ಚಿತ್ರದುರ್ಗ
ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿ, ಬಳಿಕ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಪಡೆಯುವಲ್ಲಿ ತೊಂದರೆ ಎದುರಿಸುತ್ತಿರುವ ಫಲಾನುಭವಿಗಳ ಸಮಸ್ಯೆ ಪರಿಹರಿಸಲು ಫೆ. 15 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜನಸಂಪರ್ಕ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಸದ ಬಿ.ಎನ್. ಚಂದ್ರಪ್ಪ ಅವರು ಪ್ರಕಟಿಸಿದರು.
ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಮಂಜೂರಾತಿ ಕುರಿತು ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ ಪಡೆದು, ಬದುಕು ಕಟ್ಟಿಕೊಳ್ಳುವ ಕನಸು ಕಾಣುವ ಬಡ ಫಲಾನುಭವಿಗಳಿಗೆ ಬ್ಯಾಂಕ್‍ಗಳು ಇಲ್ಲ ಸಲ್ಲದ ಸಬೂಬು ಹೇಳಿ, ಅವರನ್ನು ಅಲೆದಾಡಿಸಿ, ಬಳಿಕ ಸಾಲ ಸೌಲಭ್ಯ ಮಂಜೂರು ಮಾಡದೆ ಸತಾಯಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಬಡ ಜನರ ಬಗ್ಗೆ ಕಾಳಜಿ ತೋರದ ಬ್ಯಾಂಕ್ ಅಧಿಕಾರಿಗಳ ಧೋರಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಬ್ಯಾಂಕ್ ಅಧಿಕಾರಿಗಳಿಗೆ ಕೇವಲ ಪತ್ರ ವ್ಯವಹಾರ ಅಥವಾ ನೋಟಿಸ್ ನೀಡುವುದರಿಂದ ಸಮಸ್ಯೆ ಪರಿಹರಿಸಲು ಸಾದ್ಯವಿದ್ದಂತೆ ಕಾಣುತ್ತಿಲ್ಲ.
ಇದಕ್ಕೆ ಜನಸಂಪರ್ಕ ಸಭೆ ನಡೆಸುವುದೇ ಪರಿಹಾರವಾಗಿದೆ. ಹೀಗಾಗಿ ಬಡ ಜನರಿಗೆ ಸಾಲ ಸೌಲಭ್ಯ ಕಲ್ಪಿಸದೆ ಸತಾಯಿಸುತ್ತಿರುವ ಬ್ಯಾಂಕ್‍ಗಳ ಅಧಿಕಾರಿಗಳು ಹಾಗೂ ತೊಂದರೆ ಎದುರಿಸುತ್ತಿರುವ ಫಲಾನುಭವಿಗಳೊಂದಿಗೆ ನೇರಾ ನೇರ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳುವುದೊಂದೇ ಮಾರ್ಗ. ಅದಕ್ಕಾಗಿ ಫೆ. 15 ರಂದು ಎಲ್ಲ ಬ್ಯಾಂಕ್‍ಗಳ ವ್ಯವಸ್ಥಾಪಕರು, ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಆಯ್ಕೆಯಾಗಿ, ಇದುವರೆಗೂ ಸಾಲ ಮಂಜೂರು ಆಗದಿರುವ ಫಲಾನುಭವಿಗಳೊಂದಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು. ಇದೇ ಸಭೆಯಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಲಾಗುವುದು ಎಂದು ಸಂಸದ ಬಿ.ಎನ್. ಚಂದ್ರಪ್ಪ ಅವರು ಹೇಳಿದರು.
ಸಾಲ ಸೌಲಭ್ಯ ಮಂಜೂರು ಮಾಡದೆ, ಏಕಾಏಕಿ ಅರ್ಜಿ ತಿರಸ್ಕರಿಸಿರುವ ಬ್ಯಾಂಕ್ ಅಧಿಕಾರಿಯೊಂದಿಗೆ ಸಭೆಯ ನಡುವೆಯೇ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡ ಸಂಸದರು, ಕಾರ್ಯದ ಒತ್ತಡವಿದೆ ಎಂಬ ನೆಪ ಹೇಳುವಂತಿಲ್ಲ. ಯಾವುದೇ ಫಲಾನುಭವಿಯ ಅರ್ಜಿ ತಿರಸ್ಕರಿಸುವ ಮೊದಲು, ಅವರಿಗೆ ನೋಟಿಸ್ ನೀಡಿ ಉತ್ತರ ಪಡೆಯಬೇಕು. ಏಕಾಏಕಿ ಅರ್ಜಿ ತಿರಸ್ಕರಿಸಲು ಈ ದೇಶದಲ್ಲಿ ರಾಷ್ಟ್ರಪತಿಗಳಿಗೆ ಮಾತ್ರ ಅಧಿಕಾರವಿದೆ.
ಈ ರೀತಿ ಆದರೆ ಬಡಜನರು ಆರ್ಥಿಕವಾಗಿ ಮುಂದೆ ಬರುವುದು ಹೇಗೆ. ಬಡವರಿಗೆ ಸರ್ಕಾರ ವಿವಿಧ ಯೋಜನೆಗಳಡಿ ಸವಲತ್ತು ನೀಡುತ್ತಿದೆ. ಆದರೆ ಬ್ಯಾಂಕ್ ಅಧಿಕಾರಿಗಳ ಕೆಟ್ಟ ಧೋರಣೆಯಿಂದ, ಬಡವರು ಆರ್ಥಿಕ ಸೌಲಭ್ಯದಿಂದ ವಂಚಿತರಾಗುತ್ತಿದದಾರೆ. ಬ್ಯಾಂಕ್ ಅಧಿಕಾರಿಗಳು ಮೊದಲು ಫಲಾನುಭವಿಗಳ ಅರ್ಜಿಗೆ ಗೌರವ ನೀಡುವುದನ್ನು ಕಲಿಯಿರಿ. ಬ್ಯಾಂಕ್‍ನಿಂದ ಸಾಲ ಪಡೆದು ಉನ್ನತಿ ಸಾಧಿಸಿ, ಸುಭದ್ರ ಬದುಕು ಕಟ್ಟಿಕೊಳ್ಳುವ ಹಲವು ಕನಸುಗಳನ್ನು ಬಡವರು ಕಾಣುತ್ತಿರುತ್ತಾರೆ.
ಸರ್ಕಾರ ಮಂಜೂರಾತಿ ನೀಡಿದರೂ, ಇಲ್ಲದ ಸಬೂಬು, ಕಾನೂನು ಹೇಳಿ, ಸಾಲ ಮಂಜೂರು ಮಾಡದೆ, ಅವರ ಕನಸುಗಳಿಗೆ ತಣ್ಣೀರೆರಚುತ್ತಿದ್ದೀರಿ. ದೂರವಾಣಿಯಲ್ಲಿ ನಾನೇನು ಭಾಷಣ ಮಾಡುತ್ತಿಲ್ಲ. ಬಡವರ ಬಗ್ಗೆ ಮೊದಲು ಕಾಳಜಿ ತೋರುವುದನ್ನು ಕಲಿಯಿರಿ ಎಂದು ತರಾಟೆಗೆ ತೆಗೆದುಕೊಂಡ ಸಂಸದರು, ಪ.ಜಾತಿ, ಪ.ಪಂಗಡದ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ನೀಡುವಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಸಿದರು.
ಅರ್ಜಿದಾರರಿಗೆ ಸಾಲ ಮಂಜೂರು ಮಾಡಲು, ಬ್ಯಾಂಕ್‍ನಲ್ಲಿ ಹೆಚ್ಚಿನ ಮೊತ್ತದ ಠೇವಣಿ ಇಡುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎನ್ನುವ ದೂರು ವ್ಯಾಪಕವಾಗಿ ಕೇಳಿಬರುತ್ತಿದ್ದು, ಸಾಲ ಮಂಜೂರು ಮಾಡಲು ಠೇವಣಿ ಮಾಡಿಸುವುದು ಕಡ್ಡಾಯವೇ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಪ್ರಶಸ್ನಿಸಿದರು, ಇದಕ್ಕೆ ಪ್ರತಿಕ್ರಿಯಿಸಿ ಅಧಿಕಾರಿ, ಠೇವಣಿ ಮಾಡಿಸುವುದು ಕಡ್ಡಾಯವಲ್ಲ ಎಂದು ಉತ್ತರಿಸಿದರು.
ಕೈಗಾರಿಕೆ ಇಲಾಖೆ ಅಧಿಕಾರಿಗಳು ಮಾತನಾಡಿ, ಪ್ರಸಕ್ತ ಸಾಲಿಗೆ ಮುಖ್ಯಮಂತ್ರಿಗಳ ಉದ್ಯೋಗ ಸೃಜನೆ ಕಾರ್ಯಕ್ರಮದಡಿ 137 ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡುವ ಗುರಿ ಇದ್ದು, ಇದಕ್ಕಾಗಿ ವಿವಿಧ ಬ್ಯಾಂಕ್‍ಗಳಿಗೆ ಒಟ್ಟು 244 ಅರ್ಜಿಗಳನ್ನು ಕಳುಹಿಸಿಕೊಡಲಾಗಿದೆ. ಆದರೆ ಈ ಪೈಕಿ ಕೇವಲ 40 ಜನರಿಗೆ ಮಾತ್ರ ಸಾಲ ಮಂಜೂರಾಗಿದೆ. ಪ್ರಮುಖವಾಗಿ ಪ್ರಗತಿ ಕೃಷ್ಣ ಬ್ಯಾಂಕ್‍ಗೆ 110 ಅರ್ಜಿ ಕಳುಹಿಸಿಕೊಟ್ಟಿದ್ದು, ಕೇವಲ 9 ಜನರಿಗೆ ಸಾಲ ಮಂಜೂರಾಗಿದೆ.
ಕೆನರಾಬ್ಯಾಂಕ್ 47 ರಲ್ಲಿ 11, ಎಸ್‍ಬಿಐ 20 ರಲ್ಲಿ 06, ವಿಜಯಬ್ಯಾಂಕ್ 23 ರಲ್ಲಿ 05, ಕರ್ನಾಟಕ ಬ್ಯಾಂಕ್ 20 ಅರ್ಜಿಗಳಲ್ಲಿ ಕೇವಲ ಇಬ್ಬರಿಗೆ ಸಾಲ ಮಂಜೂರು ಮಾಡಿವೆ ಎಂದರು.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಅವರು, ಪ.ಜಾತಿ, ಪ.ಪಂಗಡ ಸೇರಿದಂತೆ ಎಲ್ಲ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ನೇರವಾಗಿ ಆಯಾ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 1. 44 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗಿದ್ದು, ಈ ಪೈಕಿ ಈವರೆಗೂ 93 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನ ಜಮಾ ಆಗಿದೆ. ಉಳಿದ 51 ಸಾವಿರ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿರುವ ಕಾರಣ, ವೇತನ ಜಮಾ ಆಗಿಲ್ಲ.
ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡುವಂತೆ ಆಯಾ ಬ್ಯಾಂಕ್‍ಗಳಿಗೆ ಆಧಾರ್ ಕಾರ್ಡ್‍ನ ಜೆರಾಕ್ಸ್ ಪ್ರತಿಗಳನ್ನು ನೀಡಲಾಗಿದ್ದೂ, ಬ್ಯಾಂಕ್‍ಗಳು ಆಧಾರ್ ಜೋಡಣೆ ಮಾಡದೆ ಸತಾಯಿಸುತ್ತಿವೆ. ಬ್ಯಾಂಕ್ ಅಧಿಕಾರಿಗಳು, ಜಿ.ಪಂ. ಸಿಇಒ ಅವರೊಂದಿಗೆ ಸಭೆ ನಡೆಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಆಧಾರ್ ಜೊಡಣೆ ಮಾಡದೆ ವಿಳಂಬ ಮಾಡುತ್ತಿರುವ ಬ್ಯಾಂಕ್‍ಗಳ ವಿವರವನ್ನು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಲ್ಲಿಸಬೇಕು. ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಕೂಡಲೆ, ಈ ಕುರಿತು ಕ್ರಮ ಕೈಗೊಂಡು ಸಂಸದರಿಗೆ ಮಾಹಿತಿ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನ ಪ್ರಾದೇಶಿಕ ಅಧಿಕಾರಿ ಮಂಜುನಾಥ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್‍ಗಳ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








