ಚಿತ್ರದುರ್ಗ;
ಚಿತ್ರದುರ್ಗ ಜಿಲ್ಲೆಯ ವಿವಿಧ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಸದ್ಯ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಮೂಲಕ, ಖಾಲಿ ಇರುವ ಪೌರಕಾರ್ಮಿಕರ ಹುದ್ದೆ ತುಂಬುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಫಾಯಿ ಕರ್ಮಚಾರಿಗಳಿಗೆ ವಿವಿಧ ಇಲಾಖೆಗಳ ಮೂಲಕ ಒದಗಿಸಲಾಗುವ ಯೋಜನೆಗಳ ಅನುಷ್ಠಾನ ಹಾಗೂ ಪುನರ್ವಸತಿ ಕಲ್ಪಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿರುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಗಳಲ್ಲಿ ನೂರಾರು ಪೌರಕಾರ್ಮಿಕರು ಸ್ವಚ್ಛತೆಯ ಸೇವೆ ಸಲ್ಲಿಸುತ್ತಿದ್ದು, ಈ ಪೈಕಿ ಕೆಲವರು ಖಾಯಂ ಪೌರಕಾರ್ಮಿಕರಿದ್ದರೆ, ಉಳಿದವರು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸಮರ್ಪಕ ವೇತನ ದೊರೆಯುತ್ತಿಲ್ಲ, ಗುತ್ತಿಗೆ ಏಜೆನ್ಸಿಯವರು ಸಿಬ್ಬಂದಿಗೆ ಸರಿಯಾಗಿ ವೇತನ ನೀಡದೆ ಶೋಷಣೆ ನಡೆಸುತ್ತಿರುವ ಕುರಿತು ಸಾಕಷ್ಟು ದೂರುಗಳು ಆಯೋಗಕ್ಕೆ ಬಂದಿವೆ. ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಮಂಜೂರಾಗಿರುವ ಪೌರಕಾರ್ಮಿಕರ ಹುದ್ದೆಗಳಿಗೆ ಅನುಗುಣವಾಗಿ, ಖಾಲಿ ಇರುವ ಹುದ್ದೆಗಳನ್ನು, ಸದ್ಯ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಿ, ತುಂಬಲು ಈಗಾಗಲೆ ಅಧಿಸೂಚನೆ ಹೊರಡಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಈಗಾಗಲೆ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ.
ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಇನ್ನೂ ಪೂರ್ಣಗೊಂಡಿಲ್ಲ. ಅನಗತ್ಯವಾಗಿ ವಿಳಂಬವಾಗುವುದನ್ನು ತಪ್ಪಿಸಿ, ನಿಯಮಾನುಸಾರ ಕೂಡಲೆ ಖಾಯಂಗೊಳಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಅವರು ಹೇಳಿದರು. ಇದಕ್ಕೆ ಉತ್ತರಿಸಿದ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಅವರು, ಚಿತ್ರದುರ್ಗ ನಗರಸಭೆಯಲ್ಲಿ 127 ಪೌರಕಾರ್ಮಿಕರ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 57 ಜನ ಖಾಯಂ ಸಿಬ್ಬಂದಿಗಳಿದ್ದ್ದಾರೆ, 55 ಜನ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದು, 55 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಅದೇ ರೀತಿ ಜಿಲ್ಲೆಯ ಇತರೆ ನಗರ, ಸ್ಥಳೀಯ ಸಂಸ್ಥೆಗಳಲ್ಲೂ ಪೌರಕಾರ್ಮಿಕರ ಖಾಯಮಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಸರ್ಕಾರದ ನಿಯಮದಂತೆ ಪೌರಕಾರ್ಮಿಕರ ಹುದ್ದೆಗಳಿಗೆ ಎಲ್ಲ ವರ್ಗದವರಿಗೂ ಅವಕಾಶವಿದೆ. ಆದರೆ, ಪರಿಶಿಷ್ಟರು ಮಾತ್ರ ಈ ಕೆಲಸ ನಿರ್ವಹಿಸುವುದರಿಂದ, ಮೀಸಲಾತಿಗೆ ಅನುಗುಣವಾಗಿ ಇತರೆ ವರ್ಗದವರಿಂದ ಅರ್ಜಿಗಳು ಬಂದಿಲ್ಲ. ಪರಿಶಿಷ್ಟ ಜಾತಿಯ ವರ್ಗದ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೆ ಕ್ರಮ ಕೈಗೊಂಡಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿ ಸಿದ್ಧಗೊಂಡಿದೆ. ಆಕ್ಷೇಪಣೆ ಆಹ್ವಾನಿಸಿ, ನಿಯಮಾನುಸಾರ ಶೀಘ್ರವೇ ನೇಮಕ ಆದೇಶ ನೀಡಲಾಗುವುದು. ಖಾಲಿ ಉಳಿಯುವ ಹುದ್ದೆಗಳಿಗೂ ಮೀಸಲಾತಿಯನ್ನು ಸಡಿಲಿಸಿ, ಪರಿಶಿಷ್ಟರನ್ನೇ ನೇಮಿಸಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಖಾಯಂ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲು ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ. ನಿವೇಶನ ಖರೀದಿಸಲು 49 ಲಕ್ಷ ರೂ. ಅನುದಾನವನ್ನು ಸರ್ಕಾರ ಒದಗಿಸಿದೆ ಎಂದರು.
ವಿದ್ಯಾರ್ಹತೆ ಸಡಿಲಿಸಲು ಕ್ರಮ : ಜಿಲ್ಲೆಯ 189 ಗ್ರಾಮ ಪಂಚಾಯತಿಗಳಲ್ಲಿ ಕನಿಷ್ಟ 02 ರಿಂದ 07 ಜನ ಸ್ವಚ್ಛತೆಯ ಕೆಲಸ ಮಾಡುತ್ತಿದ್ದು, ಪ್ರತಿ ಗ್ರಾಮ ಪಂಚಾಯತಿಗೂ 05 ಖಾಯಂ ಸಿಬ್ಬಂದಿಗಳನ್ನು ಸ್ವಚ್ಛತೆಗಾಗಿ ನೇಮಿಸಲು ಮಂಜೂರಾತಿ ದೊರೆತಿದೆ. ಇದಕ್ಕಾಗಿ ಕನಿಷ್ಟ ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು, ಸದ್ಯ ಕೆಲಸ ಮಾಡುತ್ತಿರುವವರನ್ನು ಖಾಯಂಗೊಳಿಸಲು ಆದ್ಯತೆ ನೀಡಲಾಗುತ್ತಿದೆ. ಆದರೆ, ಕನಿಷ್ಟ ವಿದ್ಯಾರ್ಹತೆ ನಿಗದಿಯಿಂದ ಹುದ್ದೆಗಳನ್ನು ತುಂಬಲು ತೊಂದರೆಯಾಗಿದೆ ಎಂದು ಜಿ.ಪಂ. ಉಪಕಾರ್ಯದರ್ಶಿಗಳು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಅವರು, ಪೌರಕಾರ್ಮಿಕರು ಹಾಗೂ ಗ್ರಾ.ಪಂ. ಗಳಲ್ಲಿ ಸ್ವಚ್ಛತೆ ಕೆಲಸದವರನ್ನು ತುಂಬಲು ನಿಗದಿಪಡಿಸಿರುವ ಕನಿಷ್ಟ ವಿದ್ಯಾರ್ಹತೆ ಮಿತಿಯನ್ನು ತೆಗೆದುಹಾಕುವಂತೆ ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಫಲಾನುಭವಿಗಳ ಆಯ್ಕೆ ತ್ವರಿತವಾಗಲಿ : ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವತಿಯಿಂದ, ಸಫಾಯಿ ಕರ್ಮಚಾರಿಗಳ ಕುಟುಂಬಗಳಿಗೆ ಸಾಲ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಎರಡು ಬಾರಿ ಅರ್ಜಿ ಆಹ್ವಾನಿಸಲಾಗಿದ್ದು, ಇದುವರೆಗೂ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದಿರುವ ಕುರಿತು ಮಾಹಿತಿ ಪಡೆದ ಆಯೋಗದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಶೀಘ್ರವೇ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದು, ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳ ಹಿತಕಾಯಲು ಸರ್ಕಾರ ರೂಪಿಸಿರುವ ಗೃಹಭಾಗ್ಯ, ಪೌರಕಾರ್ಮಿಕರ ಖಾಯಮಾತಿ, ಸಾಲ ಸಾಲಭ್ಯ, ಆರೋಗ್ಯ ತಪಾಸಣೆ ಮುಂತಾದ ಕಾರ್ಯಕ್ರಮಗಳನ್ನು ಸಮರ್ಪಕ ಅನುಷ್ಠಾನಗೊಳಿಸಲು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತ್ವರಿತ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್, ಡಿಡಿಪಿಐ ಆ್ಯಂಟನಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿಗಳು ಪಾಲ್ಗೊಂಡಿದ್ದರು.
