ದಾವಣಗೆರೆ
ವೃತ್ತಿಯಲ್ಲಿ ಪ್ರಾಮಾಣಿಕತೆ ಹಾಗೂ ಪಾವಿತ್ರ್ಯತೆಯನ್ನು ಅಳವಡಿಸಿಕೊಳ್ಳುವ ಮೂಲಕ ಕರ್ತವ್ಯನಿಷ್ಠೆ ಮೆರೆಯಬೇಕೆಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಿ.ನರೇಂದರ್‍ರವರು ವಕೀಲರಿಗೆ ಕರೆ ನೀಡಿದರು.
ನಗರದ ವಕೀಲರ ಸಾಂಸ್ಕತಿಕ ಭವನದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಕೀಲಿ ವೃತ್ತಿಯು ಅತ್ಯಂತ ಪವಿತ್ರವಾದದ್ದಾಗಿದೆ. ಪ್ರತಿಯೊಬ್ಬ ವಕೀಲರೂ ವೃತ್ತಿಯಲ್ಲಿ ಮೌಲ್ಯಗಳನ್ನು ಸದಾ ಕಾಪಿಟ್ಟುಕೊಂಡು, ವೃತ್ತಿಯಲ್ಲಿ ಪ್ರಾಮಾಣಿಕತೆ, ಪಾವಿತ್ರ್ಯತೆ ಅಳವಡಿಸಿಕೊಳ್ಳುವ ಮೂಲಕ ಕರ್ತವ್ಯನಿಷ್ಠೆ ಮೆರೆಯಬೇಕೆಂದು ಸಲಹೆ ನೀಡಿದರು.
ಸ್ವಾತಂತ್ರ್ಯ ಹೋರಾಟದಲ್ಲೂ ಅನೇಕ ವಕೀಲರು ಮುಂಚೂಣಿ ಪಾತ್ರ ವಹಿಸಿದ್ದರು. ಇಂತಹ ಪರಂಪರೆಯನ್ನು ಹೊಂದಿರುವ ವಕೀಲರಿಗೆ ಸೇವೆ ಮಾಡಲು ಸಾಕಷ್ಟು ಅವಕಾಶಗಳಿವೆ. ನೀವು ನಿಮ್ಮ ವೃತ್ತಿ ಜೀವನಲ್ಲಿ ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡರೇ, ಖಂಡಿತವಾಗಿ ಯಶಸ್ಸು ತಂದುಕೊಡುತ್ತದೆ ಎಂದರು.
ನಿಮ್ಮ ಬಳಿ ನ್ಯಾಯ ಅರಸಿ ಬರುವ ಜನರ ನಿರೀಕ್ಷೆ ಹುಸಿಯಾಗದಂತೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಸಲಹೆ ನೀಡಿದ ಅವರು, ನ್ಯಾಯಾಂಗವು ಜನಸಾಮಾನ್ಯರ ಕೊನೆಯ ಆಶಯವಾಗಿದೆ. ಸಮಾಜದಲ್ಲಿ ಬೇರೆಲ್ಲೂ ನ್ಯಾಯ ಸಿಗದಿದ್ದ ಸಂದರ್ಭದಲ್ಲಿ ಜನರು ನ್ಯಾಯಾಲಯಗಳಿಗೆ ಬರುತ್ತಾರೆ. ಜನರಲ್ಲಿ ಅಷ್ಟರಮಟ್ಟಿಗೆ ನ್ಯಾಯಾಂಗದ ಬಗ್ಗೆ ಭರವಸೆವಿದ್ದು, ಇಂತಹ ನಂಬಿಕೆಯನ್ನು ಉಳಿಸಿಕೊಂಡು ನೊಂದವರು ನಿರಾಶರಾಗದ ರೀತಿಯಲ್ಲಿ ವಕೀಲರು ಸ್ಥೈರ್ಯ ತುಂಬಬೇಕೆಂದು ಹೇಳಿದರು.
ವಕೀಲರು ಸುಳ್ಳು ಹೇಳುವ ಅವಶ್ಯಕತೆಯೇ ಇಲ್ಲ. ಕಕ್ಷಿದಾರರ ದಾರಿ ತಪ್ಪಿಸುವ ಕೆಲಸವನ್ನು ಯಾರೂ ಸಹ ಮಾಡಬಾರದು. ನ್ಯಾಯಪೀಠ ಹಾಗೂ ಕಕ್ಷಿದಾರರೊಂದಿಗೆ ವಕೀಲರು ಪ್ರಾಮಾಣಿಕತೆಯಿಂದ ವ್ಯವಹರಿಸಬೇಕು. ನ್ಯಾಯಾಧೀಶರು ಸಹ ಮನುಷ್ಯರೇ ಆಗಿದ್ದು, ಕೆಲ ಲೋಪಗಳಾಗುವುದು ಸಹಜ. ಹಾಗೆಂದು ಟೀಕಿಸುವುದು ಸುಲಭ. ಆದರೆ ನ್ಯಾಯಾಧೀಶರ ಕೆಲಸ ಸವಾಲಿನಿಂದ ಕೂಡಿರುತ್ತದೆ. ಇದನ್ನರಿತು ವಕೀಲರು ನ್ಯಾಯಾಧೀಶರಿಗೆ ಮನದಟ್ಟಾಗುವ ರೀತಿಯಲ್ಲಿ ವಾದ ಮಂಡಿಸಬೇಕು ಎಂದರು.
ರಾಜ್ಯ ಉಚ್ಛ ನ್ಯಾಯಾಲಯ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ.ಸೋಮಶೇಖರ ಮಾತನಾಡಿ, ನ್ಯಾಯಾಲಯಗಳು ನೀಡುವ ತೀರ್ಪಿನ ಮೇಲೆ ಸೂಕ್ತ ದಾಖಲೆ, ಸಾಕ್ಷ್ಯ, ವಿಚಾರಣೆ ಪ್ರಭಾವ ಬೀರಲಿವೆ. ಈ ದಿಸೆಯಲ್ಲಿ ಯುವ ವಕೀಲರಿಗೆ 3 ದಿನಗಳ ಕಾನೂನು ಕಾರ್ಯಾಗಾರ ಏರ್ಪಡಿಸಿರುವುದು ಶ್ಲಾಘನೀಯವಾಗಿದೆ. ಕಾರ್ಯಾಗಾರದಲ್ಲಿ ಹಿಂದೂ ವಿವಾಹ ಕಾಯ್ದೆ, ಎವಿಡೆನ್ಸ್ ಆಸ್ಟ್, ಪೋಕ್ಸೋ ಸೇರಿದಂತೆ ವಿವಿಧ ವಿಷಯವಾಗಿ ಒಟ್ಟು 7 ಗೋಷ್ಠಿಗಳು ಜರುಗಿವೆ. ಇದರಿಂದ ನೀವು ಪಡೆದಿರುವ ಜ್ಞಾನವು ವಕೀಲರ ಕಾರ್ಯ ನಿರ್ವಹಣೆಯಲ್ಲಿ ಸದ್ಬಳಕೆಯಾಗಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್ ಮತ್ತಿತರರು ಉಪಸ್ಥಿತರಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಹೆಚ್.ದಿವಾಕರ್ ಸ್ವಾಗತಿಸಿದರು. ಭಾವನಾ ಕೆ.ಪದಕಿ ಪ್ರಾರ್ಥಿಸಿದರು.