” ಚಿಂಚೋಳಿಯಲ್ಲಿ ಯಾರೂ ಸತ್ತೋಗಿಲ್ಲ ಆದರೂ ಉಪಚುನಾವಣೆ ನಡೆಯುತ್ತಿದೆ”- ಪ್ರಿಯಾಂಕ್ ಖರ್ಗೆ.

ಚಿಂಚೋಳಿ

       ಚಿಂಚೋಳಿಯಲ್ಲಿ ಯಾರೂ ಸತ್ತು ಹೋಗಿಲ್ಲ. ಆದರೂ ಉಪಚುನಾವಣೆ ನಡೆಯುತ್ತಿದೆ. ಕಾರಣ ಇಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕಿದ್ದಾರೆ ಎಂದು ಉಪಚುನಾವಣೆಯ ಅನಿವಾರ್ಯತೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಭಿನ್ನವಾಗಿ ವ್ಯಾಖ್ಯಾನಿಸಿದರು.

       ಮಿರಿಯಾಣದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಅವರು ಮಾತನಾಡಿದರು. ಆಮಿಷಕ್ಕಾಗಿ ಮತ ಮಾರಾಟ ಮಾಡಿ ಜಾಧವ ರಾಜೀನಾಮೆ ನೀಡಿದ್ದರಿಂದ, ಉಪಚುನಾವಣೆ ನಡೆಯಬೇಕಾದ ಅನಿವಾರ್ಯತೆ ಉಂಟಾಗಿದೆ. ಪ್ರಜಾತಂತ್ರ ವ್ಯವಸ್ಥೆಯನ್ನೇ ಹಣದಿಂದ ಹಣಕ್ಕಾಗಿ ಹಣಕೋಸ್ಕರ ಎಂದು ಪ್ರಜಾತಂತ್ರದ ನಿಜವಾದ ಅರ್ಥವನ್ನು ಬೇರೆ ಮಾಡಿದ್ದಾರೆ.

        ಐದು ವರ್ಷಕ್ಕಾಗಿ ಮತದಾರರಿಂದ ಆರಿಸಿ ಹೋದ ಜಾಧವ ಕೆಲವೇ ದಿನಗಳಲ್ಲೇ ರಾಜೀನಾಮೆ ನೀಡಿ ಈಗ ಮಗನನ್ನು ನಿಲ್ಲಿಸಿ ಮತ ಕೇಳಲು ಬರುತ್ತಿದ್ದಾರಲ್ಲ ನಾಚಿಕೆಯಿಲ್ಲದವರು ಎನ್ನಬೇಕಾ ಅಥವಾ ಧಿಮಾಕು ಎನ್ನಬೇಕಾ ಎಂದು ಟೀಕಿಸಿದರು.

         ಕಳೆದ ಐದು ವರ್ಷಗಳಿಂದ ರೈತರ, ಬಡವರ, ಕೂಲಿ ಕಾರ್ಮಿಕರ ವಿರೋಧಿ ಆಡಳಿತ ನಡೆಸಿದ ಮೋದಿ ಈಗ ಸೈನಿಕರ ಹೆಸರಲ್ಲು ಮತ ಕೇಳುತ್ತಿದ್ದಾರೆ. ನಮ್ಮ ಸರಕಾರ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ತಲಾ 72 ಸಾವಿರ ಕೋಟಿ ಹಾಗೂ 48 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ನೀವೆ ಹೇಳಿ ಯಾವುದು ಜನರಪರ ಸರಕಾರ. ಬಿಜೆಪಿಯವರ ಸುಳ್ಳು ಮಾತುಗಳನ್ನು ನಂಬದೇ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಮೋದಿ ಸರಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

      ಒಳ್ಳೆ ಚೌಕಿದಾರ್ ಬೇಕಾಗಿದ್ದರೆ ನೇಪಾಳದಿಂದ ತರಿಸೋಣ ಮೋದಿ ಯಾಕೆ ದೇಶಕ್ಕೆ ಬೇಕು. ಇಲ್ಲಿ ಚಿಂಚೋಳಿಯಲ್ಲೂ ಜಾಧವ ಚೌಕಿದಾರ ಅಂತೆ. ಮೋದಿಯ ಕಣ್ಣೆದುರೆ ಸಾವಿರಾರು ಕೋಟಿ ದೋಚಿ ನೀರವ್ ಮೋದಿ ಮತ್ತಿತರು ವಿದೇಶಕ್ಕೆ ಪರಾರಿಯಾದರೂ ಮೋದಿ ಏನೂ ಮಾಡಲಿಲ್ಲ. ಹಾಗೆ ಈ ಹಿಂದೆ ಜನರು ಹಾಕಿದ ಮತವನ್ನೇ ಉಳಿಸಿಕೊಳ್ಳಲಾಗದ ಜಾಧವ ಸಂಸದ ಹಾಗೂ ಅವರ ಮಗ ಶಾಸಕರಾಗಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

     ಚಿಂಚೋಳಿಯಲ್ಲಿ ಉಮೇಶ್ ಜಾಧವ ನೀಚತನದ ರಾಜಕಾರಣ ಪ್ರಾರಂಭಿಸಿದ್ದಾರೆ. ಲಿಂಗಾಯತರು ಓಟೇ ಹಾಕಿಲ್ಲ ಎಂದು ಹೇಳುತ್ತಿದ್ದ ಅವರು, ಈಗ ವೀರಶೈವ ಲಿಂಗಾಯತ ಸಮುದಾಯದ ಮತ ಭಿಕ್ಷೆಗೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಟೀಕಿಸಿದರು.

     ಸರ್ವಜ್ಞ ವಚನ ಹೇಳುವ ಮೂಲಕ ಮಾತಿನಲ್ಲೇ ಕುಟುಕಿದ ರಾಠೋಡ್, ಜಾಧವ ಒಬ್ಬ ನಾಚಿಕೆಯಿಲ್ಲದ ಮನುಷ್ಯ. ಚಿಂಚೋಳಿಗೆ ಉಪ ಚುನಾವಣೆ ಯಾಕೆ ಹೇರಿದರು ಎನ್ನುವುದು ನಿಮಗೆಲ್ಲ ತಿಳಿದಿದೆ. ಜಾಧವ್ ಅವರು ಬಿಜೆಪಿ ಸೇರಿರುವ ಉದ್ದೇಶ ಅರಿತು ಅವರನ್ನು ಸೋಲಿಸಿ ಎಂದು ಮನವಿ ಮಾಡಿದರು.

      ವೇದಿಕೆಯ ಮೇಲೆ ಡಿಸಿಎಂ ಡಾ ಜಿ ಪರಮೇಶ್ವರ, ಶಾಸಕರಾದ ಅಜಯ್ ಸಿಂಗ್, ನಾರಾಯಣರಾವ್, ಸೋಮಶೇಖರ್ ಸೇರಿದಂತೆ ಮತ್ತಿತರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap