ಹೊನ್ನಾಳಿ:
ಭ್ರಷ್ಟಾಚಾರ ವಿರೋಧಿ ವೇದಿಕೆಯ ನಿರ್ದೇಶಕ ಕುಂದೂರಿನ ಬಿ. ಪ್ರಸನ್ನಕುಮಾರ್ ಎಂಬುವವರ ಮೇಲೆ ಗ್ರಾಮದ ಕೆ. ಮಂಜಪ್ಪ, ಆಂಜನೇಯ ಎಂಬುವವರು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಶುಕ್ರವಾರ ಸಂಜೆ 6ರ ಸುಮಾರಿಗೆ ನಡೆದಿದೆ.
ಕುಂದೂರು ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ತಾಪಂ ಇಒ ಕೆ.ಸಿ. ಮಲ್ಲಿಕಾರ್ಜುನ್ ಸಮ್ಮುಖದಲ್ಲಿ ಗ್ರಾಮ ಸಭೆ ಏರ್ಪಾಡಾಗಿತ್ತು. ಆಶ್ರಮ ಮನೆ, ಉದ್ಯೋಗ ಖಾತ್ರಿಯಡಿ ಮಾಡಿದ ಕೆಲಸಗಳ ಹಣ ಬಿಡುಗಡೆ ಸೇರಿದಂತೆ ಬರುವ ವರ್ಷದ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆ ಮುಗಿದು ಕೆಲ ಸದಸ್ಯರು ಮನೆಗೆ ಮರಳಿದ ನಂತರ ಗ್ರಾಪಂ ಅಧ್ಯಕ್ಷೆ ಮಂಜಮ್ಮ ಅವರ ಪತಿ ಕೆ. ಮಂಜಪ್ಪ, ಸದಸ್ಯೆ ಗೌರಮ್ಮ ಅವರ ಮಗ ಆಂಜನೇಯ ಅವರು ಬಿ. ಪ್ರಸನ್ನಕುಮಾರ್ ಅವರೊಂದಿಗೆ ವಾಗ್ವಾದ ನಡೆಸಿ ಬಳಿಕ ಹಲ್ಲೆ ನಡೆಸಿದ್ದಾರೆ. ಪರಿಣಾಮ ಬಿ. ಪ್ರಸನ್ನಕುಮಾರ್ ಅವರ ಎಡಗಣ್ಣಿಗೆ ತೀವ್ರ ಪೆಟ್ಟಾಗಿದೆ.
ಹಲ್ಲೆಗೊಳಗಾದ ಬಿ. ಪ್ರಸನ್ನಕುಮಾರ್ ಗ್ರಾಪಂ ಸದಸ್ಯೆ ಪುಷ್ಪ ಅವರ ಪತಿಯಾಗಿದ್ದಾರೆ. ಇತ್ತೀಚಿಗಷ್ಟೆ ಇದೇ ಗ್ರಾಪಂ ನಡೆದ ಲಕ್ಷಾಂತರ ರೂ.ಗಳ ಭ್ರಷ್ಟಾಚಾರ ಬಯಳಿಗೆಳೆದು ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಆರೋಪದ ಅಡಿ ಗ್ರಾಪಂ ಉಪಾಧ್ಯಕ್ಷೆಯ ಸದಸ್ಯತ್ವ ರದ್ದಾಗಲು ಕಾರಣರಾಗಿದ್ದರು.
ಗಾಯಾಳಿಗೆ ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞೆ ಶಂಶಾದ್ ಬೇಗಂ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕರೆದೊಯ್ಯಲಾಗಿದ್ದು, ಇದೀಗ ಪ್ರಸನ್ನಕುಮಾರ್ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.ಹಲ್ಲೆ ಘಟನೆ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಒತ್ತಾಯ:
ಬಿ. ಪ್ರಸನ್ನಕುಮಾರ್ ಮೇಲಿನ ಹಲ್ಲೆಯನ್ನು ಭ್ರಷ್ಟಾಚಾರ ವಿರೋಧಿ ವೇದಿಕೆಯ ರಾಜ್ಯಾಧ್ಯಕ್ಷ ಗುರುಪಾದಯ್ಯ, ಪದಾಧಿಕಾರಿಗಳಾದ ರಾಜಣ್ಣ, ವಾಸಪ್ಪ, ಹನುಮಂತಪ್ಪ, ಕುಂದೂರು ಗ್ರಾಪಂ ಸದಸ್ಯ ಮೃತ್ಯುಂಜಯ, ಗ್ರಾಮಸ್ಥರಾದ ಹಾಲಸ್ವಾಮಿ, ಸಂಗಣ್ಣನವರ್, ಎಂ.ಪಿ. ಹಾಲೇಶಪ್ಪ ಇತರರು ಖಂಡಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








