ಅಡಂಬರ, ಅಮಾನವೀಯತೆಗಿಂತ ಅದರ್ಶ ಗೆಲ್ಲಬೇಕು

ಚಿತ್ರದುರ್ಗ :

      ಸಮಾಜದಲ್ಲಿ ಆಡಂಬರ, ಅಮಾನವೀಯತೆ, ಹಿಂಸೆಯನ್ನು ಗೆಲ್ಲಿಸುವುದಕ್ಕಿಂತ ಆದರ್ಶವನ್ನು ಗೆಲ್ಲಿಸಬೇಕು. ಆದರ್ಶ ಜೀವನ ನಡೆಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ರಾಷ್ಟ್ರಾಧ್ಯಕ್ಷರಾದವರು. ಹಾಗಾಗಿ ಆದರ್ಶದ ಒಳಗಡೆ ಅಭಿವೃದ್ಧಿ; ಅಭಿವೃದ್ಧಿಯಲ್ಲಿ ಆದರ್ಶವಿದೆ. ಉತ್ತಮ ನಡವಳಿಕೆಯಿಂದ ಆದರ್ಶ ಬೆಳೆಸಿಕೊಳ್ಳಿ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.

      ನಗರದ ಬಸವಕೇಂದ್ರ ಶ್ರೀಮುರುಘಾಮಠ, ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯ ಮತ್ತು ಎಸ್.ಜೆ.ಎಂ. ಐಟಿಐ ಕಾಲೇಜು ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಶರಣಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹಬ್ಬಗಳು, ಆದರ್ಶ ಮತ್ತು ಅಭಿವೃದ್ಧಿ ವಿಷಯ ಕುರಿತು ಶ್ರೀಗಳು ಮಾತನಾಡಿದರು.

      ಹಣದ ಜೊತೆಯಲ್ಲಿ ಬಹಳಷ್ಟು ಜನ ಹೋಗುತ್ತಾರೆ. ಆದರೆ ಅನುಭಾವದ ಕಡೆಗೆ ಹೋಗಿ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಜೀವನದಲ್ಲಿ ಚಲನಶೀಲತೆ ಮತ್ತು ಕ್ರಿಯಾಶೀಲತೆಗಳನ್ನು ರೂಢಿಸಿಕೊಂಡು ಶರಣರ, ಸಂತರ, ಅನುಭಾವಿಗಳ ಜೊತೆ ಹೋದರೆ ಬದುಕು ಅನಂದಮಯವಾಗಿರುತ್ತದೆ ಎಂದರು

      ಜಾತಿ ಪ್ರಧಾನವಾದ ನಮ್ಮ ದೇಶದಲ್ಲಿ ಸಾವಿರಾರು ಜಾತಿ, ಜನಾಂಗ, ಸಂಸ್ಕøತಿ, ಕಲೆ, ಸಾಹಿತ್ಯವಿದೆ. ಸಮಾಜದಲ್ಲಿ ನೋವುಗಳನ್ನು ಬಿಟ್ಟುಹೋಗುವವರು, ಹಿಂಸೆಕೊಟ್ಟು ನೋವು ಕೊಡುವವರಿದ್ದಾರಿದ್ದಾರೆ. ಅಂಥವರಿಗೆ ಅರಿವಿನ ಕೊರತೆಯಿಂದ ಜೀವನದ ಮತ್ತು ಜೀವದ ಬೆಲೆಯೇ ತಿಳಿದಿರುವುದಿಲ್ಲ ಎಂದರು.

     ಆಸ್ತಿ ಅಂತಸ್ತುಗಳು ವ್ಯಕ್ತಿಯ ನಿದ್ದೆ-ಬುದ್ಧಿಗೆ ಕಂಟಕವಾಗಿವೆ. ಅಣೆಕಟ್ಟುಗಳನ್ನು ನಿರ್ಮಿಸಿದ ಸರ್ ಎಂ.ವಿಶ್ವೇಶ್ವರಯ್ಯ, ಕೆರೆ-ಕಟ್ಟೆಗಳನ್ನು ನಿರ್ಮಿಸಿದ ಭರಮಣ್ಣ ನಾಯಕರಂಥವರು ನಾಡಿನ ಅಭಿವೃದ್ಧಿಗಾಗಿ ಕೊಡುಗೆಗಳನ್ನು ನೀಡಿ ಇತಿಹಾಸವಾಗಿದ್ದಾರೆ. ಅದರಂತೆ ವಚನಗಳು ಹೇಳಲಿಕ್ಕೆ ವಿವರಿಸಲಿಕ್ಕಾಗಿ ಅಲ್ಲ; ಅವು ನಮ್ಮ ಬದುಕಿನಲ್ಲಿ ಆಚರಿಸಲಿಕ್ಕಾಗಿ ಇವೆ ಎಂದು ತಿಳಿಸಿದರು.

     ಡಾ.ಹೆಚ್.ಎಸ್.ನವೀನ್‍ಕುಮಾರ್ ಮಾತನಾಡಿ, ಹಬ್ಬಗಳು ಮಾನವಕುಲದ ಸಾಂಸ್ಕøತಿಕ ಪ್ರತಿನಿಧಿಗಳು. ಕ್ರಿಯಾಶೀಲನಾಗಿರಲು ಹಬ್ಬಗಳು ಬೇಕಾಗಿವೆ. ಪ್ರತಿಯೊಂದು ಧರ್ಮದಲ್ಲಿ ಇರುವಂತಹ ಹಬ್ಬಗಳಿಗೆ ಕೇವಲ ಧಾರ್ಮಿಕ ಹಿನ್ನೆಲೆ ಅಷ್ಟೇ ಅಲ್ಲ ಸಾಮಾಜಿಕ ಸಾಂಸ್ಕøತಿಕ ಹಿನ್ನೆಲೆಯೂ ಇದೆ ಎಂದರು

      ದುಡಿದ ಮೈಮನಗಳಿಗೆ ಸಂಭ್ರಮ ನೀಡುವುದೇ ಹಬ್ಬಗಳ ವೈಶಿಷ್ಟ್ಯ. ಆದರ್ಶ ವ್ಯಕ್ತಿಗಳ ಸ್ಮರಣೆ, ಋತುಮಾನಗಳನ್ನು ಆಧರಿಸಿ ರಾಷ್ಟ್ರೀಯ ಹಬ್ಬಗಳನ್ನು ನಾವು ಕಾಣುತ್ತೇವೆ. ಹಬ್ಬಗಳು ಮಾನವನಿಗೆ ಸಂದೇಶಗಳನ್ನು ಸಾರುತ್ತವೆ. ಹಬ್ಬಗಳಲ್ಲಿರುವ ಒಳ್ಳೆಯತನವನ್ನು ಆಯ್ದುಕೊಂಡು ಅನುಸರಿಸಬೇಕು ಆಗ ಮಾತ್ರ ಧನಾತ್ಮಕವಾಗುತ್ತದೆ ಎಂದರು

      ಬಸವಣ್ಣನವರು ಸತ್ಕಾರ್ಯ ಮಾಡಿದ ದಿನವೇ ಹಬ್ಬ ಎಂದಿದ್ದಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಅವೈಜ್ಞಾನಿಕ ಆಚರಣೆಗಳು ಬೆಳೆದುಬಂದಿವೆ. ಅನರ್ಥಕ ಆಚರಣೆಗಳನ್ನು ಬಿಡಬೇಕು. ಹಬ್ಬಗಳು ಕಟ್ಟಿಕೊಡುವ ಆದರ್ಶ ಎಂದರೆ ಸಂಬಂಧಗಳು. ಸಂಬಂಧಗಳನ್ನು ಹಬ್ಬಗಳು ಬೆಸೆಯುವ ಕಾರ್ಯವನ್ನು ಮಾಡುತ್ತವೆ. ಇಂದು ಸಂಬಂಧಗಳು ಮೌಲ್ಯರಹಿತ ಮತ್ತು ತೂಕರಹಿತವಾಗುತ್ತಿವೆ. ಅಂಥ ಸಂಬಂಧಗಳನ್ನು ಗಟ್ಟಿಗೊಳಿಸುವ ಶಕ್ತಿ ಹಬ್ಬಗಳಿಗಿದೆ. ಹಬ್ಬಗಳ ಆಚರಣೆ ದೂರದ ದೇವರನ್ನು ನಂಬಿಸಲು ಅಲ್ಲ. ನಾವು, ನಮ್ಮವರು ಎಂಬ ಸಂಬಂಧವನ್ನು ಬೆಸಯಲು ಇವೆ ಎಂದರು.

      ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಆರ್. ತಿಪ್ಪೇಸ್ವಾಮಿ, ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಶ್ರೀಮಠದಿಂದ ಗೌರವ ಸ್ವೀಕರಿಸಿರುವುದು ನನ್ನ ಜೀವನ ಅವಿಸ್ಮರಣೀಯ ಕ್ಷಣವಾಗಿದೆ. ಮಾನವ ಜನ್ಮ ಈ ಭೂಮಿ ಮೇಲೆ ಶ್ರೇಷ್ಠವಾದ ಜನ್ಮ. ಸಾರ್ಥಕ ಜೀವನಕ್ಕೆ ಗುರುವಿನ ಸಂಗ ಬೇಕು ಎಂದರು.

    ಇದಕ್ಕು ಮುನ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎನ್.ವಿಶ್ವನಾಥ್, ಐಟಿಐ ಕಾಲೇಜಿನ ಪ್ರಾಚಾರ್ಯ ಬೋರೇಶ್ ಮುಂತಾದವರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link