ವಿಜಯಪುರ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೈಕಮಾಂಡ್ ಅಂಗಳದಲ್ಲಿದ್ದು, ಆದಷ್ಟು ಬೇಗ ಹೈಕಮಾಂಡ್ ಅಳೆದು ತೂಗಿ ಒಂದು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ. ಒಂದು ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಮಗೆ ಕೊಟ್ಟರೆ ಅದನ್ನು ನಿಭಾಯಿಸುವ ಸಾಮರ್ಥ್ಯ ಇದೆ ಎಂದು ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಕೆಪಿಸಿಸಿ ಗಾಗಿ ಲಾಬಿ ಮಾಡಿಲ್ಲ. ಮಧುಸೂಧನ ಮಿಸ್ತ್ರಿ ಬಂದಾಗಲು ಹಾಗೂ ಎಐಸಿಸಿ ನಾಯಕಿ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿದಾಗ ಲೂ ಪಕ್ಷ ಅಧಿಕಾರಕ್ಕೆ ಬರಲು ಏನು ಮಾಡಬೇಕು ಎನ್ನುವುದನ್ನಷ್ಟೇ ಹೇಳಿದ್ದೇನೆಯೇ ಹೊರತು ಎಲ್ಲಿಯೂ ತಮ್ಮ ಬಗ್ಗೆ ಪ್ರತಿಪಾದಿಸಿಲ್ಲ .ಪಕ್ಷದ ಅಭಿವೃದ್ಧಿ ಲೆಕ್ಕಚಾರದಲ್ಲಿ ನಾಯಕರು ತಮ್ಮನ್ನು ಪರಿಗಣಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವಂತೆ ಸ್ವತಃ ತಾವೆಲ್ಲಿಯೂ ಕೇಳಿಲ್ಲ. ಪಕ್ಷ ಜವಾಬ್ದಾರಿ ಕೊಟ್ಟರೆ ಅದನ್ನು ನಿಭಾಯಿಸುವ ಶಕ್ತಿ ತಮ್ಮ ಬಳಿ ಇದೆ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಕ್ಷಿಣದವರು. ಹೀಗಾಗಿ ಕೆಪಿಸಿಸಿ ಸ್ಥಾನ ಉತ್ತರ ಕರ್ನಾಟಕಕ್ಕೆ ಕೊಡಬೇಕು. ಉತ್ತರ ಕರ್ನಾಟಕದಲ್ಲಿ ಯಾವ ಜಾತಿಗೆ ಕೊಡಬೇಕು ಎಂಬ ನಿರ್ಣಯ ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ. ಹೈಕಮಾಂಡ್ ಎದುರು ಸಿದ್ದರಾಮಯ್ಯ ಎಮ್.ಬಿ. ಪಾಟೀಲ್ ಹೆಸರು ಪ್ರಸ್ತಾಪ ಮಾಡಿದ್ದಾರೆ ಎಂಬುದು ತಮಗೆ ತಿಳಿದುಬಂದಿದೆಯಾದರೈ ಹೈಕಮಾಂಡ್ ಎದುರು ತಮ್ಮ ಪರ ಲಾಬಿ ಮಾಡುವಂತೆ ಹೇಳಿಲ್ಲ. ಕೆಲ ಲೆಕ್ಕಾಚಾರದ ಪ್ರಕಾರ ಉತ್ತರಕ್ಕೆ ಕೊಡಬೇಕು ಎಂಬ ಸಂದರ್ಭ ಬಂದಾಗ ಸಿದ್ದರಾಮಯ್ಯ ತಮ್ಮ ಹೆಸರನ್ನು ಪ್ರಸ್ತಾಪಿದ್ದಾರೆ ಎಂದರು.
ಜಾತಿ ಆಧಾರದ ಮೇಲೆ ಕಾರ್ಯಾಧ್ಯಕ್ಷ ಹುದ್ದೆ ನಿರ್ಮಾಣ ಇದೆಲ್ಲವೂ ಮಾಧ್ಯಮಗಳ ಸೃಷ್ಟಿ. ಸಿದ್ದರಾಮಯ್ಯ ಕಾರ್ಯಾಧ್ಯಕ್ಷರು ಇರಬೇಕು ಎಂದಿದ್ದಾರೆ ಅಷ್ಟೆ. ನಾಲ್ಕು, ಎರಡು, ಮೂರು ಕಾರ್ಯಾಧ್ಯಕ್ಷರೆನ್ನುವುದೆಲ್ಲ ಮಾಧ್ಯಮಗಳ ಸೃಷ್ಟಿ.ಕಾರ್ಯಾಧ್ಯಕ್ಷರ ಸ್ಥಾನ ಹಂಚಿಕೆ ಆಗಬೇಕು ಎಂದು ಅವರೆಲ್ಲಿಯೂ ಹೇಳಿಲ್ಲ ಎಂದು ತಮ್ಮ ನಾಯಕ ಸಿದ್ದರಾಮಯ್ಯ ಅವರನ್ನು ಎಂ.ಬಿ.ಪಾಟೀಲ್ ಸಮರ್ಥಿಸಿಕೊಂಡರು.
ವಿರೋಧ ಪಕ್ಷದ ಸ್ಥಾನಕ್ಕೆ ಸಿದ್ದ ರಾಮಯ್ಯನವರು ಸಮರ್ಥರಿದ್ದಾರೆ. ಅವರಲ್ಲಿ ಆ ಸ್ಥಾನಕ್ಕೆ ಬೇಕಾದ ಗತ್ತು ಇದೆ. ಬಹುತೇಕ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಪರವಾಗಿದ್ದಾರೆ.ಸರ್ಕಾರವನ್ನ ತರಾಟೆ ತೆಗೆದುಕೊಳ್ಳಲು ಅವರು ಸಮರ್ಥರಿದ್ದಾರೆ. ಆರ್ಥಿಕತೆ ವಿಚಾರದಲ್ಲಿ ಸರ್ಕಾರ ಗಂಭೀರ ಸ್ಥಿತಿಯಲ್ಲಿದೆ. ಇದನ್ನ ಬಯಲು ಮಾಡಲು ಸಿದ್ದರಾಮಯ್ಯ ಸಮರ್ಥರಿದ್ದಾರೆ ಎಂದು ಸಿದ್ದರಾಮಯ್ಯ ಪರ ಎಂ.ಬಿ.ಪಾಟೀಲ್ ಬ್ಯಾಟಿಂಗ್ ಮಾಡಿದರು.ಬಾಂಬರ್ ಆದಿತ್ಯ ಹಿಂದೂ ಎಂದಾಕ್ಷಣ ಗೃಹ ಸಚಿವ ಬೊಮ್ಮಾಯಿ ಆರೋಪಿಯನ್ನು ಮಾನಸಿಕ ಅಸ್ವಸ್ಥ ಎನ್ನುತ್ತಿದ್ದಾರೆ.ಒಂದುವೇಳೆ ಆತ ಅಲ್ಪಸಂಖ್ಯಾತನಾಗಿದ್ದರೆ ಬಿಜೆಪಿ ನಾಯಕರಿಂದ ಇಂತಹ ಸಹಾನುಭೂತಿಯ ಉತ್ತರ ಬರುತ್ತಿರಲಿಲ್ಲ.
ಸಂಪುಟ ವಿಸ್ತರಣೆಯಾಗಿಲ್ಲ.ಸರ್ಕಾರದಲ್ಲಿ ಹಲವು ಗೊಂದಲಗಳಿವೆ.ನಾವಾಗಿಯೇ ಬಿಜೆಪಿ ಸರ್ಕಾರ ಉರುಳಿಸುವುದಿಲ್ಲ. ಸರ್ಕಾರ ಅಸ್ಥಿರಗೊಳಿಸಲು ತಾವು ಹೋಗುವುದಿಲ್ಲ. ಅದಾಗಿ ಸರ್ಕಾರ ಪತನವಾಗುತ್ತದೆ ಎಂದು ಎಂ.ಬಿ.ಪಾಟೀಲ್ ಭವಿಷ್ಯ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
