ತುಮಕೂರು ತಾ.ಪಂ: `ಕೊಳವೆಬಾವಿ ರಾಜಕೀಯ’ಕ್ಕೆ ಅಧ್ಯಕ್ಷರ ಆಕ್ರೋಶ

ತುಮಕೂರು

   ಶಾಸಕರ ಹೆಸರಿನಲ್ಲಿ `ಕೊಳವೆ ಬಾವಿ ರಾಜಕೀಯ’ ನಡೆಯುತ್ತಿದೆಯೆಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರೇ ನೇರ ಆರೋಪ ಮಾಡುವ ಮೂಲಕ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಅವರ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ ಅಪರೂಪದ ಬೆಳವಣಿಗೆ ತುಮಕೂರು ತಾಲ್ಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.

   ಬುಧವಾರ ಬೆಳಗ್ಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ (ಸ್ವಾಂದೇನಹಳ್ಳಿ ಕ್ಷೇತ್ರ-ಬಿಜೆಪಿ) ಅವರ ಅಧ್ಯಕ್ಷತೆಯಲ್ಲಿ ತಾ.ಪಂ. ವ್ಯಾಪ್ತಿಯ ಪ್ರಗತಿ ಪರಿಶೀಲನಾ ಸಭೆ ಏರ್ಪಟ್ಟಿತ್ತು. ಅಲ್ಲಿ ಗ್ರಾಮೀಣ ಕುಡಿಯುವ ನೀರಿನ ವಿಷಯವು ಅಜೆಂಡಾದ ಮೊದಲನೇ ವಿಷಯವಾಗಿತ್ತು.

    ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ಲಲಿತೇಶ್ವರ್ ಅವರು ತುಮಕೂರು ತಾಲ್ಲೂಕು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯ ಅಂಕಿಅಂಶವನ್ನು ಸಭೆಗೆ ವಿವರಿಸಿದರು. ನೀರು ಪೂರೈಕೆಗಾಗಿ ಆಗಿರುವ ಕಾಮಗಾರಿಗಳು ಹಾಗೂ ಆಗಬೇಕಿರುವ ಕಾಮಗಾರಿಗಳ ಪಟ್ಟಿ ನೀಡಿದರು. ಬಳಿಕ 2018 ರ ನವೆಂಬರ್‍ನಿಂದ ಈವರೆಗೆ ಒಟ್ಟು 166 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ.

     ಇದರಲ್ಲಿ 89 ಕೊಳವೆ ಬಾವಿಗಳು ಯಶಸ್ವಿಯಾಗಿವೆ. 20 ಕೊಳವೆ ಬಾವಿಗಳು ವಿಫಲವಾಗಿವೆ. 57 ಕೊಳವೆ ಬಾವಿಗಳಲ್ಲಿ ಕಡಿಮೆ ಪ್ರಮಾಣದ ನೀರು ದೊರಕಿದೆ. ಈವರೆಗೆ 74 ಕೊಳವೆ ಬಾವಿಗಳಿಗೆ ಪಂಪು-ಮೋಟಾರ್ ಅಳವಡಿಸಲಾಗಿದೆ. 14 ಕೊಳವೆ ಬಾವಿಗಳಿಗೆ ವಿದ್ಯುದೀಕರಣಕ್ಕಾಗಿ ಪ್ರಕ್ರಿಯೆ ನಡೆದಿದೆ. ಅನೇಕ ಸ್ಥಳಗಳಲ್ಲಿ 1200 ಅಡಿಗಳಷ್ಟು ಆಳಕ್ಕೆ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ ಎಂದು ವಿವರಿಸುತ್ತ ಹೋದರು.

ಶಾಸಕರು ಹೇಳಿದ್ದಾರೆಂದು ವಾಹನ ಸ್ಥಳಾಂತರ ಏಕೆ?

     ಈ ಸಂದರ್ಭದಲ್ಲಿ ಅವರ ಮಾತನ್ನು ಮಧ್ಯದಲ್ಲೇ ತಡೆದ ಅಧ್ಯಕ್ಷ ಗಂಗಾಂಜನೇಯ ಅವರು “ಇಂಥ ವರದಿಯನ್ನು ನನಗೆ ಕೊಡಬೇಡಿ. ಅದನ್ನು ಶಾಸಕರಿಗೇ ಹೇಳಿ” ಎಂದು ಅಸಮಾಧಾನದಿಂದ ಹೇಳುತ್ತಲೇ ಮಾತು ಆರಂಭಿಸಿದರು. “ನನ್ನ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದೆ. ನನ್ನ ಕ್ಷೇತ್ರ ವ್ಯಾಪ್ತಿಯ ವಡ್ಡರಹಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ.

     ಇಲ್ಲಿರುವ ಕೊಳವೆಬಾವಿಯನ್ನು ರೀಬೋರ್ ಮಾಡಿಸುವ ಅಗತ್ಯವಿದೆಯೆಂದು ನಿಶ್ಚಯಿಸಿದ್ದು, ಅದರಂತೆ ರೀಬೋರ್ ಮಾಡಲು ವಾಹನ ಬಂದು ರೀಬೋರ್ ಕೆಲಸವನ್ನೂ ಆರಂಭಿಸಿತು. ಆದರೆ ಅಷ್ಟರಲ್ಲಿ ಶಾಸಕರು ಹೇಳಿದ್ದಾರೆಂದು ಹೇಳಿ ರೀಬೋರ್ ಕಾಮಗಾರಿಯನ್ನು ಅರ್ಧಕ್ಕೇ ಸ್ಥಗಿತಗೊಳಿಸಿ, ಆ ವಾಹನವನ್ನು ಬೇರೆಡೆಗೆ ಒಯ್ಯಲಾಯಿತು. ಜಿಯಾಲಜಿಸ್ಟ್ ಗುರುತಿಸದಿರುವ ಬೇರೊಂದು ಸ್ಥಳದಲ್ಲಿ ಯಾರದ್ದೋ ಮಾತು ಕೇಳಿಕೊಂಡು ಕೊಳವೆಬಾವಿ ಕೊರೆದರೂ ಅಲ್ಲಿ ನೀರು ಸಿಗದೆ ವಿಫಲವಾಗಿದೆ. ಏಕೆ ಈ ರೀತಿ ಮಾಡಲಾಗಿದೆ? ಅರ್ಧಕ್ಕೇ ಸ್ಥಗಿತಗೊಳಿಸುವ ತುರ್ತು ಏನಿತ್ತು? ಜಿಯಾಲಜಿಸ್ಟ್ ಮಾತನ್ನು ಏಕೆ ಕೇಳಲಿಲ್ಲ? ತಾಲ್ಲೂಕು ಪಂಚಾಯಿತಿ ಅಧ್ಯಕ್ಷನಾಗಿ ನನ್ನ ಮಾತಿಗೆ ಬೆಲೆ ಇಲ್ಲವೇ?” ಎಂದು ಏರಿದ ದನಿಯಲ್ಲಿ ಆಕ್ರೋಶದಿಂದ ಪ್ರಶ್ನಿಸಿದರು.

     ಇದಕ್ಕೆ ಪ್ರತಿಕ್ರಿಯಿಸಿದ ಸದರಿ ಇಂಜಿನಿಯರ್ ಮೊದಲಿಗೆ ಸಮಜಾಯಿಷಿ ಕೊಡಲು ಯತ್ನಿಸಿದರಾದರೂ, ಅಧ್ಯಕ್ಷ ಗಂಗಾಂಜನೇಯ ಅವರು ಇದನ್ನು ಒಪ್ಪಿಕೊಳ್ಳಲಿಲ್ಲ. ಆಗ “ಇನ್ನು ಮುಂದೆ ಈ ರೀತಿ ಆಗದಂತೆ ಗಮನ ಹರಿಸಲಾಗುವುದು” ಎಂದು ಆ ಇಂಜಿನಿಯರ್ ಉತ್ತರಿಸಿದರು.

ಅಧಿಕಾರ ದುರ್ಬಳಕೆಯಾಗಿಲ್ಲ

      ಮತ್ತೆ ಮಾತನ್ನು ಮುಂದುವರೆಸಿದ ಗಂಗಾಂಜನೇಯ ಅವರು, “ನಾನು ನನ್ನ ಮೂರು ವರ್ಷದ ಅಧ್ಯಕ್ಷಾವಧಿಯಲ್ಲಿ ಎಂದೂ ಸಹ ನನ್ನ ಸ್ವಂತ ಕೆಲಸಕ್ಕೆ ನನ್ನ ಅಧಿಕಾರವನ್ನು ಬಳಸಿಕೊಂಡಿಲ್ಲ. ಯಾವ ಅಧಿಕಾರಿಯನ್ನೂ ನನ್ನ ಸ್ವಂತ ಕೆಲಸಕ್ಕೆ ಉಪಯೋಗಿಸಿಕೊಂಡಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳಿಗಾಗಿ ಮಾತ್ರ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ. ನನ್ನ ಸ್ವಂತ ಹಣವನ್ನು ವೆಚ್ಚ ಮಾಡಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡುತ್ತ ಬಂದಿದ್ದೇನೆ.

       ಹೀಗಿದ್ದರೂ ತಾ.ಪಂ. ಅಧ್ಯಕ್ಷನಾದ ನನ್ನ ಕ್ಷೇತ್ರದಲ್ಲೇ ಈ ರೀತಿ ಆಗಿದೆ. ಇದಕ್ಕೆ ಅಧಿಕಾರಿಗಳು ಕಾರಣರಲ್ಲ. ಅಧಿಕಾರಿಗಳು ಯಾರ ಒತ್ತಡದಿಂದ ಈ ರೀತಿ ಮಾಡುವಂತಾಗಿದೆ ಹಾಗೂ ಯಾರಿಂದ ಏಕೆ ಈ ರೀತಿ ಆಗಿದೆಯೆಂಬುದು ನನಗೆ ಚೆನ್ನಾಗಿ ಗೊತ್ತು” ಎಂದು ಹೇಳುವ ಮೂಲಕ ಮಾರ್ಮಿಕವಾಗಿ ತಮ್ಮ ರಾಜಕೀಯ ವಿರೋಧಿಗಳನ್ನು ಕುಟುಕಿದರು.

     “ಯಾರೋ ಹೇಳಿದ ಜಾಗದಲ್ಲಿ ಕೊರೆದ ಕೊಳವೆಬಾವಿ ವಿಫಲವಾಗಿದೆ ಎಂಬುದನ್ನು ನೀವು ನಿರಾಕರಿಸಿದರೆ, ಈಗಲೇ ನಾನು ರಾಜಿನಾಮೆ ಕೊಟ್ಟುಬಿಡುತ್ತೇನೆ” ಎಂದೂ ಅವರು ಆವೇಶದಿಂದ ಗುಡುಗಿದರು.”ವಡ್ಡರಹಳ್ಳಿಯಲ್ಲಿ ಇತ್ತ ಕೊಳವೆಬಾವಿ ನೀರೂ ಇಲ್ಲ; ಅತ್ತ ಟ್ಯಾಂಕರ್ ನೀರೂ ಪೂರೈಕೆ ಆಗುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವವರಿಗೆ ಸಕಾಲಕ್ಕೆ ಬಿಲ್ ಪಾವತಿ ಆಗುತ್ತಿಲ್ಲ. ಇದರಿಂದ ಅವರು ನೀರು ಪೂರೈಕೆ ಸ್ಥಗಿತಗೊಳಿಸಿದ್ದಾರೆ.

     ಈಗ ಅಲ್ಲಿನ ಜನರು ನೀರಿಗಾಗಿ ಏನು ಮಾಡಬೇಕು?” ಎಂದು ಪ್ರಶ್ನಿಸಿದ ಅವರು, “ಬೆಳಗುಂಬ ಗ್ರಾಮ ಪಂಚಾಯತಿಯ ಕಾರ್ಯಾಲಯಕ್ಕೆ ಅಲ್ಲಿನ ಜನರು ಎರಡು ಬಾರಿ ಬೀಗ ಹಾಕಿ ಹೋರಾಡಿದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಪಿ.ಡಿ.ಓ. ಅವರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದರೂ, ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾತಿನುದ್ದಕ್ಕೂ ಅಧಿಕಾರಿಗಳನ್ನು ಕುರಿತು “ನೀವೇನು ಮಾಡಲು ಸಾಧ್ಯ? ಶಾಸಕರು ಹೇಳಿದಂತೆ ಕೇಳಬೇಕಲ್ಲವೇ?” ಎಂದು ಕುಟುಕುತ್ತ ಹೋದರು.

ಬದಲಾವಣೆಗೆ ಭರವಸೆ

     ಈ ಹಂತದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಿ. ಜೈಪಾಲ್ ಅವರು ಬೆಳಗುಂಬ ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಜೊತೆ ಮೊಬೈಲ್‍ನಲ್ಲೇ ಮಾತನಾಡಿ ನೀರಿನ ಟ್ಯಾಂಕರ್‍ಗಳಿಗೆ ಬಿಲ್ ಪಾವತಿ ಮಾಡಿಲ್ಲವೆಂಬ ದೂರಿನ ಬಗ್ಗೆ ಉತ್ತರ ಪಡೆದುಕೊಂಡರಲ್ಲದೆ, ಕೂಡಲೇ ಬಿಲ್ ಪಾವತಿಸುವಂತೆ ನಿರ್ದೇಶನ ನೀಡಿದರು. ಅಲ್ಲದೆ ಪಿ.ಡಿ.ಓ.ರನ್ನು ಬದಲಾವಣೆ ಮಾಡಲಾಗುವುದು ಎಂದು ಅಧ್ಯಕ್ಷರಿಗೆ ಭರವಸೆ ಕೊಟ್ಟರು.

     ಚರ್ಚೆಯ ನಡುವೆ ಸದರಿ ಇಂಜಿನಿಯರ್ ಮತ್ತೆ ಮಾತನಾಡುತ್ತ, ಮಂಜೂರಾತಿ ಪಡೆದ ಬಳಿಕವಷ್ಟೇ ಕೊಳವೆ ಬಾವಿ ಕೊರೆಸುತ್ತೇ ವೆಂದರೆ ತುರ್ತಾಗಿ ಒಂದೇ ಒಂದು ಕೊಳವೆಬಾವಿಯನ್ನು ಕೊರೆಸುವುದೂ ಅಸಾಧ್ಯವಾಗುತ್ತದೆ. ಅಲ್ಲದೆ ನೀರಿನ ಸಮಸ್ಯೆ ಇರುವ ಸ್ಥಳದಲ್ಲಿ ಕೊಳವೆಬಾವಿ ಕೊರೆಸುವ ವಿಷಯವನ್ನು ಅಧಿಕಾರಿಗಳ ವಿವೇಚನೆಗೆ ಬಿಟ್ಟರೆ, ತ್ವರಿತವಾಗಿ ಕೆಲಸ ಆಗುತ್ತದೆ. ಆದರೆ ವಾಸ್ತವಾಂಶ ಬೇರೆ ಆಗಿರುತ್ತದೆ. ಕೊಳವೆಬಾವಿ ಕೊರೆಸಲು ಒಬ್ಬರು ಒಂದು ಸ್ಥಳವನ್ನು ತೋರಿಸಿದರೆ, ಇನ್ನೊಬ್ಬರು ಇನ್ನೊಂದು ಸ್ಥಳವನ್ನು ತೋರಿಸುತ್ತಾರೆ. ಇಂತಹ ಅನೇಕ ಸಮಸ್ಯೆಗಳಿರುತ್ತವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ತುಮಕೂರು ತಾಲ್ಲೂಕಿನಲ್ಲಿ 119 ಆರ್.ಓ. ಘಟಕಗಳು

      ಇದಾದ ಬಳಿಕ ಚರ್ಚೆಯು ತುಮಕೂರು ತಾಲ್ಲೂಕಿನಲ್ಲಿರುವ “ಶುದ್ಧ ಕುಡಿಯುವ ನೀರಿನ ಘಟಕ” (ಆರ್.ಓ. ಪ್ಲಾಂಟ್)ಗಳತ್ತ ಹೊರಳಿತು. ತಾಲ್ಲೂಕಿನಲ್ಲಿ ಎಷ್ಟು ಆರ್.ಓ. ಘಟಕಗಳಿವೆ? ಅವುಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ? ಅವುಗಳಿಗೆ ನೀರು ಪೂರೈಕೆ ಹೇಗೆ ಆಗುತ್ತಿದೆ? ಎಂಬ ಪ್ರಶ್ನೆಗಳನ್ನು ಅಧ್ಯಕ್ಷ ಗಂಗಾಂಜನೇಯ ಮತ್ತು ಕಾರ್ಯನಿರ್ವಹಣಾಧಿಕಾರಿ ಡಿ. ಜೈಪಾಲ್ ಅವರು ಮುಂದಿಟ್ಟರು.
ಇದಕ್ಕೆ ಉತ್ತರ ನೀಡಿದ ಇಂಜಿನಿಯರ್ ಲಲಿತೇಶ್ವರ್ ಅವರು, ತುಮಕೂರು ತಾಲ್ಲೂಕಿನಲ್ಲಿ ಒಟ್ಟು 119 ಆರ್.ಓ. ಘಟಕಗಳಿವೆ.

      ಇದರಲ್ಲಿ ತುಮಕೂರಿನ ಸರಸ್ವತಿಪುರಂನಲ್ಲಿರುವ ಘಟಕ ಮಾತ್ರ ಸ್ಥಗಿತವಾಗಿದೆ. ಇದರಲ್ಲಿ 40 ಘಟಕಗಳನ್ನು ಹಿಂದುಪುರದ ಸಾಯಿ ವಾಟರ್ಸ್ ಎಂಬ ಸಂಸ್ಥೆ ನಿರ್ವಹಿಸುತ್ತಿದೆ. 5 ವರ್ಷಗಳ ಅವಧಿಗೆ ನಿರ್ವಹಣೆಯ ಒಪ್ಪಂದವಾಗಿದೆ. ಪ್ರಸ್ತುತ ಮೂರೂವರೆ ವರ್ಷಗಳಾಗಿವೆ. ಗ್ರಾ.ಪಂ. ವತಿಯಿಂದ ಈ ಘಟಕಗಳಿಗೆ ಉಚಿತವಾಗಿ ನೀರನ್ನು ಪೂರೈಕೆ ಮಾಡಲಾಗುತ್ತದೆ. ಘಟಕದವರು ನಿರ್ವಹಣೆಯ ಜೊತೆಗೆ ವಿದ್ಯುತ್ ಬಿಲ್, ವೇತನ ಇತ್ಯಾದಿ ಪಾವತಿ ಮಾಡಿಕೊಳ್ಳಬೇಕು ಎಂಬ ಮಾಹಿತಿಗಳನ್ನು ನೀಡಿದರು.

       ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಡಿ. ಜೈಪಾಲ್ ಮಧ್ಯಪ್ರವೇಶಿಸಿ, “ಈಗ ಎಲ್ಲೆಲ್ಲೂ ನೀರಿನ ಅಭಾವ ಇದೆ. ಖಾಸಗಿಯವರಿಂದ ನೀರನ್ನು ಖರೀದಿಸಿ ತಂದು ವಿತರಿಸಬೇಕು. ಈ ಆರ್.ಓ. ಘಟಕಗಳಿಗೂ ಟ್ಯಾಂಕರ್ ಮೂಲಕವೇ ನೀರನ್ನು ಭರಿಸಬೇಕು. ಶುದ್ಧೀಕರಣ ಪ್ರಕ್ರಿಯೆ ಆಗುವಾಗ ಈ ಘಟಕಗಳಲ್ಲಿ ಶೇ. 60 ರಷ್ಟು ನೀರು ವ್ಯರ್ಥವಾಗುತ್ತದೆ. ಆದ ಕಾರಣ ಈ ಘಟಕ ನಿರ್ವಹಿಸುವವರು ಟ್ಯಾಂಕರ್ ನೀರಿಗೆ ಕನಿಷ್ಟಪಕ್ಷ ಅರ್ಧದಷ್ಟಾದರೂ ಹಣವನ್ನು ಪೂರೈಸಿದರೆ ಅನುಕೂಲವಾಗುವುದು” ಎಂದು ಅಭಿಪ್ರಾಯಪಟ್ಟಾಗ, ಅಧ್ಯಕ್ಷ ಗಂಗಾಂಜನೇಯ ಅವರೂ ಇದಕ್ಕೆ ಸಹಮತ ವ್ಯಕ್ತಪಡಿಸಿದರು.

      ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷ ಕೆ.ಎನ್.ಶಾಂತಕುಮಾರ್ (ಕೆಸರುಮಡು ಕ್ಷೇತ್ರ- ಬಿಜೆಪಿ), ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎಲ್. ರಮೇಶ್ (ಹಿರೇಹಳ್ಳಿ ಕ್ಷೇತ್ರ- ಬಿಜೆಪಿ) ಮತ್ತು ತಾ.ಪಂ. ಆಡಳಿತಾಧಿಕಾರಿ ಆದಿಲಕ್ಷ್ಮಮ್ಮ ಅವರುಗಳು ಉಪಸ್ಥಿತರಿದ್ದರು. ತಾಲ್ಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ತಮ್ಮ ಇಲಾಖಾ ವ್ಯಾಪ್ತಿಯ ಪ್ರಗತಿಯ ಅಂಕಿ ಅಂಶಗಳನ್ನು ವಿವರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap