ದಾವಣಗೆರೆ:
ಬಿಜೆಪಿಯ ಪ್ರಮುಖರ ಮನೆಗಳ ಮೇಲೆ ಪಕ್ಷದ ಬಾವುಟ ಹಾರಿಸುವ ಮೂಲಕ “ನನ್ನ ಪರಿವಾರ-ಬಿಜೆಪಿ ಪರಿವಾರ” ಅಭಿಯಾನಕ್ಕೆ ಭಾನುವಾರ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು.
ಸಮೀಪದ ಶಿರಮಗೊಂಡನಹಳ್ಳಿಯಲ್ಲಿರುವ ಶಾಸಕ ಎಸ್.ಎ.ರವೀಂದ್ರನಾಥ್, ಪಿ.ಜೆ. ಬಡಾವಣೆಯಲ್ಲಿರುವ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ದೇವರಾಜ ಅರಸು ಬಡಾವಣೆಯ ಬಿ ಬ್ಲಾಕ್‍ನಲ್ಲಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ನಿಟುವಳ್ಳಿಯಲ್ಲಿರುವ ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮುಕುಂದಪ್ಪ, ಎಸ್.ಎಸ್. ಲೇಔಟ್‍ನ ಬಿ ಬ್ಲಾಕ್‍ನಲ್ಲಿರುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎನ್.ಶಿವಕುಮಾರ, ದಾವಣಗೆರೆ ದಕ್ಷಿಣ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರುಗಳ ಮನೆಗಳ ಮೇಲೆ ಬಿಜೆಪಿ ಬಾವುಟವನ್ನು ಹಾರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರವೀಂದ್ರನಾಥ್, ಕೇಂದ್ರದಲ್ಲಿ ಆಡಳಿತದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜನಪರ ಆಡಳಿತ ನೀಡುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ದೇಶವು ಉಗ್ರರ ದಾಳಿಯಂತಹ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದೆ. ಹೀಗಾಗಿ ದೇಶದ ಭದ್ರತೆಯ ದೃಷ್ಟಿಯಿಂದ ಮತ್ತೊಂದು ಅವಧಿಗೆ ಮೋದಿಯವರನ್ನು ಅಧಿಕಾರಕ್ಕೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲಾ ಭಿನ್ನಾಭಿಪ್ರಾಯ ಬದಿಗಿಟ್ಟು, ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮೋದಿಯವರ ಕೈ ಬಲಪಡಿಸಬೇಕೆಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ ಮಾತನಾಡಿ, ಶತೃರಾಷ್ಟ್ರವಾಗಿರುವ ಪಾಕಿಸ್ಥಾನಕ್ಕೆ ಬುದ್ಧಿ ಕಲಿಸಲು ಮೋದಿಯವರಂತಹ ಬಲಿಷ್ಠ ನಾಯಕತ್ವ ದೇಶಕ್ಕೆ ಬೇಕಾಗಿದೆ. ಆದ್ದರಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ನಮ್ಮ ಕಾರ್ಯಕರ್ತರು ಶ್ರಮಿಸಬೇಕೆಂದು ಸಲಹೆ ನೀಡಿದರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರವು ಎಲ್ಲಾ ವರ್ಗದ ಜನರಿಗೆ ಸಾಕಷ್ಟು ಯೋಜನೆ, ಕಾರ್ಯಕ್ರಮ ಜಾರಿಗೊಳಿಸಿದ್ದು, ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಜನರನ್ನು ಬಿಜೆಪಿಯತ್ತ ಸೆಳೆದು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಫೆ.26ರಂದು ಉಜ್ವಲ ಯೋಜನೆ ಫಲಾನುಭವಿಗಳಿಂದ ಜ್ಯೋತಿ ಬೆಳಗಿಸುವ ಕಮಲ ಜ್ಯೋತಿ ಕಾರ್ಯಕ್ರಮವನ್ನು ಎಲ್ಲ ಮಂಡಲಗಳಲ್ಲಿ ನಡೆಸಲಾಗುವುದು. ಪ್ರತಿ ಬೂತ್‍ನಿಂದ 3 ಬೈಕ್‍ನಂತೆ ಕಮಲ ಸಂದೇಶ ಬೈಕ್ ರ್ಯಾಲಿಯನ್ನು ಮಾ.2ರಿಂದ ಮತದಾನದ ಕೊನೆಯ ದಿನದವರೆಗೆ ನಡೆಸಲಾಗುವುದು. ಮೇರಾ ಬೂತ್ ಸಬ್ ಸೆ ಮಜಬೂತ್ ಅಭಿಯಾನದಡಿ ದೀನದಯಾಳ್ ಸಮರ್ಪಣಾ ನಿಧಿಯನ್ನು 5 ರೂ.ನಿಂದ 1 ಸಾವಿರ ರೂ.ವರೆಗೆ ಸಂಗ್ರಹಿಸುವ ಕಾರ್ಯ ಜಿಲ್ಲೆಯಲ್ಲಿ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ 95 ಸಾವಿರ ಮಂದಿಗೆ ಸೌಲಭ್ಯ ಒದಗಿಸಲಾಗಿದೆ. ಮುದ್ರಾ ಬ್ಯಾಂಕ್ ಯೋಜನೆಯಡಿ 62 ಸಾವಿರ ಜನಕ್ಕೆ ಸಾಲ ನೀಡಲಾಗಿದೆ. ಮಾತೃವಂದನಾ ಯೋಜನೆಯಡಿ 24 ಸಾವಿರ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಲಾಗಿದೆ. ದಾವಣಗೆರೆಯಲ್ಲಿ ಸ್ವಚ್ಛ ಭಾರತ ಯೋಜನೆಯಡಿ 6500 ಶೌಚಾಲಯ ನಿರ್ಮಿಸಲಾಗಿದೆ. ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಯಡಿ 95 ಸಾವಿರ, ಜೀವನಸುರಕ್ಷಾ ಯೋಜನೆಯಡಿ 1,81,400, ಅಟಲ್ ಪಿಂಚಣಿ ಯೋಜನೆಯಡಿ 21,800 ಜನರು ಪ್ರಯೋಜನ ಪಡೆಯಲಿದ್ದಾರೆ. ಪ್ರಧಾನಮಂತ್ರಿ ಕೃಷಿ ಸಿಂಚನ ಯೋಜನೆಯಡಿ ಹಾಗೂ ತೋಟಗಾರಿಕೆ ಯೋಜನೆಯಡಿ 18,700 ರೈತರಿಗೆ ಸಬ್ಸಿಡಿ ವಿತರಿಸಿದ್ದು, ದೀನದಯಾಳ್ ಉಪಾಧ್ಯಾಯ ಗ್ರಾಮೀಣಜ್ಯೋತಿ ಯೋಜನೆಯಡಿ 5700 ಬಿಪಿಎಲ್ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎನ್.ರಾಜಶೇಖರ್, ಹೇಮಂತ್ ಕುಮಾರ್, ಬಿ.ಎಂ.ಸತೀಶ, ಉಮೇಶ ಪಾಟೀಲ್, ಧನಂಜಯ ಕಡ್ಲೆಬಾಳ್, ಶಿವರಾಜ ಪಾಟೀಲ್, ಶಂಕರಗೌಡ ಬಿರಾದಾರ್, ಟಿಂಕರ್ ಮಂಜಣ್ಣ, ತರಕಾರಿ ಶಿವು, ಪ್ರವೀಣ ಜಾಧವ್, ನವೀನ್ ಕುಮಾರ್, ಸವಿತಾ ರವಿಕುಮಾರ, ಹೇಮಂತಕುಮಾರ್, ಲಕ್ಷ್ಮಣ ಸೇರಿದಂತೆ ಹಲವರು ಹಾಜರಿದ್ದರು.