ಬೆಂಗಳೂರು
ಪ್ರಗತಿಪರರ ಹೋರಾಟಗಳಿಂದ ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ ಸೇರಿ ಜಾತ್ಯತೀತ ಪಕ್ಷಗಳ ಮುಖಂಡರುಗಳು ರಾಜಕೀಯ ಲಾಭ ಪಡೆದುಕೊಂಡರೂ ವೈಚಾರಿಕತೆ ಜ್ಞಾನವು ಇಲ್ಲದಂತೆ ನಡೆದುಕೊಳ್ಳುತ್ತಾ ಮೌಢ್ಯಕ್ಕೆ ಮೊರೆ ಹೋಗುತ್ತಾರೆ ಎಂದು ಪ್ರಗತಿಪರ ಚಿಂತಕಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಬೇಸರ ವ್ಯಕ್ತಪಡಿಸಿದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಬಗ್ಗೆ ಕ್ಷಮೆ ಯಾಚಿಸಿ ಸರ್ಕಾರ ತಪ್ಪು ಮಾಡಿತ್ತು ಎಂದು ಹೇಳಿ ಜನಪರ ಹೋರಾಟವನ್ನು ತಣ್ಣಗಾಗಿಸಲು ಮುಂದಾದರು. ಇದಲ್ಲದೇ ಮೌಢ್ಯನಂಬಿಕೆಗೆ ಕಡಿವಾಣ ಹಾಕುವ ಕಾಯ್ದೆ ಜಾರಿಗೆ ಕೆಲವು ಜಾತ್ಯತೀತ ಪಕ್ಷಗಳ ಜನಪ್ರತಿನಿಧಿಗಳು ಅಡ್ಡಗಾಲು ಹಾಕಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ನಗರದಲ್ಲಿ ಬುಧವಾರ ಕೆಆರ್ ವೃತ್ತದ ಯುವಿಇಸಿ ಆಲ್ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ, ಬಹುತ್ವ ಭಾರತಕ್ಕಾಗಿ ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಕುರಿತ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಜಾತ್ಯತೀತ ಪಕ್ಷಗಳ ಮುಖಂಡರ ನಡೆಯಿಂದ, ಪ್ರಗತಿಪರರು, ಶತ್ರುವಿನ ಮುಂದೆ ಮಂಡಿಯೂರಿದಂತೆ ಆಗಿದೆ ಎಂದರು.
ದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಹಾಗೂ ಆರ್‍ಎಸ್‍ಎಸ್, ವಿಎಚ್‍ಪಿಯ ಜನ ನಿರಂತರ ಒತ್ತಡ ಹೇರಿ ಸಂವಿಧಾನ, ಅದರಲ್ಲೂ ಮೀಸಲಾತಿ ವಿಧೇಯಕ ತಿದ್ದುಪಡಿ ಮಾಡಲು ಒಳ ಪ್ರಯತ್ನ ಮಾಡುತ್ತಿದ್ದಾರೆ. ಸುಮ್ಮನಿದ್ದರೆ ಮೀಸಲಾತಿ ತೆಗೆದು ಹಾಕುತ್ತಾರೆ. ಇದರಿಂದ ದಲಿತರ ಸಮಾಧಿ ಖಂಡಿತ ಆಗುತ್ತದೆ. ಆದ್ದರಿಂದ ಒಗ್ಗಟ್ಟಿನ ಹೋರಾಟ ಅಗತ್ಯ ಎಂದು ಪತ್ರಿಪಾದಿಸಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಮಾತನಾಡಿ, ಜನಸಾಮಾನ್ಯರ ಬಳಿಗೆ ಹೋಗಿ ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಮಾತಾಡಬೇಕಿದೆ. ಇಂತಹ ಕಾರ್ಯಕ್ರಮಗಳು ದಿನನಿತ್ಯ ನಡೆಯಬೇಕಿದೆ ಎಂದು ನುಡಿದರು.
ರಾಜ್ಯ ಹಿಂದುಳಿದ ವಗಘಗಳ ಆಯೋಗದ ಮಾಜಿ ಅಧ್ಯಕ್ಷ, ಚಿಂತಕ ಡಾ.ಸಿ.ಎಸ್.ದ್ವಾರಕನಾಥ್ ಮಾತನಾಡಿ, ಪುರಾತನ ಕಾಲದಿಂದಲೂ ಭಾರತವು ಮುಕ್ತ ಯೋಚನೆಗಳ, ವಾಕ್ ಮತ್ತು ಅಭಿವ್ಯಕ್ತಿಯ ನೆಲೆಬೀಡು. ನಮ್ಮ ಸಂವಿಧಾನದಲ್ಲೂ ಇದನ್ನು ಪ್ರಮುಖ ಮೂಲಭೂತ ಹಕ್ಕು ಎಂದು ಗುರುತಿಸಲಾಗಿದೆ. ಇಂತಹ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಹೇಳಿದರು.
ದೇಶದ ಸಂವಿಧಾನ ತಿದ್ದುಪಡಿ, ಬದಲಾವಣೆ ಮಾಡುವುದರಿಂದ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಆಶಯ ಸಮಾಧಿ ಮಾಡಿದಂತೆ ಎಂದ ಅವರು, ಪ್ರಗತಿಪರ ವಿಚಾರವುಳ್ಳವರಿಗೆ ರಾಜಕೀಯ ಅಧಿಕಾರ ದೊರೆಯಬೇಕು ಎಂದು ತಿಳಿಸಿದರು. ಸಭೆಯಲ್ಲಿ ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಹೋರಾಟಗಾರ ಟಿ.ನರಸಿಂಹ ಮೂರ್ತಿ, ಕೆ.ಬಿ.ಓಬಳೇಶ್, ರಾಜೇಂದ್ರ ಇದ್ದರು.
ಜೀವ ಬೆದರಿಕೆ:
ಪ್ರಗತಿಪರ ಚಿಂತಕಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಅವರಿಗೆ ಅನಾಮಿಕ ವ್ಯಕ್ತಿಯೊಬ್ಬ, ಕಳೆದ ನಾಲ್ಕು ದಿನಗಳಿಂದ ನಿರಂತರ ಅವರ ಮೊಬೈಲ್‍ಗೆ ಕರೆ ಮಾಡಿ, ಜೀವ ಬೆದರಿಕೆ ಹಾಕುತ್ತಿದ್ದಾನೆ.
ಕಳೆದ ನಾಲ್ಕು ದಿವಸಗಳಿಂದ ಅನಾಮಿಕ ವ್ಯಕ್ತಿ ಮೊಬೈಲ್‍ಗೆ ಕರೆ ಮಾಡಿದ್ದಾನೆ. ಆದರೆ ಮಾತನಾಡುವುದಿಲ್ಲ. ಪ್ರಶ್ನೆ ಮಾಡಿದರೂ, ಉತ್ತರಿಸುವುದಿಲ್ಲ, ನಾಲ್ಕು ದಿನಗಳಿಂದ ಬರೋಬ್ಬರಿ 108ಕ್ಕೂ ಅಧಿಕ ಬಾರಿ ಒಂದೇ ಸಂಖ್ಯೆಯಿಂದ ಕರೆ ಬಂದಿದೆ ಎಂದು ಲಲಿತಾ ನಾಯ್ಕ್ ತಿಳಿಸಿದ್ದಾರೆ.
ಇನ್ನೂ ಈ ಮೊಬೈಲ್ ನಂಬರ್‍ನ್ನು ತಮ್ಮ ಫೋನ್‍ನಲ್ಲಿ ‘ಯಾರು’? ಎಂದು ನಮೂದಿಸಿಕೊಂಡಿದ್ದೇನೆ. ನಾಲ್ಕು ದಿನಗಳಿಂದ ಬಳ್ಳಾರಿ ಉಪ ಚುನಾವಣೆ ಪ್ರಚಾರ ಕಾರ್ಯ ಸೇರಿದಂತೆ ರಾಜ್ಯದಲ್ಲೆಡೆ ಸುತ್ತಾಡುತ್ತಿದ್ದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ದೂರು ನೀಡುವೆ:
ಇಂದು ಅಥವಾ ನಾಳೆ, ಸಂಜಯ್ ನಗರ ಪೆÇಲೀಸ್ ಠಾಣೆಗೆ ಹಾಗೂ ಸೈಬರ್ ಕ್ರೈಮ್ ಪೆÇಲೀಸರಿಗೆ ದೂರು ನೀಡುವೆ. ಇನ್ನೂ ಈ ಅನಾಮಿಕ ಕರೆ ಬಗ್ಗೆ ನಿರ್ಲಕ್ಷ್ಯ ತೋರುವುದಿಲ್ಲ. ಗೆಳೆತಿ, ಪತ್ರಕರ್ತೆ ಗೌರಿಯಂತೆ ನನಗೂ ಏನಾದರೂ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ