ಗುಬ್ಬಿ
ಆಧುನಿಕತೆ ಬೆಳೆದಂತೆ ಮರೆಯಾಗುತ್ತಿರುವ ನಮ್ಮ ಗ್ರಾಮೀಣ ಭಾಗದ ಜಾನಪದ ಮತ್ತು ರಂಗ ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವತ್ತ ರಂಗ ಕಲಾವಿದರು ಮತ್ತು ರಂಗಾಸಕ್ತರು ಚಿಂತನೆ ನಡೆಸಬೇಕಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದರು.
ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಜೀವಿತ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾಟಕರತ್ನ ವೀರಣ್ಣ ಅವರ ಕಲಾರಾಧನೆ ವಿಶ್ವ ಮಾನ್ಯತೆ ಪಡೆದುಕೊಂಡಿದೆ. ಅವರ ಹುಟ್ಟೂರಿನಲ್ಲಿ ಆಧುನಿಕ ಸಲಕರಣೆಯ ರಂಗ ಸಜ್ಜಿಕೆ ಎಲ್ಲಾ ಆಯಾಮದ ನಾಟಕ, ನೃತ್ಯ, ಸಂಗೀತ ಪ್ರಯೋಗಕ್ಕೆ ಯೋಗ್ಯವಾಗಿದೆ ಎಂದರು.
ನಗರ ಪ್ರದೇಶದಲ್ಲಿ ಹಲವು ರಂಗ ಮಂದಿರಗಳು ಇದ್ದರೂ ಗ್ರಾಮೀಣ ಭಾಗದಲ್ಲಿ ನಾಟಕೋತ್ಸವ ಅದ್ಬುತವಾಗಿ ಸಾಗಿದೆ. ವಿವಿಧ ರಾಜ್ಯಗಳ ಸಂಸ್ಕತಿಯನ್ನು ಬಿಂಬಿಸುವ ನಾಟಕಗಳು ಸಾರ್ವಜನಿಕರಿಗೆ ಉತ್ತಮ ಸಂದೇಶ ರವಾನಿಸುತ್ತಿದೆ. ಇಂತಹ ರಂಗ ಸಜ್ಜಿಕೆ, ಉತ್ತಮ ಕಲಾವಿದರ ನಡುವೆ ಚಿಗುರೊಡೆಯುವ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯುವ ಶಿಬಿರಗಳು, ತರಬೇತಿಗಳನ್ನು ಬಳಸಿಕೊಳ್ಳಲು ಕರೆ ನೀಡಿದ ಅವರು, ಗುಬ್ಬಿ ವೀರಣ್ಣ ಅವರು ನಾಟಕದ ವಿಶ್ವವಿದ್ಯಾಲಯ ತೆರೆದಿದ್ದರು. ಅವರ ಆಧುನಿಕ ಪ್ರಯೋಗ ಇಂದಿಗೂ ಪ್ರಸ್ತುತವಾಗಿದೆ. ಜೀವಂತ ಪ್ರಾಣಿಗಳನ್ನ ವೇದಿಕೆಯಲ್ಲಿ ತಂದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಸಂಗೀತಮಯವಾದ ಪೌರಾಣಿಕ ನಾಟಕಗಳನ್ನ ಸಂಭಾಷಣೆಯುಕ್ತ ಮಾಡಿದ್ದು ಸಹ ವೀರಣ್ಣನವರ ಕಂಪೆನಿಗೆ ಸಂದಬೇಕಿದೆ ಎಂದರು.
ಗುಬ್ಬಿ ವೀರಣ್ಣ ಟ್ರಸ್ಟ್ ಅಧ್ಯಕ್ಷೆ ಬಿ.ಜಯಶ್ರೀ ಮಾತನಾಡಿ, ನಾಟಕೋತ್ಸವದಲ್ಲಿ ಭಾಗವಹಿಸುವ ತಂಡಗಳು ವಿಶ್ವವ್ಯಾಪಿ ಸಂಚರಿಸಿದ ಪ್ರಸಿದ್ಧ ತಂಡಗಳಾಗಿವೆ. ಅಂತರಾಷ್ಟ್ರೀಯ ಕಲಾವಿದರು ಈ ರಂಗಸಜ್ಜಿಕೆಗೆ ಆಗಮಿಸುತ್ತಿದ್ದಾರೆ. ಆದರೆ ಪ್ರೇಕ್ಷಕರ ಕೊರತೆ ಕಲಾವಿದರಿಗೆ ಬೇಸರ ತರುತ್ತದೆ. ದೃಶ್ಯ ಮಾಧ್ಯಮದಿಂದ ಹೊರತಾದ ರಂಗಕಲೆ ಹೊಸ ಚೈತನ್ಯ ನೀಡುತ್ತದೆ. ಈ ನಿಟ್ಟಿನಲ್ಲಿ ನಾಟಕೋತ್ಸವವನ್ನು ಗ್ರಾಮೀಣ ಭಾಗದಲ್ಲಿ ನಡೆಸಲಾಗುತ್ತಿದೆ ಎಂದ ಅವರು, ಇಂದಿನ ಪೀಳಿಗೆಗೆ ನಮ್ಮ ಸಂಸ್ಕøತಿ ಬಿಂಬಿಸುವ ರಂಗಭೂಮಿಯ ಬಗ್ಗೆ ಪಠ್ಯಕ್ರಮ ಅಳವಡಿಸಲು ಸರ್ಕಾರ ಚಿಂತಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಖ್ಯಾತ ನೃತ್ಯಪಟು ವೈಜಯಂತಿಕಾಶಿ ಅವರ ತಂಡ ಕುಚೂಪುಡಿ ನೃತ್ಯ ಪ್ರದರ್ಶಿಸಿತು.ಪಟ್ಟಣ ಪಂಚಾಯ್ತಿ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಲರಾಮಯ್ಯ, ಟ್ರಸ್ಟಿ ರಾಜೇಶ್‍ಗುಬ್ಬಿ, ರಂಗತಜ್ಞ ಆನಂದರಾಜು ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ