ಪ್ರಚೋದನಾಕಾರಿ ಪತ್ರಿಕೋದ್ಯಮ ಒಳ್ಳೆಯದಲ್ಲ: ಸುಭಾಷ್ ಬಿ ಆಡಿ

ಬೆಂಗಳೂರು

      ನವ ಮಾಧ್ಯಮಗಳ ಯುಗದಲ್ಲಿ ಪ್ರಚೋದನಕಾರಿ ಪತ್ರಿಕೋದ್ಯಮ ತೀವ್ರಗೊಳ್ಳುತ್ತಿದ್ದು, ಈ ಬೆಳವಣಿಗೆ ಅಪಾಯಕಾರಿಯಾಗಿ ಪರಿವರ್ತನೆಯಾಗುತ್ತಿದೆ ಎಂದು ನಿವೃತ್ತ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ ಆಡಿ ಕಳವಳ ವ್ಯಕ್ತಪಡಿಸಿದ್ದಾರೆ.

      ನಗರದ ನಯನ ಸಭಾಂಗಣದಲ್ಲಿ ಖಾದ್ರಿ ಶಾಮಣ್ಣ ಟ್ರಸ್ಟ್ ನಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಹೊಸ ದಿಗಂತ ಪತ್ರಿಕೆಯ ಜಂಟಿ ಸಂಪಾದಕ ಪಿ. ರಾಜೇಂದ್ರ ಅವರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪತ್ರಿಕೋದ್ಯಮ ಪ್ರಚೋದನಕಾರಿಯಾಗಲು ಅವಕಾಶ ನೀಡಬಾರದು. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.

      ಪತ್ರಿಕೋದ್ಯಮದಲ್ಲಿ ಸಾಮಾಜಿಕ ಕಳಕಳಿ ಬಹಳ ಮುಖ್ಯ. ಆದರೆ ಮಾಧ್ಯಮ ಇಂದು ವಾಣಿಜ್ಯೀಕರಣಗೊಳ್ಳುತ್ತಿದೆ. ಇದರಿಂದ ಮಾಧ್ಯಮ ಕ್ಷೇತ್ರದ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತಿದೆ ಎಂದು ಹೇಳಿದರು.

       ಅದರಲ್ಲೂ ವಿಶೇಷವಾಗಿ ಸಾಮಾಜಿಕ ಮಾಧ್ಯಮ ಹಾದಿತಪ್ಪುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಮನುಷ್ಯನ ಬದುಕಿನಲ್ಲಿ ವೈಯಕ್ತಿಕ ಹಾಗೂ ಸಾರ್ವಜನಿಕ ಎಂಬ ಎರಡು ಭಾಗಗಳಿವೆ. ಯಾವುದೇ ವ್ಯಕ್ತಿಯ ಬಗ್ಗೆ ಸುದ್ದಿ ಬರೆಯುವಾಗ ಸುದ್ದಿಯ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಬೇಕು. ಪತ್ರಿಕೋದ್ಯಮ ಸಮಾಜ ಮತ್ತು ದೇಶದ ಹಿತದೃಷ್ಟಿ ಹೊಂದಿರಬೇಕು ಎಂದು ಸುಭಾಷ್ ಬಿ ಆಡಿ ಹೇಳಿದರು.

        ಪತ್ರಿಕೋದ್ಯಮ ಸಂವಿಧಾನದ ಮೂರು ಅಂಗಗಳನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು. ಹೀಗಾಗಿ ಸುದ್ದಿಯನ್ನು ಸುದ್ದಿಯಾಗಿಯೇ ನೀಡಬೇಕು. ಇಲ್ಲವಾದಲ್ಲಿ ಸುದ್ದಿಯ ಪಾವಿತ್ರ್ಯತೆ ಹಾಳಾಗುತ್ತದೆ ಎಂದರು.

        ಕರ್ನಾಟಕ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಅಂಜಲಿ ರಾಮಣ್ಣ ಮಾತನಾಡಿ, ಬದುಕು ಮತ್ತು ಸಂವೇದನೆ ನಡುವೆ ಪತ್ರಿಕೋದ್ಯಮ ಹರಿದಾಡಬೇಕು. ಬದುಕಿನ ನಡುವೆ ಸಾಮರಸ್ಯ ಮಾಡಿಸಬೇಕು. ಇಲ್ಲವಾದಲ್ಲಿ ಪತ್ರಿಕೋದ್ಯಮ ಅರ್ಥ ಕಳೆದುಕೊಳ್ಳುತ್ತದೆ ಎಂದು ಹೇಳಿದರು.

       ಮಹಿಳೆಯರ ಬಗ್ಗೆ ಸಂವೇದನಾಶೀಲತೆ ಮೂಡಿಸುವ ಪುರುಷ ಪತ್ರಕರ್ತರನ್ನು ತಯಾರು ಮಾಡಲು ಒತ್ತು ನೀಡಬೇಕು. ಪತ್ರಿಕೋದ್ಯಮದಲ್ಲಿ ಕ್ಷುಲ್ಲಕತನ, ಈಷ್ರ್ಯಗೆ ಆಸ್ಪದ ಇರಬಾರದು ಎಂದು ಹೇಳಿದರು.

     ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್ ನಾಗಣ್ಲ ಮಾತನಾಡಿ, ಗ್ರಾಮೀಣ ಪತ್ರಿಕೋದ್ಯಮದಲ್ಲಿ ಸಾಕಷ್ಟು ಸವಾಲುಗಳಿವೆ. ಅದರಲ್ಲೂ ಪ್ರಮುಖವಾಗಿ ಪ್ರಾದೇಶಿಕ ಪತ್ರಿಕೆಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಗಳನ್ನು ಸಲ್ಲಿಸಿ ಪತ್ರಿಕೋದ್ಯಮದ ಬಾಯಿ ಮುಚ್ಚಿಸುವ ಅಪಾಯಕಾರಿ ಪತಿಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.

       ಇವತ್ತಿನ ಸುದ್ದಿವಾಹಿಗಳು ಎಲ್ಲೆ ಮೀರಿವೆ. ಮನಸೋ ಇಚ್ಚೆ ವರದಿ ಮಾಡುತ್ತಿವೆ. ಅಷ್ಟೇ ಅಲ್ಲ ಸುದ್ದಿ ವಾಹಿನಿಗಳು ನ್ಯಾಯಲಯವನ್ನು ಮೀರಿ ತೀರ್ಪುಗಳನ್ನು ಸಹ ನೀಡುತ್ತಿವೆ. ಮಾಧ್ಯಗಳು ವಸ್ತುಸ್ಥಿತಿಯನ್ನು ಪ್ರತಿಬಿಂಬಿಸಬೇಕು. ಆದರೆ ಮಾಧ್ಯಮ ವಲಯ ಇದೀಗ ಭ್ರಮಾ ಕ್ಷೇತ್ರವಾಗಿದೆ ಎಂದು ಆತಂಕ ತೋಡಿಕೊಂಡರು.

      ಇದಕ್ಕೂ ಮುನ್ನ “ ಮಾಧ್ಯಮ – ನ್ಯಾಯಾಂಗ – ಭಾರತೀಯ ದೃಷ್ಟಿಕೋನ” ಕುರಿತ ಸಂವಾದ ಗೋಷ್ಟಿ ಆಯೋಜಿಸಲಾಗಿತ್ತು. ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಅರಕೆರೆ ಜಯರಾಂ, ಸುಪ್ರೀಂ ಕೋರ್ಟ್‍ವಕೀಲ ಧನಂಜಯ್, ಪ್ರಶಸ್ತಿ ಪುರಸ್ಜೃತ ಪಿ.ರಾಜೇಂದ್ರ, ಪತ್ರಕರ್ತ ವೀರನಾರಾಯಣ ಪಾಲ್ಗೊಂಡಿದ್ದರು. ಯುಎನ್‍ಐ ಕನ್ನಡ ಸುದ್ದಿ ಸಂಸ್ಥೆಯ ಸಂಪಾದಕ ವಿ. ನಂಜುಂಡಪ್ಪ ಗೋಷ್ಠಿಯ ನಿರೂಪಣೆ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap