ಸುಲಿಗೆ ಮಾಡುತ್ತಿರುವ ಖಾಸಗಿ ತರಬೇತಿ ಕೇಂದ್ರಗಳು..!

ದಾವಣಗೆರೆ :

    ಸ್ಪರ್ಧಾತ್ಮಕ ಪರೀಕ್ಷೆ ಹೆಸರಿನಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ತರಬೇತಿ ಕೇಂದ್ರಗಳು ಹಣ ಗಳಿಕೆಯ ವ್ಯವಹಾರದ ಕೇಂದ್ರಗಳಾಗಿ ವಿದ್ಯಾರ್ಥಿಗಳ ಸುಲಿಗೆ ನಡೆಸುತ್ತಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿಷಾದ ವ್ಯಕ್ತಪಡಿಸಿದರು.

    ಸಮೀಪದ ತೋಳಹುಣಸೆಯ ದಾವಣಗೆರೆ ವಿವಿಯ ಶಿವಗಂಗೋತ್ರಿ ಆವರಣದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಶುಕ್ರವಾರ ಆರಂಭಿಸಿರುವ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ತರಬೇತಿ ಕೇಂದ್ರಗಳಿಂದ ಆಗುತ್ತಿರುವ ಸುಲಿಗೆಯನ್ನು ತಪ್ಪಿಸಿ ಬಡವರು, ದುರ್ಬಲರಿಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉನ್ನತ ಹುದ್ದೆ ಲಭಿಸುವಂತೆ ಮಾಡಬೇಕೆಂಬ ಉದ್ದೇಶದಿಂದ ದಾವಣಗೆರೆ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

    ಹಣ, ಅಧಿಕಾರ ಸಂಪಾದನೆಗಿಂತ ಜ್ಞಾನ ಮುಖ್ಯವಾಗಿದೆ. ಜ್ಞಾನದ ಬೆನ್ನು ಹತ್ತಿದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದ್ದು, ಯಶಸ್ಸಿನ ಉನ್ನತಿಯನ್ನು ತಲುಪಲು ಸಾಧ್ಯವಾಗಲಿದೆ ಎಂದ ಅವರು, ಜ್ಞಾನವೆಂದರೆ ಪರೀಕ್ಷೆಗಾಗಿ ಓದುವ ಅಭ್ಯಾಸವಲ್ಲ. ಬದುಕನ್ನು ರೂಪಿಸುವ ಅನುಭವ ಮತ್ತು ಅರಿವು. ಈ ಜ್ಞಾನಕ್ಕೆ ಮಿಗಿಲಾದುದು ಮತ್ತೊಂದಿಲ್ಲ. ಜ್ಞಾನ ಒಂದಿದ್ದರೆ ಜಗತ್ತಿನಲ್ಲಿ ಏನೆಲ್ಲವನ್ನೂ ಸಾಧನೆ ಮಾಡಬಹುದು. ಈ ಸಾಧನೆಗೆ ಛಲ, ಪರಿಶ್ರಮ, ನಿರ್ದಿಷ್ಟ ಗುರಿ ಅನಿವಾರ್ಯ ಎಂದು ಹೇಳಿದರು.

    ಸ್ಪರ್ಧಾತ್ಮಕ ಪರೀಕ್ಷೆಗೆ ಪುಸ್ತಕ ಜ್ಞಾನದ ಜೊತೆಗೆ ಸಾಮಾನ್ಯ ಜ್ಞಾನವೂ ಅನಿವಾರ್ಯ. ಓದಿದ್ದನ್ನು ಅರ್ಥ ಮಾಡಿಕೊಂಡು ಬರೆಯುವ ಕೌಶಲ್ಯ ರೂಢಿಸಿಕೊಳ್ಳಬೇಕಾಗಿದೆ. ಯಾವುದೇ ವಿಚಾರವನ್ನು ಸರಳವಾಗಿ, ಸ್ಪಷ್ಟವಾಗಿ ವಿವರಿಸುವ, ವಿಶ್ಲೇಷಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳಬೇಕು. ಬರವಣಿಗೆ ಕೌಶಲ್ಯ ಕರಗತ ಮಾಡಿಕೊಂಡರೆ ಯಾವುದೇ ಪರೀಕ್ಷೆಯನ್ನೂ ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.

     ಸ್ಪರ್ಧಾತ್ಮಕ ಪರೀಕ್ಷೆಗೆ ಯೋಜನಾಬದ್ಧ ಅಧ್ಯಯನ ಅನಿವಾರ್ಯವಾಗಿದೆ. ನಿಗದಿತ ಕಾಲದಲ್ಲಿ ನಿರ್ದಿಷ್ಟ ಸಾಧನೆ ಮಾಡುವ ಗುರಿ ಇಟ್ಟುಕೊಳ್ಳಬೇಕು. ಯಾವುದೇ ಅಡ್ಡಿ, ಆತಂಕ, ನಿಂದನೆ ಎದುರಾದರೂ ಹಮ್ಮು, ಬಿಗುಮಾನ ಬಿಟ್ಟು ಕಲಿಯುವ ಆಸಕ್ತಿಯತ್ತ, ಗುರಿ ಸಾಧನೆಯತ್ತ ಗಮನ ಇರಬೇಕು. ಗೆಲ್ಲುವ ತುಡಿತದಿಂದ ಅಧ್ಯಯನ ಮಾಡಬೇಕು. ಹಾಗಾದಾಗ ಮಾತ್ರ ಯಶಸ್ಸಿನ ಗುರಿ ತಲುಪಲು ಸಾಧ್ಯ ಎಂದರು.

       ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೆ, ಹೀಗೆ ಎನ್ನುವ ಕಟ್ಟು ಕತೆಗಳನ್ನು ಬಿಟ್ಟು ಶ್ರದ್ಧೆಯಿಂದ ಅಭ್ಯಾಸ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಸಾಧಕರಿಂದ ಸ್ಪೂರ್ತಿಯನ್ನೂ ಪಡೆಯಬೇಕು ಎಂದು ಸಲಹೆ ನೀಡಿದರು.ಪರೀಕ್ಷಾ ಪೂರ್ವಸಿದ್ಧತೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಪರೀಕ್ಷೆಗೆ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಪರೀಕ್ಷೆಗೆ ಅಗತ್ಯವಿರುವ ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನವೂ ಮುಖ್ಯ. ಪ್ರತಿದಿನವೂ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪದವಿಯ ಸಾಧನೆಗಿಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳು ಮುಖ್ಯ. ಸಕಾಲಿಕ ತರಬೇತಿ, ಮಾರ್ಗದರ್ಶನದೊಂದಿಗೆ ಪರೀಕ್ಷೆ ಎದುರಿಸಲು ಸಜ್ಜಾಗಬೇಕು ಎಂದರು.

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ. ಹಲಸೆ ಮಾತನಾಡಿ, ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಅದಕ್ಕಾಗಿ ತರಬೇತಿ ಕೇಂದ್ರ ಆರಂಭಿಸಬೇಕು ಎಂಬ ಎರಡು ವರ್ಷಗಳ ಹಿಂದಿನ ಕನಸು ಇದೀಗ ನನಸಾಗಿದೆ. ಇಲ್ಲಿಯ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

     ವಿಶ್ವವಿದ್ಯಾನಿಲಯದ ಬೋಧಕ ಸಿಬ್ಬಂದಿ ಹಲವು ವಿಷಯಗಳಲ್ಲಿ ಪರಿಣತಿ ಪಡೆದಿದ್ದಾರೆ. ಅವರ ಮಾರ್ಗದರ್ಶನ, ತರಬೇತಿಯೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮತ್ತು ಸ್ಪರ್ಧೆ ಎದುರಿಸಲು ಸಹಕಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕುಲಸಚಿವ ಪ್ರೊ.ಬಸವರಾಜ ಬಣಕಾರ, ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತರಬೇತಿ ಕೇಂದ್ರ ಆರಂಭಿಸಲಾಗಿದೆ . ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಯಶಸ್ಸು ಸಾಧಿಸಿದರೆ ತಮ್ಮ ಪ್ರಯತ್ನ ಸಾರ್ಥಕವಾಗಲಿದೆ ಎಂದು ನುಡಿದರು.

     ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಪ್ರೊ.ಗೋಪಾಲ ಎಂ.ಅಡವಿರಾವ್, ಸಿಂಡಿಕೇಟ್ ಸದಸ್ಯರಾದ ಜಯಪ್ರಕಾಶ್ ಕೊಂಡಜ್ಜಿ, ಶಶಿಧರ್ ಬಿ.ಎನ್. ಪ್ರೊ.ಯು.ಎಸ್. ಮಹಾಬಳೇಶ್ವರ, ಡಾ.ಈಶ್ವರಪ್ಪ, ಡಾ.ರವಿ ಪಾಟೀಲ, ಡಾ. ಪ್ರಸನ್ನಕುಮಾರ್, ಡಾ.ಶಿವಕುಮಾರ ಕಣಸೋಗಿ, ಸಾಹಿತಿ ಪ್ರೊ.ರಾಘವೇಂದ್ರ ಪಾಟೀಲ ಉಪಸ್ಥಿತರಿದ್ದರು. ಡಾ. ಡಿ.ಜಿ. ಪ್ರಕಾಶ್ ಸ್ವಾಗತಿಸಿದರು. ಡಾ. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಪಾಳೇದ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap