ತುಮಕೂರು

ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಪ್ರತಿಭಾ ಪ್ರದರ್ಶನ ವೇದಿಕೆಯು ಉಪಯುಕ್ತವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಸಂಘಗಳ ಸಹಯೋಗದಲ್ಲಿ ಬಾಲಭವನದಲ್ಲಿಂದು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಏರ್ಪಡಿಸಿದ್ದ “ಪ್ರತಿಭಾ ಪ್ರದರ್ಶನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದರಿಂದ ಚಿಕ್ಕವಯಸ್ಸಿನಲ್ಲಿಯೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳೆಯಲು ಸಹಕರಿಸುತ್ತದೆ. ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಮಕ್ಕಳ ರಂಗಭೂಮಿಯ ರಂಗಕರ್ಮಿ ದೇವರಾಜು ಮೆಳೆಹಳ್ಳಿ ಮಾತನಾಡಿ ಅಂಗನವಾಡಿ ಶಿಕ್ಷಕಿಯರು, ಕಾರ್ಯಕರ್ತೆಯರು ಅಂಗನವಾಡಿ ಮಕ್ಕಳಿಗೆ ಎರಡನೇ ತಾಯಿಯ ರೀತಿಯಲ್ಲಿ ಪೋಷಿಸುತ್ತಾರೆ. ಜಾಗತಿಕ ಯುಗದಲ್ಲಿ ಮಕ್ಕಳು ಎಲ್ಲಾ ರೀತಿಯ ಅಂಶಗಳನ್ನು ತಿಳಿದುಕೊಳ್ಳಲು ಮಕ್ಕಳನ್ನು ಮುಕ್ತವಾಗಿ ಬಿಡುವ ಮೂಲಕ ಅವರಲ್ಲಿರುವ ಜ್ಞಾನಾರ್ಜನೆಯನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.
ಜಿಲ್ಲಾ ಬಾಲಭವನ ಸದಸ್ಯ ಎಂ.ಬಸವಯ್ಯನವರು ಮಾತನಾಡಿ ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಪೋಷಕರಿಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಸಮಗ್ರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಆರ್.ಸತ್ಯನಾರಾಯಣ್, ಜಿಲ್ಲಾ ಬಾಲಭವನ ಸಂಘದ ಅಧ್ಯಕ್ಷರು ಅಂಗನವಾಡಿ ಕೇಂದ್ರ ಮಕ್ಕಳು, ಕಾರ್ಯಕರ್ತೆಯರು, ಮೇಲ್ವಿಚಾರಕಿಯರು ಹಾಗೂ ಪೋಷಕರು ಹಾಜರಿದ್ದರು.
ಚಿತ್ರಕಲೆ, ಆಟೋಟ(ಓಟ) ಮತ್ತು ಅಭಿನಯಗೀತೆ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ಪ್ರಶಂಸನಾ ಪತ್ರಗಳನ್ನು ಮತ್ತು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರಗಳನ್ನು ನೀಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
