ಶಿರಾ
ಆಕಸ್ಮಿಕವಾಗಿ ದಾಳಿಂಬೆ ತೋಟಕ್ಕೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ದಾಳಿಂಬೆ ಬೆಳೆ ಸುಟ್ಟು ನಷ್ಟ ಸಂಭವಿಸಿರುವ ಘಟನೆ ಶಿರಾ ತಾಲೂಕಿನ ವಾಜರಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ವಾಜರಹಳ್ಳಿ ಸರ್ವೆ ನಂಬರ್‍ನಲ್ಲಿ 6 ಎಕರೆ ಜಮೀನು ಹೊಂದಿದ್ದ ಸಾಕಮ್ಮ ಎಂಬುವರು 2 ಎಕರೆಯಲ್ಲಿ ದಾಳಿಂಬೆ ತೋಟ ಮಾಡಿದ್ದರು. ಹಿರಿಯೂರು ತಾಲೂಕಿನ ಧರ್ಮಪುರ ವಿಜಯ ಬ್ಯಾಂಕ್‍ನಲ್ಲಿ 3.30 ಲಕ್ಷ ರೂಪಾಯಿ ಬೆಳೆ ಸಾಲ ಪಡೆದು ದಾಳಿಂಬೆ ತೋಟ ಕಟ್ಟಿ ಕೊಂಡಿದ್ದರು.
ತೋಟದಲ್ಲಿ ದಾಳಿಂಬೆ ಬೆಳೆ ಉತ್ತಮವಾಗಿತ್ತು ಎನ್ನಲಾಗಿದ್ದು ಈ ಭಾರಿ ಕಟಾವು ಮಾಡಿದ್ದರೆ 6 ಲಕ್ಷ ರೂಪಾಯಿ ಹಣ ಕೈ ಸೇರುತ್ತಿತ್ತು ಆದರೆ ಭಾನುವಾರ ಸಂಜೆ ದಾಳಿಂಬೆ ತೋಟಕ್ಕೆ ಏಕಾ ಏಕಿ ಬೆಂಕಿ ಬಿದ್ದ ಕಾರಣ ನೋಡು ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ತೋಟ ಆಹುತಿಯಾಗಿದ್ದು ಗ್ರಾಮ ಹಲವಾರು ಜನ ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ರೈತ ಮುಖಂಡರಾದ ಕೃಷ್ಣೇಗೌಡ, ವಾಜರಹಳ್ಳಿ ರೈತ ಸಂಘದ ಅಧ್ಯಕ್ಷ ಚಿಕ್ಕಣ್ಣ, ಪುಟ್ಟಹನುಮಂತಯ್ಯ, ಈರಣ್ಣ ಸೇರಿದಂತೆ ರೈತ ಮುಖಂಡರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭರವಸೆಯಾಗಿ ಉಳಿದ ಸಾಲಮನ್ನಾ:2017 ರಲ್ಲಿ ವಿಜಯ ಬ್ಯಾಂಕ್‍ನಲ್ಲಿ 3.30 ಲಕ್ಷ ರೂಪಾಯಿ ಹಣ ಬೆಳೆ ಸಾಲ ಪಡೆದಿದ್ದ ಸಾಕಮ್ಮಳಿಗೆ ಸಾಲ ಮನ್ನಾವಾಗದೆ ಇರುವುದು ಅಚ್ಚರಿ ಮೂಡಿಸಿದೆ. ಕಳೆದ ಫೆ.25 ರಲ್ಲಿ ಮುಖ್ಯ ಮಂತ್ರಿಗಳಿಂದ ಪತ್ರ ಬಂದಿದ್ದು ನಿಮ್ಮ ಸಾಲಮನ್ನಾ ಮಾಡುತ್ತೇವೆ ಎಂಬ ಭರವಸೆ ಬಿಟ್ಟರೆ ಮನ್ನಾ ಆಗಿರುವ ಋಣಪತ್ರ ಬಂದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
