ಗಾಂಧಿ ವಿಚಾರಧಾರೆ ವಿಶ್ವಕ್ಕೆ ಅವಶ್ಯ:ಚಂದ್ರಪ್ಪ

ಚಿತ್ರದುರ್ಗ;

      ಸತ್ಯ, ಅಹಿಂಸೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡ ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತಗಳ ಅಳವಡಿಕೆ ಇಂದಿನ ಕಾಲಕ್ಕೆ ಅಗತ್ಯವಾಗಿದೆ ಎಂದು ಚಿತ್ರದುರ್ಗ ಸಂಸದ ಬಿ.ಎನ್. ಚಂದ್ರಪ್ಪ ಅವರು ಹೇಳಿದರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ, ನಗರಸಭೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ನಗರದ ತ.ರಾ.ಸು. ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿಯವರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮವನ್ನು ಗಾಂಧೀಜಿ ಹಾಗೂ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

      ಮಹಾತ್ಮಾ ಗಾಂಧೀಜಿ ಯವರ ವಿಚಾರಗಳು ಕೇವಲ ಭಾರತಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಅವಶ್ಯಕವಾಗಿವೆ. ಗಾಂಧೀಜಿಯವರು ಸತ್ಯ, ಅಹಿಂಸೆಯ ಮಾರ್ಗವನ್ನೇ ಸ್ವಾತಂತ್ರ್ಯ ಚಳುವಳಿಗೆ ಅನುಸರಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ, ಅತ್ಯಂತ ಸರಳತೆಯ ಜೀವನ ನಡೆಸಿದರು.

      ಪರಕೀಯರ ಮುಷ್ಟಿಯಲ್ಲಿದ್ದ ದೇಶಕ್ಕೆ ಸ್ವಾತಂತ್ರ್ಯ ಗಳಿಸುವುದು ಸುಲಭದ ಮಾತಾಗಿರಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ಸತ್ಯಾಗ್ರಹದ ಮೂಲಕ, ಅಹಿಂಸೆಯ ಮಾರ್ಗದಲ್ಲಿ ಹೋರಾಟ ನಡೆಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಗಾಂಧೀಜಿಯವರು. ವರ್ಷಾನುಗಟ್ಟಲೆ ನಡೆದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಾವಿರಾರು ಜನರ ತ್ಯಾಗ ಬಲಿದಾನದಿಂದ, ಸ್ವಾತಂತ್ರ್ಯ ಗಳಿಕೆಯ ಜೊತೆಗೆ ಸದೃಢ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯವಾಯಿತು.

       ಜಾತಿಪದ್ಧತಿಯನ್ನು ನಿರ್ಮೂಲನೆ ಮಾಡಲು, ಶೋಷಿತ ಜನರಿಗೆ ‘ಹರಿಜನ’ ಎಂಬ ಪದ ಬಳಕೆ ಮಾಡುವ ಮೂಲಕ ದಲಿತರು ದೇವರ ಮಕ್ಕಳು ಎಂದವರು ಗಾಂಧೀಜಿ. ಇತ್ತೀಚಿನ ದಿನಗಳಲ್ಲಿ ನಾವು, ಗಾಂಧೀಜಿಯವರ ತತ್ವ ಮತ್ತು ಸಿದ್ಧಾಂತವನ್ನು ಎಷ್ಟರ ಮಟ್ಟಿಗೆ ಅಳವಡಿಕೊಳ್ಳುತ್ತಿದ್ದೇವೆ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮಹಾತ್ಮಾ ಗಾಂಧಿಯವರ ವಿಚಾರಗಳು ಇಂದಿಗೂ ನಾಳಿಗೂ ಅಮರವಾಗಿವೆ. ಲಾಲ ಬಹಾದ್ದೂರ ಶಾಸ್ತ್ರಿ ಅವರು ಈ ದೇಶ ಕಂಡ ಸರಳ ಸಜ್ಜನಿಕೆಯ ಪ್ರಧಾನಿಯಾಗಿದ್ದರು.

       ರೈತ ಹಾಗೂ ಸೈನಿಕರಿಗಾಗಿ “ಜೈ ಜವಾನ ಜೈ ಕಿಸಾನ್” ಎಂಬ ಘೋಷಣೆ ನೀಡಿದ ದಕ್ಷ ಆಡಳಿತಗಾರರು. ಪ್ರಧಾನಿಯಾಗಿದ್ದಾಗ, ತಮ್ಮ ಸಂಬಳದಲ್ಲಿ, ಪತ್ನಿ ಉಳಿತಾಯ ಮಾಡುತ್ತಿರುವ ವಿಷಯ ಗಮನಕ್ಕೆ ಬಂದಾಗ, ತಮ್ಮ ಸಂಬಳವನ್ನು ಕಡಿತಗೊಳಿಸುವಂತೆ ಸೂಚನೆ ನೀಡಿದ್ದರು. ಅಂತಹ ಪ್ರಾಮಾಣಿಕ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಲಾಲ್ ಬಹದ್ದೂರ್ ಶಾಸ್ತ್ರಿಯವರು. ಗಾಂಧೀಜಿಯವರ ಹಾಗೂ ಶಾಸ್ತ್ರಿಯವರ ತತ್ವವನ್ನು ನಿತ್ಯದ ಬದುಕಿನಲ್ಲಿ ಕೊಂಚವಾದರೂ ಅಳವಡಿಕೊಳ್ಳುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ಸಂಸದ ಬಿ.ಎನ್. ಚಂದ್ರಪ್ಪ ಅವರು ಹೇಳಿದರು.

       ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಮಾತನಾಡಿ, ಗ್ರಾಮ ಸ್ವರಾಜ್ಯ ಹಾಗೂ ಸ್ವಚ್ಛತೆಯ ಪರಿಕಲ್ಪನೆಯನ್ನು ಈ ದೇಶಕ್ಕೆ ಮೊದಲು ನೀಡಿದವರು ಗಾಂಧೀಜಿಯವರು. ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ಮಾರ್ಗದ ಹೋರಾಟದ ಇತಿಹಾಸವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.

       ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಚಿದಾನಂದ್ ಅವರು, ಆಧುನಿಕ ಜಗತ್ತಿನಲ್ಲಿ ಗಾಂಧಿ ತತ್ವದ ಅಸ್ತಿತ್ವತೆ ಸವಾಲಿನ ಸಂಗತಿಯಾಗಿದೆ. ಭಾರತಕ್ಕೆ ಸ್ವಾತಂತ್ರ್ಯಕ್ಕಿಂತ ಸ್ವರಾಜ್ಯ ಬೇಕು ಎನ್ನುವುದು ಗಾಂಧೀಜಿಯವರ ಕನಸಾಗಿತ್ತು.

       ಆದರೆ, ಗಾಂಧಿ ವಾದಕ್ಕೆ ಆಧುನಿಕತೆಯೇ ಶತ್ರುವಾಗಿದೆ. ಆಧುನಿಕತೆಯಿಂದ ಬಡವ-ಶ್ರೀಮಂತರ ನಡುವಿನ ಅಂತರ ದಿನದಿಂದ ದಿನಕ್ಕೆ ಹೆಚ್ಚಾಗುವ ಕುರಿತು, ಅಂದಿನ ಸಂದರ್ಭದಲ್ಲಿಯೇ ಗಾಂಧೀಜಿಯವರು ಎಚ್ಚರಿಕೆ ನೀಡಿದ್ದರು. ಗಾಂಧೀಜಿಯವರ ಕನಸಿನ ಗ್ರಾಮ ಸ್ವರಾಜ್ಯ ಅನುಷ್ಠಾನವಾಗಿದ್ದರೆ, ನಿರುದ್ಯೋಗ ರಹಿತ, ಸ್ವಾವಲಂಬಿ ಭಾರತ ನಿರ್ಮಾಣವಾಗುತ್ತಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿಯವರು, ದೇಶದ ಭವಿಷ್ಯ ಕೃಷಿಯಲ್ಲಿ ಅಡಗಿದೆ, ರೈತರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಾಗ ಮಾತ್ರ, ಸಮೃದ್ಧ ಭಾರತ ನಿರ್ಮಾಣ ಸಾಧ್ಯ ಎಂಬುದಾಗಿ ನುಡಿದಿದ್ದರು. ವಿಶ್ವದ ಎಲ್ಲೆಡೆಯೂ ಗಾಂಧೀಜಿ ಅವರ ಚಿಂತನೆಗಳ ಬಗ್ಗೆ ಪ್ರಸ್ತುತತೆಯನ್ನು ಕಾಣಬಹುದಾಗಿದೆ ಎಂದರು.

      ವಿಶೇಷ ಸಂಚಿಕೆಗಳ ಬಿಡುಗಡೆ : ಮಹಾತ್ಮಾ ಗಾಂಧೀಜಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಲಾಗಿರುವ ಅಕ್ಟೋಬರ್ ಮಾಹೆಯ ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಸಂಚಿಕೆಯ ಗಾಂಧೀಜಿ ವಿಶೇಷಾಂಕ ಹಾಗೂ ಕನ್ನಡ ಮತ್ತು ಸಂಸ್ಸತಿ ಇಲಾಖೆ ಪ್ರಕಟಿಸಿರುವ ‘ಪಾಪು ಗಾಂಧಿ- ಗಾಂಧಿ ಬಾಪು ಆದ ಕಥೆ’ ಕಿರು ಹೊತ್ತಿಗೆಯನ್ನು ಗಣ್ಯ ಮಾನ್ಯರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಅಲ್ಲದೆ ಕಿರುಹೊತ್ತಿಗೆಗಳನ್ನು ಎಲ್ಲ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

     ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿ.ಪಂ. ಉಪಾಧ್ಯಕ್ಷೆ ಸುಶೀಲಮ್ಮ, ಜಿ.ಪಂ. ಸದಸ್ಯ ನರಸಿಂಹರಾಜು, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾದಿಕಾರಿ ವಿಜಯಕುಮಾರ್, ಡಿಡಿಪಿಐ ಅಂಥೋಣಿ, ಸೇರಿದಂತೆ ಹಲವು ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದು ಗಾಂಧೀಜಿ ಹಾಗೂ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದಕ್ಕೂ ಪೂರ್ವದಲ್ಲಿ ಹೊಸದುರ್ಗದ ಮೂರ್ತಿ ಮತ್ತು ಸಂಗಡಿಗರು ಗಾಂಧೀಜಿಯವರಿಗೆ ಪ್ರಿಯವಾಗಿದ್ದ ರಘುಪತಿ ರಾಘವ ರಾಜಾರಾಂ, ಗೀತ ಗಾಯನ ನಡೆಸಿಕೊಟ್ಟರು. ನಗರಸಭೆ ಪೌರಾಯುಕ್ತ ಚಂದ್ರಪ್ಪ ಸ್ವಾಗತಿಸಿದರು, ವಾರ್ತಾ ಸಹಾಯಕ ತುಕಾರಾಂರಾವ್ ವಂದಿಸಿದರು, ಶಿವರಾಂ ಅವರು ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap