ಕೂ ಹೆಚ್ಚು ಗ್ರಾಮಗಳಿಂದ ಪ್ರತಿನಿತ್ಯ ಸಾವಿರಾರು ರೈತರ ಜೊತೆ ಸಾರ್ವಜನಿಕರು ತಮ್ಮ ದೈನಂದಿನ ಕೆಲಸಕ್ಕಾಗಿ ಬರುತ್ತಾರೆ. ಇದೇ ನಾಡಕಚೇರಿಯಲ್ಲಿ ಕಳೆದ 4ವರ್ಷದಿಂದ ಗೊರವನಹಳ್ಳಿ ಗ್ರಾಮದ ರಾಜೇಶ್ವರಿ ಎಂಬ ಯುವತಿ ಕೆಲಸ ನಿರ್ವಹಿಸುತ್ತೀದ್ದಾರೆ. 4ವರ್ಷದ ಅವಧಿಯಲ್ಲಿ ಯಾವುದೇ ಒಂದು ದೂರು ಸಹ ವ್ಯಕ್ತವಾಗಿಲ್ಲ ಆದರೂ ಇವರ ಮೇಲಿನ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿದರು.

        ದಲಿತ ಮುಖಂಡ ನರಸಿಂಹಮೂರ್ತಿ ಮಾತನಾಡಿ ರಾಜಕೀಯ ಪಿತೂರಿಯಿಂದ ದಲಿತ ಯುವತಿಯ ಮೇಲೆ ದಬ್ಬಾಳಿಕೆ ಮಾಡುತ್ತೀದ್ದಾರೆ. ನಾಡಕಚೇರಿಯಲ್ಲಿ ಸಿಬ್ಬಂದಿಯ ಕೊರತೆಯ ನಡುವೆಯು ಸಹ ರಾಜೇಶ್ವರಿ ಎಂಬ ಯುವತಿ ನಾಲ್ಕು ವರ್ಷದಿಂದ ಉತ್ತಮ ಕೆಲಸ ನಿರ್ವಹಿಸಿದ ಪ್ರತಿಫಲವಾಗಿ ಜಿಲ್ಲೆಗೆ ಮೊದಲ ಸ್ಥಾನ ಬಂದಿದೆ. ಮಾನ್ಯ ಡಿಸಿಎಂ ಪರಮೇಶ್ವರ್ ಮತ್ತು ಮಧುಗಿರಿ ಎಸಿ ಚಂದ್ರಶೇಖರಯ್ಯ ಪರಿಶೀಲನೆ ನಡೆಸಿ ಮೊದಲು ಸ್ಥಳಿಯರ ಅಭಿಪ್ರಾಯ ಪಡೆಯಬೇಕು ಎಂದು ಆಗ್ರಹಿಸಿದರು.

      ಡಿಎಸ್‍ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಗಂಗಣ್ಣ ಮಾತನಾಡಿ ರಾಜ್ಯದ ಡಿಸಿಎಂ ಡಾ.ಜಿ.ಪರಮೇಶ್ವರ್ ಸಾರ್ವಜನಿಕರ ಕುಂದು ಕೊರತೆಯ ಸಭೆಯಲ್ಲಿ ಸಾರ್ವಜನಿಕರು ನೀಡುವ ದೂರನ್ನು ಪರಿಶೀಲನೆ ನಡೆಸಿ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಕೊರಟಗೆರೆ ಕ್ಷೇತ್ರದಲ್ಲಿ ರಾಜಕೀಯ ದ್ವೇಷದ ಸಾಧನೆ ಸರಿಯಲ್ಲ, ರಾಜಕೀಯ ಮುಖಂಡರ ವೈಯಕ್ತಿಕ ದ್ವೇಷದಿಂದ ಕೊರಟಗೆರೆಯಲ್ಲಿ ದಲಿತ ಸರಕಾರಿ ಅಧಿಕಾರಿಗಳ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ಮಾಡಬಾರದು. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೇದರೆ ಬೀದಿಗಿಳಿದು ಉಗ್ರ ಹೋರಾಟ ಮಾಡುವುದು ಎಂದು ಎಚ್ಚರಿಕೆ ನೀಡಿದರು.

       ಈ ಸಂದರ್ಭದಲ್ಲಿ ಬೈಚಾಪುರ ಗ್ರಾಪಂ ಅಧ್ಯಕ್ಷೆ ಗಿರಿಯಮ್ಮ, ದಲಿತ ಮುಖಂಡರಾದ ನರಸಿಂಹಯ್ಯ, ನಾಗರಾಜು, ರಂಗನಾಥ, ನರಸಿಂಹಮೂರ್ತಿ, ಲಕ್ಷ್ಮಮ್ಮ, ಲಕ್ಷ್ಮೀಕಾಂತ, ಶಿವಕುಮಾರ್, ವೆಂಕಟೇಶ್, ತಿಮ್ಮಯ್ಯ, ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link