ಬೀದಿ ನಾಟಕದ ಮೂಲಕ ಸಮಸ್ಯೆ ಅನಾವರಣ

ದಾವಣಗೆರೆ :

     ಕಳೆದ 16 ತಿಂಗಳುಗಳಿಂದ ಬಾಕಿ ಶಿಷ್ಯ ವೇತನಕ್ಕೆ ಆಗ್ರಹಿಸಿ ಜೆಜೆಎಂ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 9ನೇ ದಿನಕ್ಕೆ ಕಾಲಿಟ್ಟಿದ್ದು, ಮಂಗಳವಾರ ಸಂಜೆ ಬೀದಿ ನಾಟಕದ ಮೂಲಕ ಶಿಷ್ಯ ವೇತನ ಬಾರದೆ ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು.

    ನಗರದ ಜಯದೇವ ವೃತ್ತದಲ್ಲಿ ಶಿಷ್ಯ ವೇತನಕ್ಕಾಗಿ ಮುಷ್ಕರ ನಡೆಸುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು, ಶಿಷ್ಯ ವೇತನ ಬಿಡುಗಡೆಯಾದ ಪರಿಣಾಮ ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಬೀದಿ ನಾಟಕದ ಮೂಲಕ ಅನಾವರಣ ಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ವಿದ್ಯಾರ್ಥಿಗಳು, ನಾವು ಸಲ್ಲಿಸಿರುವ ಮನವಿಗೆ ಹಲವು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಶ್ವಾಸನೆ ನೀಡುವಂತೆಯೇ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸಹ ಸೋಮವಾರದ ಒಳಗೆ ಶಿಷ್ಯ ವೇತನ ಕೊಡಿಸುವ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸುವುದಾಗಿ ಹೇಳಿ ಹೋಗಿದ್ದರು.

      ಈಗ ಸೋಮವಾರ ಕಳೆದು ಮಂಗಳವಾರ ಸಹ ಕಳೆಯುತ್ತಾ ಬಂದಿದೆ. ಆದರೆ, ಉಸ್ತುವಾರಿ ಸಚಿವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜೆಜೆಎಂ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿಯಲ್ಲಿ 230 ಜನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದೇವೆ. ನಾವೆಲ್ಲರೂ ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದೇವೆ. ಆದರೆ, ಕಳೆದ 16 ತಿಂಗಳುಗಳಿಂದ ನಮಗೆ ಶಿಷ್ಯ ವೇತನ ಬಾರದ ಕಾರಣ ವೈದ್ಯಕೀಯ ಶಿಕ್ಷಣವನ್ನೇ ಮುಂದುವರೆಸುವುದು ಕಷ್ಟಸಾಧ್ಯವಾಗಿದೆ ಎಂದು ಅಳಲು ತೋಡಿಕೊಂಡರು.

      ಜಿಲ್ಲಾ ಕೋವಿಡ್-19 ಆಸ್ಪತ್ರೆ ಎಂಬುದಾಗಿ ಗುರುತಿಸಿರುವ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕೇವಲ 15 ಜನರು ಮಾತ್ರ ಖಾಯಂ ವೈದ್ಯರಿದ್ದಾರೆ. ಇನ್ನುಳಿದಂತೆ ವೈದ್ಯಕೀಯ ಪಿಜಿ ವಿದ್ಯಾರ್ಥಿಗಳೇ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಶೇ.90 ರಷ್ಟು ಕೆಲಸ ಮಾಡುತ್ತಿದ್ದಾರೆ. ಕೋವಿಡ್‍ನಿಂದ ಬಳಲುತ್ತಿರುವವರು ಗಣನೀಯ ಸಂಖ್ಯೆಯಲ್ಲಿ ಕಡಿಮೆಯಾಗಲು ನಮ್ಮ ಪಾತ್ರವೂ ಬಹಳಷ್ಟಿದೆ. ನಾವೂ ಕೊರೊನಾ ಸೈನಿಕರಂತೆ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿದ್ದೇವೆ. ಆದರೆ, ರಾಜ್ಯ ಸರ್ಕಾರ ಮಾತ್ರ ನಮ್ಮ ಮೇಲೆ ಹೂಮಳೆ ಸುರಿಸಿ, ಚಪ್ಪಾಳೆ ತಟ್ಟಿ ಮೊಸಳೆ ಕಣ್ಣೀರು ಸುರಿಸುತ್ತಿದೆಯೇ ವಿನಃ ನಮ್ಮ ಮೂಲ ಸಮಸ್ಯೆಯನ್ನು ಅರಿಯುತ್ತಿಲ್ಲ ಎಂದು ಕಿಡಿಕಾರಿದರು.

     ಕೊರೊನಾ ವಾರಿಯರ್ಸ್‍ಗಳಿಗೆ ನಿಜವಾಗಿಯೂ ಗೌರವ ಸಲ್ಲಿಸುವ ಮನಸ್ಸು ರಾಜ್ಯ ಸರ್ಕಾರಕ್ಕೆ ಇದ್ದರೆ, ಕಳೆದ 16 ತಿಂಗಳುಗಳಿಂದ ಬಾಕಿ ಇರುವ ನಮ್ಮ ಶಿಷ್ಯ ವೇತನವನ್ನು ಬಿಡುಗಡೆ ಮಾಡುವ ಮೂಲಕ ವೈದ್ಯಕೀಯ ಶಿಕ್ಷಣ ಮುಂದುವರೆಸಲು ಅನುಕೂಲ ಮಾಡಿಕೊಡಲಿ ಎಂದು ಮನವಿ ಮಾಡಿದರು.ಪ್ರತಿಭಟನೆಯ ನೇತೃತ್ವವನ್ನು ಡಾ.ರಾಹುಲ್, ಡಾ.ಹಿತಾ, ಡಾ.ಪ್ರೀತಮ್, ಡಾ.ಹರೀಶ್, ಡಾ.ನಿಧಿ, ಡಾ.ಸುಧಾಕರ್ ಮತ್ತಿತರರು ವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap