ಕೆಪಿಸಿಸಿ ಮಹಿಳಾ ಘಟಕದಿಂದ ಅಂಚೆ ಕಾಗದ ಚಳವಳಿ

ತುಮಕೂರು

    ದೇಶದಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು ಖಂಡಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಇಂದು ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ತುಮಕೂರಿನಲ್ಲಿ ಪತ್ರ ಚಳವಳಿ ನಡೆಸಲಾಯಿತು.

    ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಅವರ ನೇತೃತ್ವದಲ್ಲಿ ತುಮಕೂರು ಕಾಂಗ್ರೆಸ್ ಮಹಿಳಾ ಘಟಕದ ಪದಾಧಿಕಾರಿಗಳು ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಅಂಚೆ ಕಚೇರಿಯವರೆಗೆ ತೆರಳಿ, ಹತ್ರಾಸ್ ಸಂಸ್ಥೆಯ ವಿರುದ್ದ ಹರಡುತ್ತಿರುವ ತಪ್ಪು ಸಂದೇಶವನ್ನು ನಿಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ ಅಂಚೆ ಮತ ಪತ್ರವನ್ನು ಪ್ರಧಾನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ರಾಷ್ಟ್ರಪತಿಗಳಿಗೆ ಪೋಸ್ಟ್ ಮಾಡುವ ಮೂಲಕ ಚಳವಳಿ ಆರಂಭಿಸಿದರು.

    ಇದಕ್ಕೂ ಮೊದಲು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಪುಷ್ಪ ಅಮರನಾಥ್, ಬಿಜೆಪಿ ಸರಕಾರದಲ್ಲಿ ದೇಶದಲ್ಲಿ ಶೇ.50 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ತಾಯಿಯಾಗಿ, ಹೆಂಡತಿಯಾಗಿ, ತಂಗಿಯಾಗಿ, ಅಕ್ಕನಾಗಿ, ಮಗಳಾಗಿ ಸಮಾಜದಲ್ಲಿ ತನ್ನದೆ ಆದ ಸ್ಥಾನಮಾನ ಹೊಂದಿರುವ ಮಹಿಳೆಯರ ಮೇಲೆ ಪ್ರತಿ ಹದಿನೈದು ನಿಮಿಷಕ್ಕೊಂದು ಮಾನಭಂಗ ಪ್ರಕರಣಗಳು ಜರುಗುತ್ತಿವೆ.

    ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಘಟನೆ ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು, ತನ್ನ ಮೇಲೆ ನಡೆದಿರುವ ಅತ್ಯಂತ ಅಮಾನವೀಯ ಕೃತ್ಯವನ್ನು ಸಂತ್ರಸ್ತ ಮಹಿಳೆ ಮರಣಕ್ಕೂ ಮುನ್ನ ಹೇಳಿಕೆ ನೀಡಿದ್ದರೂ ಅದನ್ನು ಪರಿಗಣಿಸದೆ, ಆಕೆಯನ್ನು ನೋಡಲು ಕುಟುಂಬದವರಿಗೆ ಅವಕಾಶ ನೀಡದೆ ಮರಣೋತ್ತರ ಪರೀಕ್ಷೆ ನಡೆಸಿ, ರಾತ್ರೋರಾತ್ರಿ ಸುಟ್ಟು ಹಾಕಿರುವುದು ದುರಂತವೆ ಸರಿ. ಮಹಿಳೆಯರಿಗೆ ರಕ್ಷಣೆ ನೀಡಲು ಸಾಧ್ಯವಾಗದ ಮೇಲೆ ಪ್ರಧಾನಿಯಾಗಲಿ, ಅಲ್ಲಿನ ಮುಖ್ಯಮಂತ್ರಿಯಾಗಲಿ ಅಧಿಕಾರದಲ್ಲಿ ಇರಲು ಯೋಗ್ಯರಲ್ಲ ಎಂದರು.

    ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಮಹಾತ್ಮಗಾಂಧಿ ಮಹಿಳಾ ಸ್ವಾತಂತ್ರದ ಬಗ್ಗೆ ಅಪಾರ ಕನಸು ಕಂಡಿದ್ದರು. ಆದರೆ ಬಿಜೆಪಿ ಸರಕಾರದಲ್ಲಿ ಅವರ ಆಶಯಗಳಿಗೆ ತದ್ವಿರುದ್ದವಾದ ಪ್ರಕ್ರಿಯೆಗಳು ಜರುಗುತ್ತಿವೆ. ಆರ್.ಆರ್. ನಗರ ಉಪಚುನಾವಣೆಯಲ್ಲಿ ಮಹಿಳೆಯೊಬ್ಬರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವುದನ್ನು ಸಹಿಸದ ಬಿಜೆಪಿ ಕಾರ್ಯಕರ್ತರು ಆಕೆಯ ವಿರುದ್ದ ವೈಯಕ್ತಿಕ ನಿಂದನೆ ಮಾಡಿರುವುದಲ್ಲದೆ, ನೀತಿ ಸಂಹಿತೆ ಉಲ್ಲಂಘನೆ ಕೇಸು ದಾಖಲಿಸಿ, ಅನಗತ್ಯ ತೊಂದರೆ ನೀಡಲಾಗುತ್ತಿದೆ. ಬಿಜೆಪಿ ಸಂಸದೆ ಶೋಭಾ ಕರಂದಾಜ್ಲೆ ನೀಡಿರುವ ಹೇಳಿಕೆ ಇಡೀ ಸ್ತ್ರೀಕುಲಕ್ಕೆ ಅಪಮಾನ ಎಂದು ಡಾ.ಪುಷ್ಪ ಅಮರನಾಥ್ ನುಡಿದರು.

   ಕೋವಿಡ್ ಹೆಸರಿನಲ್ಲಿ ದೇಶದ ಪ್ರಧಾನಿ ಸರಕಾರದ ವಿರುದ್ದ ಇರುವ ಜನಾಕ್ರೋಶವನ್ನು ವ್ಯಕ್ತಪಡಿಸಲು ಇರುವ ಪ್ರತಿಭಟನೆ ಎಂಬ ಅಸ್ತ್ರವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಆರ್.ಆರ್. ನಗರ ಉಪಚುನಾವಣೆಯಲ್ಲಿ ಬಿಜೆಪಿಯವರು ಕುತಂತ್ರ ಮಾಡಿ, ಡಿ.ಕೆ.ರವಿ ಅವರ ತಾಯಿಯವರ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಮೇಲೆ ಇಲ್ಲ, ಸಲ್ಲದ ಹೇಳಿಕೆಗಳನ್ನು ಹೇಳಿಸುತ್ತಿದ್ದಾರೆ. ಇದು ಆ ಪಕ್ಷಕ್ಕೆ ಶೋಭೆ ತರುವಂತಹ ನಡವಳಿಕೆಯಲ್ಲ. ಒಬ್ಬ ಮಹಿಳೆಯ ಬೆನ್ನಿಗೆ ನಿಲ್ಲಬೇಕಾದ ಮಹಿಳೆಯರೆ, ಭಾವನಾತ್ಮಕ ವಿಚಾರಗಳನ್ನು ಕೆದಕಿ, ಆಗಿರುವ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಮುರಳಿಧರ ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರುದ್ರೇಶ್, ಕೆಪಿಸಿಸಿ ಮಹಿಳಾ ಘಟಕದ ಗೀತಾ ರಾಜಣ್ಣ, ಶುಭ ವೇಣುಗೋಪಾಲ್, ಶುಭದಾಯಿನಿ, ಪುಷ್ಪವಲ್ಲಿ, ಜಿಲ್ಲಾ ಕಾಂಗ್ರೆಸ್‍ನ ನಾಗಮಣಿ, ಗೀತಮ್ಮ, ಸುಜಾತ, ಓಬಿಸಿ ಸೆಲ್‍ನ ಅಧ್ಯಕ್ಷ ಪುಟ್ಟರಾಜು ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap