ಹರಪನಹಳ್ಳಿ :
ಜಿಲ್ಲೆ ಬದಲಾವಣೆ ಆದಾಗಿನಿಂದ ವಿವಿಧ ಇಲಾಖೆಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಜತೆಗೆ ಖಜಾನೆ-2 ಪ್ರಕ್ರಿಯೆ ಪ್ರಗತಿಯಲ್ಲಿದೆ. ಇವುಗಳಿಂದ ಸಿಬ್ಬಂದಿಗಳಿಲ್ಲದೆ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ತಾಪಂ ಇ.ಓ ಮಮತ ಹೊಸಗೌಡರು ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯ್ತಿ ರಾಜೀವಗಾಂಧಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷೆ ಅನ್ನಪೂರ್ಣಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ತಾಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ ಸಂತೋಷ್ ಮಾತನಾಡಿ, ಸಿಡಿಪಿಒ ಇಲಾಖೆಯಲ್ಲಿ ಮಹಿಳಾ ಉದ್ಯೋಗಿನಿ ಅನುದಾನ ವಾಪಸಾಗಿದೆ, ಅದಕ್ಕೆ ಕಾರಣಗಳೇನು ಎಂಬುದರ ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ಸೂಚಿಸಿದರು.
ಪ್ರಭಾರ ಸಿಡಿಪಿಒ ಜಯರಾಜ್ ಮಾತನಡಿ, ಸಿ ತಾಂತ್ರಿಕ ತೊಂದರೆ ಆಗಿದೆ ಎಂದು ಹಾರಿಕೆ ಉತ್ತರಕೊಟ್ಟರು. 11 ಅಂಗನವಾಡಿ ಕೇಂದ್ರದಲ್ಲಿ ಹುದ್ದೆಗಳು ಖಾಲಿ ಇವೆ. ಈಗಾಗಲೆ ಆಯ್ಕೆಯಾಗಿರುವ ಪಟ್ಟಿಯು ಸಹ ದಾವಣಗೆರೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಆಗಿಲ್ಲ, ಶೀಘ್ರ ಬಳ್ಳಾರಿ ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ಸಿಡಿಪಿಒ ತಿಳಿಸಿದರು.
ಬಿಸಿಯೂಟದ ಬರಗಾಲದ ಅನುದಾನ ಬಂದಿಲ್ಲ, ಮೇ ತಿಂಗಲ್ಲಿ ಆಹಾರ ಧಾನ್ಯ ಎಲ್ಲ ಶಾಲೆಗಳಿಗೂ ಪೂರೈಕೆ ಆಗಿದೆ. ಈಗ ಅನುದಾನ ಬರದಿದ್ದರೆ ಕೊರತೆ ಎದುರಾಗುವ ಸಮಸ್ಯೆ ಇದೆ. ಜಿಲ್ಲೆ ಬದಲಾವಣೆ ಆಗಿದ್ದರಿಂದ ಅಡುಗೆ ತಯಾರಕರ ಗೌರವಧನ ಪಾವತಿಯಾಗಿಲ್ಲ ಎಂದು ಅಕ್ಷರದಾಸೋಹ ಸಂಯೊಜನಾಧಿಕಾರಿ ಜಯರಾಜ್ ಸಭೆ ಗಮನಸೆಳೆದರು. ಆಗ ಜಿಲ್ಲಾ ಬದಲಾವಣೆಯಿಂದಾಗಿ ಸಮಸ್ಯೆ ಎದುರಾಗಿದ್ದು ಸರಿಪಡಿಸುವುದಾಗಿ ಇಓ ಮಮತ ಹೊಸಗೌಡರು ಸಭೆಗೆ ತಿಳಿಸಿದರು.
ಉಪಾಧ್ಯಕ್ಷ ಮಂಜನಾಯ್ಕ ಮಾತನಾಡಿ, ಸಭೆಗೆ ಗೈರಾಗಿರುವ ಎಲ್ಲ ಅಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡುವಂತೆ ಸೂಚನೆ ನೀಡಿದರು.
ಉಪಾಧ್ಯಕ್ಷ ಮಂಜನಾಯ್ಕ ಮಾತನಾಡಿ, ಬೆಸ್ಕಾಂನ ಹರಪನಹಳ್ಳಿ ಮತ್ತು ತೆಲಿಗಿ ಉಪವಿಭಾಗದ ವ್ಯಾಪ್ತಿಯ ಹಳ್ಳಿಗಳಲ್ಲಿ ಹಳೆಯ ವಿದ್ಯುತ್ ಕಂಬ ಮತ್ತು ತಂತಿ ಬದಲಿಸಬೇಕು ಎಂದು ಒತ್ತಾಯಿಸಿದರು. ನಂದಿಬೇವೂರು, ಮಾಡ್ಲಗೇರೆ, ಅರಸೀಕೆರೆ ಪಂಚಾಯ್ತಿಯ ವಿದ್ಯುತ್ ಬಿಲ್ ಬಾಕಿ ಇದ್ದು ಪಾವತಿಸುವಂತೆ ಬೆಸ್ಕಾಂ ಸಿಬ್ಬಂದಿ ಮನವಿ ಮಾಡಿದರು.
ಅಧ್ಯಕ್ಷೆ ಅನ್ನಪೂರ್ಣಮ್ಮ ಮಾತನಾಡಿ, ಸಹಕಾರ ಸಂಘ, ಬ್ಯಾಂಕ್‍ಗಳಲ್ಲಿ ಯಾವೊಬ್ಬರ ರೈತರ ಸಾಲಮನ್ನಾ ಆಗುತ್ತಿಲ್ಲ. ಬಡ್ಡಿ ಕಟ್ಟುವಂತೆ ಬ್ಯಾಂಕ್‍ಗಳು ಒತ್ತಡ ಹೇರುತ್ತಿದ್ದಾರೆ. ಸಾಲಮನ್ನಾ ಕಾಯುತ್ತಿರುವ ರೈತರಿಗೆ ತೊಂದರೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಇಇ ಜಯಣ್ಣ ಮಾತನಾಡಿ, ತಾಲೂಕಿನ ಎಲ್ಲ ಹಳ್ಳಿಗಳಲ್ಲೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ತೊಂದರೆ ಇರುವೆಡೆ ಹಾಗಾಗ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸಹಾಯಕ ನಿರ್ದೇಶಕ ಡಾ.ಶಿವುಕುಮಾರ ಮಾತನಾಡಿ, ಜಾನುವಾರುಗಳಿಗೆ ಸಾಂಕ್ರಾಮಿಕ ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಬಿಸಿಎಂ ಇಲಾಖೆ ವಾರ್ಡನ್ ರಂಗಸ್ವಾಮಿ ಮಾತನಾಡಿ, ಜಿಲ್ಲೆ ಮರುಸೇರ್ಪಡೆ ಆಗಿದ್ದರಿಂದ ಮ್ಯಾಪಿಂಗ್ ಆಗುತ್ತಿರುವ ಕಾರಣ ಸಂಬಳ ಪಾವತಿ ಸೇರಿ ವಿವಿಧ ತೊಂದರೆಗಳಾಗಿವೆ ಎಂದು ತಿಳಿಸಿದರು. ಬೆಳೆ ಹಾನಿಯಾದ ತೋಟಗಾರಿಕೆ ಬೆಳೆ ರೈತರಿಗೆ ಪರಿಹಾರ ಅಧ್ಯಕ್ಷೆ ಅನ್ನಪೂರ್ಣಮ್ಮ ಸೂಚಿಸಿದರು. ಸಹಾಯಕ ಕೃಷಿ ನಿರ್ದೇಶಕ ನಾಗರಾಜ್, ಇಒ ಮಮತ ಹೊಸಗೌಡರ್, ವಿಜಯಕುಮಾರ ಸಭೆಯಲ್ಲಿ ಉಪಸ್ಥಿತರಿದ್ದರು.