ತುಮಕೂರು[td_smart_list_end]
ಮಾರುದ್ದ ಸೇವಂತಿಗೆ ಹೂವಿಗೆ 100 ರೂ., ಕಿಲೋ ಕನಕಾಂಬರಕ್ಕೆ 1,000 ರೂ., ಬಾಳೆ ಕಂದಿಗೆ 30 ರಿಂದ 50 ರೂ., ಒಂದು ಕಟ್ಟು ಮಾವಿನ ಸೊಪ್ಪಿಗೆ 20 ರೂ., ಸಣ್ಣ ಬೂದುಗುಂಬಳ 100 ರೂ..
ಹೌದು, ಆಯುಧ ಪೂಜೆಗೆ ಬೇಕಾಗುವ ವಸ್ತುಗಳನ್ನು ಖರೀದಿಸಲು ನಗರದ ಹೊರವಲಯದ ಅಂತರಸನಹಳ್ಳಿ ಮಾರುಕಟ್ಟೆಗೆ ಆಗಮಿಸಿದ ಗ್ರಾಹಕರಿಗೆ ಈ ರೀತಿಯ ಬೆಲೆ ಏರಿಕೆಯ ಶಾಕ್ ತಟ್ಟಿತು. ಪೂಜೆಗೆ ಬೇಕಾದ ಅಗತ್ಯವಸ್ತುಗಳ ಬೆಲೆ ಕೇಳಿದ ಗ್ರಾಹಕರಿ ತಬ್ಬಿಬ್ಬಾದರು.
ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬವೂ ಬೆಲೆ ಏರಿಕೆಯ ಶಾಕ್ ಹೊತ್ತು ತಂದಿದೆ. ಹಾಗಾಗಿ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಆಯುಧ ಪೂಜೆಗೆ ಎಲ್ಲರೂ, ಹೂವು, ಹಣ್ಣು, ತೆಂಗಿನಕಾಯಿ, ಬಾಳೆಕಂದು, ಬೂದುಗುಂಬಳ ಸೇರಿದಂತೆ ಇತರೆ ಅಗತ್ಯ ವಸ್ತುಗಳನ್ನು ತಪ್ಪದೇ ಖರೀದಿಸುತ್ತಾರೆ. ಇದೇ ಹಿನ್ನೆಲೆಯಲ್ಲಿ ಈ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ.
ಹಬ್ಬದ ಖರೀದಿಗೆ ಬಂದ ಗ್ರಾಹಕರು ವಸ್ತುಗಳ ಬೆಲೆಯನ್ನು ಕೇಳಿದರೆ ಎಂತವರೂ ಅಬ್ಬಾ ಇಷ್ಟೊಂದು ದರವೇ ಎನ್ನುತ್ತಾರೆ. ಸಣ್ಣ ಬೂದುಗುಂಬಳ 100 ರೂ. ನಿಗದಿಯಾಗಿದ್ದು, ಉಳಿದಂತೆ ಅವುಗಳ ಗಾತ್ರಕ್ಕೆ ತಕ್ಕಂತೆ 300 ರೂ. ವರೆಗೂ ಮಾರಾಟವಾಗುತ್ತಿದೆ. ಹೂವಿನ ಬೆಲೆ ಗಗನಕ್ಕೇರಿದ್ದು, ಕಿಲೋ ಕನಕಾಂಬರಕ್ಕೆ 1,000 ರೂ., ಕಿಲೋ ಮಲ್ಲಿಗೆ 400 ರೂ., ಕಿಲೋ ಗುಲಾಬಿ 200 ರೂ., ಒಂದು ಮಾರು ಸೇವಂತಿಗೆ 100 ರೂ., ಕಿಲೋ ಚೆಂಡು ಹೂ 30 ರಿಂದ 40 ರೂ., ಕಿಲೋ ಮಾರಿಗೋಲ್ಡ್ 250 ರೂ., ಕಿಲೋ ಕಾಕಡ 600 ರೂ., ಕಿಲೋ ಚಾಂದನಿ 50 ರೂ., ಕಿಲೋ ಬಟನ್ಸ್ 50 ರೂ., ಹೂವಿನ ಹಾರವೊಂದಕ್ಕೆ 200ರಿಂದ 1,000 ರೂ., ನಿಂಬೆಹಣ್ಣು 2ಕ್ಕೆ 10 ರೂ. ನೀಡಿ ಕೊಳ್ಳಬೇಕಿದೆ.
ತೆಂಗಿನಕಾಯಿ 20 ರಿಂದ 30 ರೂ.ಗೆ ಮಾರಾಟವಾಗುತ್ತಿದೆ. ಒಂದು ಕಟ್ಟು ಮಾವಿನ ಸೊಪ್ಪು 20 ರೂ.ಗೆ ಹಾಗೂ ಕಿಲೋ ಏಲಕ್ಕಿ ಬಾಳೆ 60 ರಿಂದ 80 ರೂ., ಪಚ್ಚೆ ಬಾಳೆ 20 ರೂ., ಸೇಬು 80 ರೂ., ಮೊಸಂಬಿ 80 ರೂ., ದಾಳಿಂಬೆ 130 ರೂ., ದ್ರಾಕ್ಷಿ 150 ರೂ.ಗೆ ಮಾರಾಟವಾಗುತ್ತಿದೆ. ಇದಲ್ಲದೆ ತರಕಾರಿ, ಸೊಪ್ಪಿನ ಬೆಲೆಯಲ್ಲಿಯೂ ಕೊಂಚ ಏರಿಕೆಯಾಗಿದೆ.
ವಸ್ತುಗಳ ಬೆಲೆ ಏರಿಕೆಯಾಗಿದ್ದರೂ, ಗ್ರಾಹಕರು ಮಾತ್ರ ಮುಗಿಬಿದ್ದು ವಸ್ತುಗಳನ್ನು ಖರೀದಿಸುತ್ತಿದ್ದರೆ. ಮನೆಯಲ್ಲಿರುವ ವಾಹನ ಹಾಗೂ ಇತರ ಆಯುಧಗಳನ್ನು ತೊಳೆದು ಪೂಜೆಗೆ ಸಿದ್ಧಪಡಿಸಿಕೊಳ್ಳುವ ಕಾರ್ಯವೂ ಭರದಿಂದ ಸಾಗಿತ್ತು. ಹೀಗಾಗಿ ನಗರದ ಅಂತರಸನಹಳ್ಳಿ ಮಾರುಕಟ್ಟೆ, ಬಿ.ಎಚ್.ರಸ್ತೆ, ಎಂ.ಜಿ. ರಸ್ತೆ, ಚರ್ಚ್ ವೃತ್ತ, ಅಶೋಕ ರಸ್ತೆ, ಸೋಮೇಶ್ವರ ಪುರಂ ರಸ್ತೆ, ಹಳೆ ಮಾರುಕಟ್ಟೆ, ಸಿರಾ ಗೇಟ್ ಸೇರಿದಂತೆ ನಗರ ಹಲವೆಡೆಗಳಲ್ಲಿ ಅಲ್ಲಲ್ಲಿ ಬಾಳೆ ಕಂದು, ಬೂದುಗುಂಬಳ, ಮಾವಿನ ಸೊಪ್ಪು ಹಾಗೂ ಇತರ ವಸ್ತುಗಳ ಮಾರಾಟ ಹಬ್ಬದ ಮುನ್ನ ದಿನವೆ ಕಳೆಗಟ್ಟುತ್ತಿತ್ತು.
ಒಟ್ಟಾರೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಗಿಜಿಗುಡುವ ಜನಸಂದಣಿಯಿಂದ ಕಾಲಿಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರೊಂದಿಗೆ ಮಹಿಳೆಯರು, ಮಕ್ಕಳು, ಯುವಕ, ಯುವತಿಯರು ಹೊಸ ಬಟ್ಟೆ, ಸಿಹಿ ಖರೀದಿಯಲ್ಲಿ ತೊಡಗಿರುವ ದೃಶ್ಯ ಕಂಡುಬಂತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ