ಡಿಸಿ ಕಚೇರಿ ಬಳಿ ಉಪನ್ಯಾಸಕರ ಪ್ರತಿಭಟನೆ

ಚಿತ್ರದುರ್ಗ:

       ವೇತನ ತಾರತಮ್ಯ ಸರಿಪಡಿಸಿ ಎರಡನೆ ಹೆಚ್ಚುವರಿ ವೇತನ ಬಡ್ತಿ ಮಂಜೂರು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಗುರುವಾರ ಧರಣಿ ನಡೆಸಲಾಯಿತು.

      2016 ಏಪ್ರಿಲ್‍ನಲ್ಲಿ ದ್ವಿತೀಯ ಪಿ.ಯು.ಸಿ.ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕರಿಸಿ ಹದಿನೆಂಟು ದಿನಗಳ ಹೋರಾಟ ನಡೆಸಿದಾಗ ವಿವಿಧ ಹಂತಗಳಲ್ಲಿ ಸಭೆ ನಡೆಸಿದ ಸರ್ಕಾರ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆವಿಗೂ ನಮ್ಮ ಯಾವುದೆ ಬೇಡಿಕೆಗಳು ಈಡೇರಿಲ್ಲದ ಕಾರಣ ಮೊದಲ ಹಂತದ ಪ್ರತಿಭಟನೆಗೆ ಇಳಿದಿದ್ದೇವೆ ಎಂದು ಜಿಲ್ಲಾ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ್ ಸರ್ಕಾರಕ್ಕೆ ಮತ್ತೊಮ್ಮೆ ಗಡುವು ನೀಡಿದರು.

      1-8-2008 ರ ನಂತರ ಆಯ್ಕೆಯಾದ ಉಪನ್ಯಾಸಕರಿಗೆ ನೀಡುತ್ತಿದ್ದ ಐದು ನೂರು ರೂ.ಗಳ ಎಕ್ಸ್‍ಗ್ರೇಷಿಯಾವನ್ನು ಕೂಡಲೆ ಮೂಲವೇತನದಲ್ಲಿ ವಿಲೀನಗೊಳಿಸಿ ಈಗಾಗಲೆ ನೀಡಿರುವ ಎಕ್ಸ್‍ಗ್ರೇಷಿಯಾವನ್ನು ಮರುಪಾವತಿಸುವಂತೆ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು.

    ಪ್ರೌಢಶಾಲೆಯಿಂದ ಪದನ್ನೋತಿ ಹೊಂದಿ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ 10, 15, 20, 25 ವರ್ಷಗಳ ಕಾಲಮಿತಿ ವೇತನ ಬಡ್ತಿಯನ್ನು ಮಂಜೂರು ಮಾಡಿ ಆದೇಶ ಹೊರಡಿಸಬೇಕು.ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಕಾರ್ಯಭಾರ ಕುರಿತು ಉನ್ನತ ಮಟ್ಟದ ಪರಿಷತ್ ಸಮಿತಿಯನ್ನು ರಚಿಸಿ ಅಲ್ಲಿಯವರೆಗೆ ಪ್ರತಿ ಉಪನ್ಯಾಸಕರುಗಳಿಗೆ ವಾರದಲ್ಲಿ 16 ಗಂಟೆಗಳ ಬೋಧನಾ ಅವಧಿಯನ್ನು ಮುಂದುವರಿಸುವುದು.

     ಪದವಿಪೂರ್ವ ಕಾಲೇಜುಗಳಲ್ಲಿ ಎನ್.ಸಿ.ಇ.ಆರ್.ಟಿ. ನಿಯಮಾವಳಿಯಂತೆ ಪ್ರತಿ ತರಗತಿಗೆ ವಿದ್ಯಾರ್ಥಿಗಳ ಗರಿಷ್ಟ ಸಂಖ್ಯೆಯನ್ನು 80 ರಿಂದ 40 ಕ್ಕೆ ನಿಗಧಿಪಡಿಸಿ ಆದೇಶ ಹೊರಡಿಸಬೇಕು.ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೆಟ್, ಸ್ಲೆಟ್, ಪಿ.ಹೆಚ್.ಡಿ. ವಿದ್ಯಾರ್ಹತೆ ಹೊಂದಿರುವ ಉಪನ್ಯಾಸಕರುಗಳಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು.

    ಪದವಿಪೂರ್ವ ಕಾಲೇಜು ಜಿಲ್ಲಾ ಉಪನಿರ್ದೇಶಕರ ಹಂತದಲ್ಲಿ ಉಪನ್ಯಾಸಕರ 10, 15, 20, 25 ವರ್ಷಗಳ ಕಾಲಮಿತಿ ವೇತನ ಬಡ್ತಿಯನ್ನು ಮಂಜೂರು ಮಾಡುವಂತೆ ಆದೇಶಿಸುವುದು.ಅನುದಾನಿತ ಪದವಿಪೂರ್ವ ಕಾಲೇಜು ಉಪನ್ಯಾಸಕರುಗಳ ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಸಬೇಕು. ಪದವಿಪೂರ್ವ ಕಾಲೇಜುಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಮಂತ್ರಾಲಯ ಭಾರತ ಸರ್ಕಾರದ ನಿರ್ದೇಶನದಂತೆ ಸಿ.ಬಿ.ಎಸ್.ಸಿ.ಇವರು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಗಣಿತ ವಿಷಯಕ್ಕೆ ಕನಿಷ್ಟ 20 ಅಂಕಗಳ ಪ್ರಾಯೋಗಿಕ/ ಆಂತರಿಕ ಅಂಕಗಳನ್ನು ಜಾರಿಗೆ ತರಲು ಸೂಚಿಸಿರುವುದರಿಂದ ನಮ್ಮ ರಾಜ್ಯದಲ್ಲಿಯೂ ಗಣಿತ ವಿಷಯಕ್ಕೆ ಪ್ರಾಯೋಗಿಕ/ಆಂತರಿಕ ಅಂಕಗಳನ್ನು ಅಳವಡಿಸಬೇಕು.

      2013 ರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ನೇಮಕಗೊಂಡ ಮತ್ತು ಬಿ.ಇ.ಡಿ.ಪದವಿ ಹೊಂದಿರದ ಉಪನ್ಯಾಸಕರು ವೇತನ ರಹಿತವಾಗಿ ಎರಡು ವರ್ಷಗಳ ಕಾಲ ಬಿ.ಇ.ಡಿ.ಪದವಿ ಪೂರೈಸಿ ಇಲಾಖೆಗೆ ಮರಳಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರು ಬಿ.ಇ.ಡಿ.ಪದವಿ ಪಡೆಯಲು ತೆರಳಿದ ಎರಡು ವರ್ಷಗಳ ಅವಧಿಯನ್ನು ವೇತನ ಸಹಿತ ರಜೆ ಎಂದು ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವುದು ಸೇರಿದಂತೆ ವೃತ್ತಿ ಶಿಕ್ಷಣ ಇಲಾಖೆಯಿಂದ ವಿಲೀನವಾಗಿರುವ ಉಪನ್ಯಾಸಕರಿಗೆ ಬಿ.ಇ.ಡಿ.ಪದವಿಯಿಂದ ವಿನಾಯಿತಿ ನೀಡಿ ಅವರ ಖಾಯಂ ಪೂರ್ವ ಸೇವಾ ಅವಧಿಯನ್ನು ಘೋಷಿಸುವಂತೆ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ್ ಸರ್ಕಾರವನ್ನು ಆಗ್ರಹಿಸಿದರು.

      ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕೆ.ನಾಗಣ್ಣ, ವಸಂತಕುಮಾರ್, ಕಾಂತರಾಜ್, ಚಂದ್ರಶೇಖರ್, ಡಾ.ತಿಮ್ಮಣ್ಣ, ರಮೇಶ್‍ರೆಡ್ಡಿ, ಕರಿಯಣ್ಣ, ಕೆ.ತಿಪ್ಪೇಸ್ವಾಮಿ, ಲಕ್ಷ್ಮಿ, ಶಾಂತಕುಮಾರಿ, ಶ್ರೀನಿವಾಸ್, ಸಿ.ಮಂಜುನಾಥ್, ಚನ್ನಬಸಪ್ಪ ಸೇರಿದಂತೆ ಪದವಿಪೂರ್ವ ಕಾಲೇಜುಗಳ ನೂರಾರು ಉಪನ್ಯಾಸಕರುಗಳು ಧರಣಿಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link