ಕೊರಟಗೆರೆ
ಸರಕಾರಿ ಮತ್ತು ಖಾಸಗಿ ಬಸ್ಸಿನ ಮಾರ್ಗದ ಪರವಾನಗಿ ಹಾಗೂ ವಾಹನ ಚಾಲಕರ ದಾಖಲೆಯೆ ಸಾರಿಗೆ ಇಲಾಖೆಯ ಬಳಿ ಲಭ್ಯವಿಲ್ಲ. ತುಮಕೂರಿನಿಂದ ಪ್ರತಿದಿನ ಕೊರಟಗೆರೆ-ಮಧುಗಿರಿ-ಪಾವಗಡ ಪಟ್ಟಣಕ್ಕೆ ಸಂಚರಿಸುವ ಸಾರಿಗೆ ಮಾರ್ಗದ ಪರಿಶೀಲನೆ ನಡೆಸಿ ಹಲವಾರು ವರ್ಷಗಳೆ ಕಳೆದಿವೆ ಎಂಬ ಮಾಹಿತಿ ಖಾಸಗಿ ಬಸ್ಸುಗಳ ಮಾಲೀಕರ ಸಭೆಯಲ್ಲಿಯೆ ಬಹಿರಂಗವಾದ ಘಟನೆ ನಡೆದಿದೆ.
ಕೊರಟಗೆರೆ ಪಟ್ಟಣದ ತಾಪಂ ಸಭಾಂಗಣದಲ್ಲಿ ಪೋಲೀಸ್, ಸಾರಿಗೆ, ಕಂದಾಯ ಕೆ-ಶಿಪ್ ಮತ್ತು ಪಿಡ್ಲೂö್ಯಡಿ ಇಲಾಖೆ ವತಿಯಿಂದ ಅಪಘಾತ ತಡೆಗಟ್ಟುವ ಉದ್ದೇಶದಿಂದ ಮಂಗಳವಾರ ಏರ್ಪಡಿಸಲಾಗಿದ್ದ ಖಾಸಗಿ ಬಸ್ಸುಗಳ ಮಾಲೀಕರ ಸಭೆಯಲ್ಲಿ, ಖಾಸಗಿ ಬಸ್ಸುಗಳ ಲೋಪದೋಷ ಹಾಗೂ ನಿಯಮ ಉಲ್ಲಂಘನೆಯ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳ ಮುಂದೆ ಈ ಅಂಸವು ಬೆಳಕಿಗೆ ಬಂದಿದೆ.
ಪಾವಗಡ, ಮಧುಗಿರಿ ಮತ್ತು ಗೌರಿಬಿದನೂರು, ಭೈರೇನಹಳ್ಳಿ, ಹೊಳವನಹಳ್ಳಿ, ಕೊರಟಗೆರೆಯ ಮೂಲಕ ತುಮಕೂರಿಗೆ ಸಂಚರಿಸುವ ಖಾಸಗಿ ಮತ್ತು ಸರಕಾರಿ ಬಸ್ಸುಗಳ ಸಂಖ್ಯೆ, ನಿಲುಗಡೆ ಸ್ಥಳ ಮತ್ತು ಚಲಿಸುವ ಮಾರ್ಗ ನಿಗದಿ ಮಾಡಿರುವ ಸಮಯದ ಮಾಹಿತಿಯೆ ಸಾರಿಗೆ ಇಲಾಖೆ ಬಳಿ ಲಭ್ಯವಿಲ್ಲ. 1988-89ನೆ ಸಾಲಿನಲ್ಲಿ ಸಾರಿಗೆ ಇಲಾಖೆ ನಿಗದಿ ಮಾಡಿರುವ ಹಳೆಯ ಮಾರ್ಗದಲ್ಲಿಯೆ ಇಂದಿದೂ ಬಸ್ಸುಗಳ ಸಂಚಾರ ನಡೆಯುತ್ತಿದೆ ಎಂಬ ಅಂಶವೂ ಸಭೆಯಲ್ಲಿ ತಿಳಿದು ಬಂದಿದೆ.
ಸರಕಾರಿ ಬಸ್ಸಿನ ಚಾಲಕರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಸಾರಿಗೆ ನಿಯಮ ಉಲ್ಲಂಘನೆ ಮಾಡುತ್ತಾರೆ. ಖಾಸಗಿ ಬಸ್ಸಿನ ಚಾಲಕರು ಮಾಡುವ ಸಣ್ಣ ತಪ್ಪಿಗೆ ಪೋಲೀಸರು ದೊಡ್ಡ ಮೊತ್ತದ ದಂಡವನ್ನು ವಿಧಿಸುತ್ತಾರೆ. ಆದರೆ ಸರಕಾರಿ ಬಸ್ಸಿನಲ್ಲಿ 70 ಜನ ಪ್ರಯಾಣಿಕರನ್ನು ತುಂಬಿಕೊಂಡು ಹೋದರೆ ಪ್ರಶ್ನೆ ಮಾಡಲು ಸಾರಿಗೆ ಮತ್ತು ಪೋಲೀಸ್ ಇಲಾಖೆ ಹಿಂದೇಟು ಹಾಕುತ್ತಾರೆ ಎಂದು ಖಾಸಗಿ ಬಸ್ಸಿನ ಮಾಲೀಕರು ಆರೋಪ ಮಾಡಿದರು.
ಕೊರಟಗೆರೆ ಪಟ್ಟಣದಿಂದ ತುಮಕೂರಿಗೆ ಪ್ರತಿದಿನ ಮುಂಜಾನೆ ವ್ಯಾಸಂಗಕ್ಕಾಗಿ ತೆರಳಲು ತುಮಕೂರು ಕೆಎಸ್‌ಆರ್‌ಟಿಸಿ ಘಟಕದಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವಿತರಣೆ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ಮಾಡಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಹಣ ಪಾವತಿಸಿ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಕಿಡಿಕಾರಿದರು.
ಅವೈಜ್ಞಾನಿಕ ಕೊರಟಗೆರೆ ಬೈಪಾಸ್ ರಸ್ತೆಯ ತಿರುವುಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಸಿದ್ದರಬೆಟ್ಟದ ತಿರುವು, ಸಿದ್ದೇಶ್ವರ ಕಲ್ಯಾಣ ಮಂಟಪ, ಹೊಳವನಹಳ್ಳಿ ಕ್ರಾಸ್, ಮಹಾಲಿಂಗಪ್ಪ ತೋಟ ಮತ್ತು ಪ್ರಥಮದರ್ಜೆ ಕಾಲೇಜು ಹತ್ತಿರ ಪೋಲೀಸ್ ಇಲಾಖೆಯಿಂದ ಅಪಘಾತದ ಸ್ಥಳ ಗುರುತಿಸಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಸೂಚನೆ ನೀಡಿದ್ದರೂ, ಸಹ ಕೆ-ಶಿಪ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಮಧುಗಿರಿ ಡಿವೈಎಸ್ಪಿ ಧರಣೀಶ್, ಕೊರಟಗೆರೆ ಸಿಪಿಐ ನದಾಫ್, ಪಿಎಸ್‌ಐ ಮಂಜುನಾಥ, ನೆಲಮಂಗಲ ಸಾರಿಗೆ ಇಲಾಖೆಯ ಎಆರ್‌ಟಿಓ ವಿವೇಕಾನಂದ, ಕಂದಾಯ, ಕೆ-ಶಿಪ್, ಪಿಡ್ಲೂö್ಯಡಿ ಮತ್ತು ಖಾಸಗಿ ಬಸ್ಸಿನ ನೂರಾರು ಜನ ಮಾಲೀಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
