ಚಿತ್ರದುರ್ಗ:
ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರೆ ಜೀವನದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.
ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆ ಮತ್ತು ತಾಲೂಕಿಗೆ ಟಾಪರ್‍ಗಳಾಗಿರುವ ಹದಿನಾಲ್ಕು ವಿದ್ಯಾರ್ಥಿಗಳು ಹಾಗೂ ದ್ವೀತಿಯ ಪಿ.ಯು.ಸಿ.ಯಲ್ಲಿ ರಾಜ್ಯಕ್ಕೆ ಆರನೆ ರ್ಯಾಂಕ್ ಗಳಿಸಿರುವ ಚಿತ್ರದುರ್ಗದ ಎಸ್.ಆರ್.ಎಸ್.ಕಾಲೇಜಿನ ವಿದ್ಯಾರ್ಥಿನಿ ತುಳಸಿ ಇವರುಗಳಿಗೆ ರೋಟರಿ ಕ್ಲಬ್ ಚಿತ್ರದುರ್ಗದಿಂದ ಬಾಲಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ಹದಿನಾರನೆ ಸ್ಥಾನದಲ್ಲಿದ್ದ ಚಿತ್ರದುರ್ಗ ಜಿಲ್ಲೆ 2018-19 ನೇ ಸಾಲಿನ ಫಲಿತಾಂಶದಲ್ಲಿ ಆರನೆ ಸ್ಥಾನದಲ್ಲಿರುವುದು ಸಮಾಧಾನಕರ ಸಂಗತಿ. ಪ್ರತಿ ವರ್ಷವೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳೇ ಏಕೆ ಮೊದಲ ಸ್ಥಾನದಲ್ಲಿರುತ್ತವೆ ಬರದನಾಡು ಚಿತ್ರದುರ್ಗ ಏಕೆ ಮೊದಲ ಸ್ಥಾನಕ್ಕೆ ಬರಬಾರದು ಎಂದು ಚಿಂತಿಸಿ ಗಣಿತ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಶಿಕ್ಷಕರುಗಳಿಗೆ ತರಬೇತಿ ನೀಡುವಲ್ಲಿ ರೋಟರಿ ಸಂಸ್ಥೆಯ ಕೊಡುಗೆಯಿದೆ ಎಂದು ಸ್ಮರಿಸಿದರು.
ಇಂತಹ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರಗಳನ್ನು ಸ್ವೀಕರಿಸುವ ವಿದ್ಯಾರ್ಥಿಗಳು ಮುಂದಿನ ಶಿಕ್ಷಣದಲ್ಲಿ ಇನ್ನು ಹೆಚ್ಚಿನ ಅಂಕಗಳನ್ನು ಗಳಿಸಿ ಭವಿಷ್ಯವನ್ನು ರೂಪಿಸಿಕೊಳ್ಳುವ ಮೂಲಕ ದೇಶದಲ್ಲಿ ಉತ್ತಮ ಪ್ರಜೆಗಳಾಗುವಂತೆ ಕರೆ ನೀಡಿದರು.
ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷೆ ಜಯಶ್ರಿಷಾ ಮಾತನಾಡಿ ಪ್ರತಿ ವರ್ಷವೂ ಎಸ್.ಎಸ್.ಎಲ್.ಸಿ.ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತ ಬರುತ್ತಿದ್ದೇವೆ. ಇದರಿಂದ ಅವರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.ರೋಟರಿ ಕ್ಲಬ್ ಚಿತ್ರದುರ್ಗ ಕಾರ್ಯದರ್ಶಿ ಶಿವರಾಂ, ಅಸಿಸ್ಟೆಂಟ್ ಗೌರ್ವನರ್ ಡಾ.ತಿಪ್ಪೇಸ್ವಾಮಿ ವೇದಿಕೆಯಲ್ಲಿದ್ದರು.
ರೊ.ವಿಶ್ವನಾಥ್, ಎಸ್.ವೀರೇಶ್, ಬ್ರಹ್ಮಾನಂದಗುಪ್ತ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.