ಹಾಸನ
ವಿನಾಕಾರಣ ಮೈತ್ರಿ ಸರ್ಕಾರವನ್ನು ಟೀಕೆ ಮಾಡುತ್ತಿದ್ದ ಅವರು ಸಚಿವ ಸಂಪುಟ ರಚನೆ ಮಾಡದೆ ಏಕೆ ವಿಳಂಬ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ಸಕಲೇಶಪುರ ಮತ್ತು ಬೇಲೂರಿನ ಹಾನಿಯಾದ ಪ್ರದೇಶಗಳಿಗೆ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕಲೇಶಪುರದಲ್ಲಿ ಸಂತ್ರಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ,ಅಲ್ಲದೆ ಪುನರ್ವಸತಿ ಕೇಂದ್ರಗಳನ್ನು ತೆರೆದು ಆಹಾರ ಪೂರೈಕೆ ಮಾಡಲಾಗುತ್ತದೆ. ನಾಳೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಪರಿಸ್ಥಿತಯ ಅವಲೋಕನ ಮಾಡುತ್ತೇನೆ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲೆಯಲ್ಲಿ ಆಗಿರುವ ಮಳೆ ನಷ್ಟದ ಮಾಹಿತಿ ಪಡೆದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡುತ್ತೇನೆ. ಶೀಘ್ರದಲ್ಲಿ ವಿಶೇಷ ಆದ್ಯತೆ ಮೇರೆಗೆ ಪ್ರವಾಹ ಸಂತ್ರಸ್ಥರಿಗೆ ಹಣ ಬಿಡುಗಡೆಗೆ ಮಾಡುವಂತೆ ಒತ್ತಾಯಿಸುತ್ತೇನೆ.ಬೆಳೆ ಹಾಗೂ ಮನೆ ಹಾನಿ ಪರಿಹಾರ ಬಿಡುಗಡೆ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದೇನೆ ಎಂದು ಅವರು ಇದೇ ವೇಳೆ ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಕಾರ್ಯವೈಖರಿ ಬಗ್ಗೆ ನಿರಂತರ ಟೀಕಿಸುತ್ತಿದ್ದ ಬಿಜೆಪಿ ನಾಯಕರು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಏನು ಮಾಡುತ್ತಿದ್ದಾರೆ.ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಕಡೆ ಗಮನ ಹರಿಸಿಲ್ಲವೇಕೆ ಎಂದು ಪ್ರಶ್ನಿಸಿದ ಅವರು,ಮುಖ್ಯಮಂತ್ರಿ ಯಡಿಯೂರಪ್ಪ ಕೂಡಲೇ ಮಳೆಯಿಂದ ಹಾನಿಯಾದ ಜಿಲ್ಲೆಗಳಿಗೆ ಭೇಟಿ ನೀಡಿ ಸಮರ್ಪಕ ಪರಿಹಾರ ಕಾರ್ಯ ಕೈಗೊಳ್ಳುವಂತೆಯೂ ಅವರು ಒತ್ತಾಯಿಸಿದರು