ಪ್ರತಿಷ್ಠೆ ಬದಿಗೊತ್ತಿ ಸುಖ ಸಂಸಾರ ನಡೆಸಿ

ದಾವಣಗೆರೆ

       ಸತಿಪತಿಗಳು ಒಂದಾಗಿ ಪರಸ್ಪರ ಅರಿತು ನಾನು, ನನ್ನದೆಂಬ ಅಹಂ ತ್ಯಜಿಸಿ, ಪ್ರತಿಷ್ಠೆ ಬದಿಗೊತ್ತಿ ಸುಖ ಸಂಸಾರ ನಡೆಸಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿಯವರು ನೂತನ ವಧು-ವರರಿಗೆ ಕಿವಿಮಾತು ಹೇಳಿದರು.ನಗರದ ಜಯದೇವ ವೃತ್ತದ ಬಳಿಯ ಶಿವಯೋಗಿ ಮಂದಿರದಲ್ಲಿ ಶುಕ್ರವಾರ ದಾವಣಗೆರೆ ಬಹುಜನ ಸಮಾಜ ಸೇವಾ ಸಂಘದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 128ನೇ ಹಾಗೂ ಡಾ.ಬಾಬು ಜಗಜೀವನರಾಂ ಅವರ 112ನೇ ಜಯಂತ್ಯುತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸರಳ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ, ನೂತನ ವಧು-ವರರಿಗೆ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು.

        ಸತಿ-ಪತಿ ಒಂದಾಗಿ ಜೋಡೆತ್ತಿನಂತೆ ಸಂಸಾರವೆಂಬ ಬಂಡಿಯನ್ನು ಎಳೆಯಬೇಕು. ಸಂಸಾರದ ನೊಗ ಇಬ್ಬರಿಗೂ ಭಾರವಾಗದಂತೆ ಒಬ್ಬರಿಗೊಬ್ಬರು ಹೊಂದಾಣಿಕೆಯ ಮೂಲಕ ಜೀವನ ಸಾಗಿಸಬೇಕೆಂದ ಶ್ರೀಗಳು, ನದಿ ದಾಟಲು ಹೇಗೆ ತೆಪ್ಪದ ಅವಶ್ಯಕತೆ ಇದೆಯೋ, ಅದೇರೀತಿ ಸಂಸಾರವೆಂಬ ದೋಣಿ ಸಾಗಿಸಲು ಇಬ್ಬರು ಪರಸ್ಪರ ಅರಿತು ತೆಪ್ಪಗಿರಬೇಕೆಂದು ಸಲಹೆ ನೀಡಿದರು.

        ಎಲ್ಲಿ ಸರಳತೆ ಇರುತ್ತದೋ ಅಲ್ಲಿ ಆದರ್ಶ ಇರುತ್ತದೆ. ಆದರೆ, ಎಲ್ಲಿ ಆಡಂಬರವಿರುತ್ತದೋ ಅಲ್ಲಿ ಆದರ್ಶ ಇರುವುದಿಲ್ಲ. ಇಂದು ಧನಿಕರು ಪ್ರತಿಷ್ಠೆಗಾಗಿ ಅದ್ಧೂರಿ ಮದುವೆಗಳನ್ನು ಮಾಡುತ್ತಾರೆ. ಎಲ್ಲಿ ಅದ್ದೂರಿತನ ವಿರುತ್ತದೋ ಅಲ್ಲಿ ದುಂದುವೆಚ್ಚ, ಅಪವ್ಯಯವೇ ಹೆಚ್ಚು. ಇಂತಹ ಸ್ಥಳಗಳಲ್ಲಿ ಆದರ್ಶದ ಬದಲು ಅದ್ಧೂರಿ, ದುಂದುವೆಚ್ಚವೇ ಪ್ರಧಾನವಾಗಿರುತ್ತದೆ ಎಂದರು.

        ಬುದ್ಧ-ಬಸವ-ಅಂಬೇಡ್ಕರ್ ಅವರಂತಹ ಮಹನೀಯರು ಸರಳ ಜೀವನ ನಡೆಸುವ ಮೂಲಕ ಆದರ್ಶಗಳನ್ನು ಪಾಲಿಸುವ ಮೂಲಕ ಮಹಾತ್ಮರಾಗಿ ಹೊರಹೊಮ್ಮಿದ್ದಾರೆ. ವರ್ಗ ಬೇಧ, ವರ್ಣ, ಜಾತಿ ಬೇಧಗಳನ್ನು ತೊಡೆದುಹಾಕುವ ಮೂಲಕ ಸರ್ವರು ಸಮಾನರೆಂಬ ಸಂದೇಶ ಸಾರುವ ಮೂಲಕ ಬಸವಣ್ಣ ಆದರ್ಶ ಮೆರೆದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತರ ಬಾಳಿನ ಬದುಕಿಗೆ ಸೂರ್ಯನಾಗಿ ಹುಟ್ಟಿ, ಅಲಕ್ಷಿತರ ಪ್ರತಿನಿಧಿಯಾಗಿ ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸುವ ಮೂಲಕ ಆದರ್ಶಪ್ರಾಯರಾದರು.

       ಹಾಗೆಯೇ ಗೌತಮ ಬುದ್ಧರವರು ಆಸೆಯೆಂಬ ಕನಸಿನ ಮಾಯೆ ತೊರೆದು, ಸರ್ವಸ್ವವನ್ನು ತ್ಯಜಿಸಿ ಸರಳತೆಯ ಮೂಲಕ ಇಡೀ ಮನುಕುಲಕ್ಕೆ ಆದರ್ಶರಾದರು. ಇಂತಹ ದಾರ್ಶನಿಕರ ಆದರ್ಶಗಳನ್ನು ನಾವು, ನೀವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

      ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಸರ್ದಾರ್ ಸೇವಾಲಾಲ್ ಗುರುಪೀಠದ ಶ್ರೀಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಸಂಸಾರದಲ್ಲಿ ಮುಖ್ಯವಾಗಿ ಇರಬೇಕಾದ್ದು ಸಂಸ್ಕಾರ. ಈ ಬಾರಿ 25 ನವದಂಪತಿಗಳು ಸರಳ ಸಾಮೂಹಿಕ ವಿವಾಹದಲ್ಲಿ ನೂತನ ಜೀವನಕ್ಕೆ ಕಾಲಿಡುತ್ತಿದ್ದು, ಪ್ರತಿ ವರ್ಷ ಇಂತಹ ಆದರ್ಶ ಮದುವೆಗಳು ಹೆಚ್ಚಾಗಬೇಕು ಎಂದು ಅವರು ಆಶಿಸಿದರು.

     ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಡಾ.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂ ಶೋಷಿತರ ಪ್ರತಿನಿಧಿಗಳಾಗಿ, ಆ ವರ್ಗಗಳ ಅಭ್ಯುದಯಕ್ಕೆ ಸಾಕಷ್ಟು ಶ್ರಮಿಸಿದರು. ಅವರುಗಳ ನಡೆ-ನುಡಿಯಲ್ಲಿ ಸರಳತೆ, ಪರಿಶುದ್ಧತೆ, ಪ್ರಾಮಾಣಿಕತೆ, ಆದರ್ಶ ಇತ್ತು. ಅಂತಹ ಮಹಾನೀಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು-ನಿವೆಲ್ಲರೂ ಮುನ್ನಡೆಯೋಣ ಎಂದರು.

        ಸರಳ ಸಾಮೂಹಿಕ ವಿವಾಹ ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವುದು ಮೆಚ್ಚುವಂತಹ ಕಾರ್ಯವಾಗಿದೆ. ಮದುವೆಗಾಗಿ ಎಷ್ಟೊ ಕುಟುಂಬದ ಸದಸ್ಯರು ಸಾಕಷ್ಟು ಸಾಲ ಮಾಡಿ, ಆ ಸಾಲ ತೀರಿಸುವುದರಲ್ಲಿಯೇ ತಮ್ಮ ಜೀವನ ಕಳೆಯುತ್ತಾರೆ. ಹೀಗಾಗಿ ಸಾಲರಹಿತ ಮದುವೆಗೆ ಇಂತಹ ಸರಳ ಸಾಮೂಹಿಕ ವಿವಾಹ ಅತ್ಯವಶ್ಯವಾಗಿವೆ. ಮುಂದೆ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಸಲಹೆ ನೀಡಿದರು.

       ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಹಲಸೆ ಮಾತನಾಡಿ, ಬಸವಣ್ಣನವರ ತತ್ವದಡಿ ನಡೆಯುತ್ತಿರುವ ಸಾಮೂಹಿಕ ವಿವಾಹವು ಎಲ್ಲರಿಗೂ ಆದರ್ಶವಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿಗಳಿಗೆ ಶುಭ ವಾಗಲಿ ಎಂದು ಶುಭ ಹಾರೈಸಿದರು.

       ಬಹುಜನ ಸಮಾಜ ಸೇವಾರತ್ನ ಪ್ರಶಸ್ತಿ ಪುರಸ್ಕತ ಬಿ.ಎಂ.ಹನುಮಂತಪ್ಪ ಮಾತನಾಡಿ, ಗೊಡ್ಡು ಸಂಪ್ರದಾಯಗಳನ್ನು ಬದಿಗೊತ್ತಿ, ಯಾವುದೇ ದಿನ, ಸಮಯ ನೋಡದೆ ಇಂದು ನಡೆಯುತ್ತಿರುವ ಸಾಮೂಹಿಕ ವಿವಾಹ ಬಸವ ಪರಂಪರೆಯಿಂದ ಕೂಡಿದೆ ಎಂದರು.
ಉಪನ್ಯಾಸ ನೀಡಿದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹೆಚ್.ವಿಶ್ವನಾಥ್, ಅಲಕ್ಷಿತ ಸಮುದಾಯಕ್ಕೆ ಸಮಾನತೆ ಕಲ್ಪಿಸುವ ಉದ್ದೇಶದಿಂದ 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ಕ್ರಾಂತಿ ನಡೆಸಿದ್ದರು.

      ಎಲ್ಲಾ ಜನಾಂಗದವರನ್ನು ಒಂದೇ ವೇದಿಕೆಯಡಿ ಸೇರಿಸಿ ಸಮಾನತೆ ಕಲ್ಪಿಸಿದರು. ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದರು. ಡಾ.ಅಂಬೇಡ್ಕರ್ ಅವರೂ ಹಿಂದುಳಿದವರ ಸಮಾನತೆಗಾಗಿ ಸಂವಿಧಾನ ಬರೆದು ಶತಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದ ದೀನ-ದಲಿತರನ್ನು, ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

      ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು, ಎರಡು ಮಕ್ಕಳಿಗೆ ಜನ್ಮ ನೀಡಿ, ಅವರಿಗೆ ಉತ್ತಮವಾದ ಶಿಕ್ಷಣ, ಸಂಸ್ಕಾರ ನೀಡಬೇಕು. ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭ ಹೊಟೇಲ್ ಉದ್ಯಮಿ ಮಲ್ಯಾಡಿ ಪ್ರಭಾಕರ್ ಶೆಟ್ಟಿ, ಮಾನವ ಹಕ್ಕು ವೇದಿಕೆಯ ಬಿ.ಎಂ. ಹನುಮಂತಪ್ಪ, ಸಾಹಿತ್ಯ ಅಕಾಡೆಮಿ ಪುರಸ್ಕತ ಎ.ಕೆ. ಹಂಪಣ್ಣ, ಪತ್ರಕರ್ತ ಸಿ.ವರದರಾಜ್, ಡಾ.ನಸೀರ್ ಅಹಮದ್ ಮತ್ತಿತರರಿಗೆ ಬಹುಜನ ಸಮಾಜ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

          ಇದೇ ಸಂದರ್ಭ 25 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ಬಹುಜನ ಸಮಾಜ ಸೇವಾ ಸಂಘದ ಎಂ. ಆಂಜನೇಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಟಿ.ರಂಗನಾಥ್, ಎಸ್.ಓಂಕಾರಪ್ಪ, ಗಣೇಶ್ ದಾಸಕರಿಯಪ್ಪ, ಎಂ.ಆನಂದ್, ಸಂಗನಗೌಡ್ರು, ನಸೀರ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಹೆಗ್ಗೆರೆ ರಂಗಪ್ಪ ಕಾರ್ಯಕ್ರಮ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap