ಹರಿಹರ :
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ನಗರಗಳಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಅನೇಕ ಗಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಬಂದು ಕಾಮಗಾರಿಯನ್ನು ವೀಕ್ಷಿಸದೇ, ಕಚೇರಿಯಲ್ಲಿಯೇ ಕುಳಿತು, ಗುತ್ತಿಗೆದಾರ ನೀಡುವ ಕಾಮಗಾರಿಯ ಬಿಲ್ಲುಗಳನ್ನು ಪಾಸ್ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ತಾಲೂಕಿನ ರಾಜನಹಳ್ಳಿ, ಹನಗವಾಡಿ, ಹರಗನಹಳ್ಳಿ, ಎಕ್ಕೆಗೊಂದಿ, ತಿಂಪ್ಲಾಪುರ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಏತ ನೀರಾವರಿ ಘಟಕಗಳು ಸಾವಿರರು ಎಕ್ಟರ್ ಪ್ರದೇಶದ ರೈತರ ಜಿವ ನಾಡಿಯಾಗಿವೆ. ಬೆಳಕೆರೆಗ್ರಾಮದಲ್ಲಿನ ಕೆರೆಯಿಂದ ಬರುವ ಹಳ್ಳಕ್ಕೆ ಮೂರು ಏತನೀರಾವರಿ ಘಟಕ ಹಾಗೂ ತುಂಗಭದ್ರ ನದಿಗೆ ಎರಡು ಘಟಕವನ್ನು 1984ರಲ್ಲಿಯೇ ನಿರ್ಮಿಸಲಾಗಿದೆ.
ತಾಲೂಕಿನ ನಾಲ್ಕು ಘಟಕಗಳಲ್ಲಿ ಕೇವಲ ಮೂರು ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ, ಉಳಿದ ಘಟಕಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ.
ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಲೆಕ್ಕದಲ್ಲಿ ಐದು ಘಟಕಗಳು ತಾಲೂಕಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರತಿ ಘಟಕದಲ್ಲಿಯೂ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪ್ರತಿ ತಿಂಗಳೂ ಸಹ ಸರ್ಕಾರದ ವೇತನ ನೀಡಲಾಗುತ್ತಿದೆ. ಆದರೆ ತಾಲೂಕಿನಲ್ಲಿ ಕೇವಲ ಮೂರು ಏತನೀರಾವರಿ ಘಟಕಗಳು ಮಾತ್ರ ಚಾಲ್ತಿಯಲ್ಲಿವೆ. ಅವು ಹರಗನಹಳ್ಳಿ, ಹನಗವಾಡಿ ಮತ್ತು ರಾಜನಹಳ್ಳಿಯ ಘಟಕಗಳು. ಉಳಿದ ಎಕ್ಕೆಗೊಂದಿ ಮತ್ತು ತಿಮ್ಲಾಪುರ ಘಟಕಗಳು ರೈತರ ಜಮೀನುಗಳಿಗೆ ನೀರನ್ನು ನೀಡುವ ಕೆಲಸ ಮಾಡುತ್ತಿಲ್ಲ. ಈ ಘಟಕಗಳು ಅಧಿಕಾರಿಗಳಿಗೆ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದಂತಾಗಿವೆ.
ಪ್ರಾರಂಭದಲ್ಲಿ ನೀರಾವರಿ ಇಲಾಖೆಯ ಮುಖ್ಯ ಕಚೇರಿ ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತು. ರೈತರಿಗೆ ಹಾಗೂ ಸಿಬ್ಬಂದಿಗಳಿಗೆ ಅನುಕೂಲವಾಗಲೆಂದು ದಾವಣಗೆರೆ ಜಿಲ್ಲೆಗೆ ಒಂದು ಶಾಖಾ ಕಚೇರಿಯನ್ನು ಪ್ರಾರಂಭಿಸಲಾಯಿತು. ಪ್ರಾರಂಭವಾದ ಕೆಲವೇ ವರ್ಷಗಳಲ್ಲಿ ಈ ಶಾಖಾ ಕಚೇರಿ ಹೊನ್ನಾಳಿ ತಾಲೂಕಿಗೆ ಸ್ಥಳಾಂತರವಾಗಿದೆ. ತಾಲೂಕಿನಲ್ಲಿನ ಏತನೀರಾವರಿ ಘಟಕಕ್ಕೆ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಬರುವುದಿಲ್ಲ. ಕಾರ್ಮಿಕರು ಹಾಗೂ ರೈತರೇ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಲು 35 ಕಿ.ಮೀ ದೂರು ಹೋಗಿ ಮಾಹಿತಿ ನೀಡಬೇಕಾಗಿದೆ.
ಇಂದು ಹರಿಹರ ಮತ್ತು ಹೊನ್ನಾಳಿ ಎರಡೂ ತಾಲೂಕಿಗೆ ಒಂದು ಕಚೇರಿ ಇದೆ ರಚಿಸಿಕೊಳ್ಳಲಾಗಿದೆ. ಆ ಕಚೇರಿಯೂ ಹೊನ್ನಾಳಿ ತಾಲೂಕಿನಲ್ಲಿ ಇರುವುದರಿಂದ ಅಧಿಕಾರಿಗಳು ಹರಿಹರ ತಾಲೂಕಿನ ಘಟಕಗಳಿಗೆ ಬರುವುದಿಲ್ಲ. ಗುತ್ತಿಗೆದಾರರು ಘಟಕಗಳಲ್ಲಿ ಮಾಡಿಸುವ ಕಾಮಗಾರಿಯನ್ನು ವೀಕ್ಷಿಸದೇ ಕಾಮಗಾರಿಯ ಬಿಲ್ಲುಗಳನ್ನು ಪಾಸ್ ಮಾಡುತ್ತಿದ್ದಾರೆ. ನೀರನ್ನು ಪಡೆಯುತ್ತಿರುವ ರೈತರಿಗೆ ಕಾರ್ಮಿಕರನ್ನು ಹೊರತುಪಡಿಸಿದರೆ, ಇಲಾಖೆಯ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲೇ ಪರಿಚಯವೇ ಇಲ್ಲ. ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದರೆ, ಅವರ ಬಗ್ಗೆ ರೈತರಿಗೆ ಪರಿಚಯವಿರುತ್ತದೆ, ಇಲ್ಲಿ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಬರದೇ ಗುತ್ತಿಗೆದಾರನ ಬಿಲ್ಲುಗಳನ್ನು ಪಾಸ್ ಮಾಡುತ್ತಿದ್ದಾರೆ ಎಂದು ರೈತರು ಆರೊಪಿಸುತ್ತಿದ್ದಾರೆ.
ತಿಮ್ಲಾಪುರ ಮತ್ತು ಎಕ್ಕೆಗೊಂದಿ ಗ್ರಾಮದಲ್ಲಿನ ಏತನೀರಾವರಿ ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ. ಘಟಕಗಳಲ್ಲಿನ ಯಂತ್ರೋಪಕರಣಗಳು ಮಣ್ಣು ಪಾಲಾಗುತ್ತಾ, ಘಟಕಗಳು ನಶಿಸುತ್ತಿವೆ. ರೈತರಿಗೆ ನೀರಿನ ಅವಶ್ಯಕತೆ ಇದೆ, ಇಂದೇ ಘಟಕ ಪ್ರಾರಂಭವಾದರೂ ಸಹ, ಘಟಕದ ಸೌಲಭ್ಯ ಪಡೆಯಲು ರೈತರು ತಯಾರಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಘಟಕಗಳು ಕಣ್ಮರೆಯಾಗುತ್ತಿವೆ.
ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿರ್ಲಕ್ಷ್ಯತನ ಮಾಡುವುದನ್ನು ಬಿಟ್ಟು, ಸರ್ಕಾರ ಕಷ್ಟ ಪಟ್ಟು ರೈತರ ಅಭಿವೃದ್ಧಿಗಾಗಿ ನಿರ್ಮಿಸಿರುವ ಏತನೀರಾವರಿ ಘಟಕಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಿ ಎಂದು ಸಾವಿರಾರು ರೈತರ ಬೇಡಿಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ