ಚಿಕ್ಕನಾಯಕನಹಳ್ಳಿ

ಇವರದು 40ವರ್ಷಗಳ ಕೃಷಿ ಜೀವನ. ಅತಿ ಕಡಿಮೆ ನೀರು, ಸಾವಯವ ಗೊಬ್ಬರ, ಶ್ರಮ, ಬಂಡವಾಳದ ಜೊತೆಗೆ ಸಾವಯವ ಕೃಷಿ ತತ್ವವನ್ನು ಅಳವಡಿಸಿಕೊಂಡು ಮಿಶ್ರಬೆಳೆ ಬೆಳೆದು ಹೀಗೂ ತೋಟವನ್ನು ಅಭಿವೃದ್ಧಿಪಡಿಸಬಹುದು ಎಂದು ತೋರಿಸಿಕೊಟ್ಟಿರುವ ಶಿವನಂಜಯ್ಯ ಬಾಳೆಕಾಯಿರವರ ಯಶೋಗಾಥೆ ಈ ಸ್ಟೋರಿ.
ಮಳೆ ಇಲ್ಲ, ಬೆಳೆ ಇಲ್ಲ ಕೃಷಿ ಮಾಡುವುದು ಸುಲಭವೇ ಎನ್ನುವ ರೈತರಿಗೆ 4 ದಶಕಗಳಿಂದ ಸಾವಯವ/ಸಹಜ ಕೃಷಿ ಮೂಲಕ ಮಿಶ್ರಬೆಳೆ ಬೆಳೆದು ಕೃಷಿಯಲ್ಲಿ ಲಾಭವಿದೆ ಎಂದು ತೋರಿಸಿಕೊಟ್ಟಿದ್ದಾರೆ ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ಶಿವನಂಜಯ್ಯ ಬಾಳೆಕಾಯಿರವರು.
ಹೌದು, ಶಿವನಂಜಯ್ಯರವರ ತೋಟದೊಳಗೆ ಭೇಟಿ ನೀಡಿದಾಗ ನಮಗೆ ಮಲೆನಾಡಿನಲ್ಲಿ ಸಿಗುವಂತಹ ತಂಪಾದ ವಾತಾವರಣದ ಅನುಭವವಾಯಿತು, ತೋಟದಲ್ಲಿ ಬೆಳೆದಿರುವ ತೆಂಗು, ಅಡಿಕೆ, ಹಣ್ಣಿನ ಬೆಳೆ, ಕುಂಬಳ, ಅವರೆ, ನುಗ್ಗೆ, ಗೆಣಸಿನ ಗೆಡ್ಡೆ, ಮೂಲಂಗಿ, ಸಪೋಟ, ಸೀಬೆ, ಗ್ಲಿರಿಸೀಡಿಯಾ, ತೇಗ, ರೋಸ್‍ಉಡ್, ಮಾವು, ನೆಲ್ಲಿ, ಬಿದಿರು, ಹಲಸು ಸೇರಿದಂತೆ ಹೂವಿನ ಗಿಡಗಳು, ಮಳೆನೀರು ಹಿಡಿಯಲು ಇಂಗುಗುಂಡಿ ಹಾಗೂ ಇಲ್ಲಿನ ವಾತಾವರಣ ನೋಡಿ ಸುಂದರ ನಿಸರ್ಗ ತಾಣವೆಂಬಂತೆ ಮೂಡಿಬಂದಿತು.
ಉಳುಮೆಯನ್ನೇ ಮಾಡದ, ಕಳೆ ನಾಶಮಾಡದ, ವಿಷ ರಾಸಾಯನಿಕಗಳ ವಾಸನೆ ನೋಡದ ತೋಟ ಇವರದು. ಸಾವಯವ ಗೊಬ್ಬರದಲ್ಲಿ ಕಡಿಮೆ ನೀರಿನಲ್ಲಿ ಸದಾ ಹಸಿರಾಗಿ ಮೂಡಿಬಂದಿರುವ ಶಿವನಂಜಯ್ಯರವರ ತೋಟದ ತುಂಬಾ ನಳನಳಿಸುವ ಬಳ್ಳಿ ಗೆಣಸಿನ ಹೊದಿಕೆ, ಗ್ಲಿರಿಸೀಡಯಾದ ಹಸಿರು ಬೇಲಿ, ಬೆಳೆಗಳ ನಡುವೆ ಉದಿಬದು ಇದೆ. ತೋಟದಲ್ಲಿ ದೊರೆಯುವ ಗರಿ, ಎಡಮಟ್ಟೆ, ಕೂರಂಬಳೆಗಳನ್ನು ಮರಗಳ ಬುಡಗಳಿಗೆ ಹೊದಿಕೆಯಾಗಿ ಬಳಸಿದ್ದಾರೆ. ಈ ಯೋಜನೆಗಳನ್ನೆಲ್ಲಾ ಶಿವನಂಜಯ್ಯರವರು ಜಪಾನಿನ ದಿ.ಮಸನೋಬು ಪುಕುವೋಕ ಎಂಬ ಕೃಷಿ ವಿಜ್ಞಾನಿಯ ಬೇಸಾಯ ಪದ್ದತಿಯ ಬಗ್ಗೆ ತಿಳಿದು ಅನುಸರಿಸಿದ್ದಾರೆ.
ಸಾವಯವ ಕೃಷಿಯನ್ನೇ ನಂಬಿ ಕೃಷಿಗೆ ಇಳಿದ ಶಿವನಂಜಯ್ಯ ಬಾಳೆಕಾಯಿ ತಾನು ಅಭಿವೃದ್ಧಿಯಾಗುವ ಜೊತೆಗೆ ಇತರ ರೈತರಿಗೂ ಸಾವಯವ ಕೃಷಿಯ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಸಾವಯವ ಕೃಷಿಯಲ್ಲಿ ರೈತ ತನಗೆ ಬೇಕಾದ ಬೀಜ, ಗೊಬ್ಬರ, ಉಳುಮೆ ಸಲಕರಣೆ, ಸಸ್ಯಸಂರಕ್ಷಣಾ ವಿಧಾನಗಳಿಗೆ ಬೇಕಾದ ಔಷಧೋಪಚಾರ ಹೀಗೆ ಎಲ್ಲವನ್ನು ತಾನೇ ಉತ್ಪಾದಿಸಿಕೊಳ್ಳುತ್ತಾನೆ. ಇಲ್ಲಿ ಮಿಶ್ರ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ಅವರ ತೋಟವನ್ನು ವೀಕ್ಷಣೆ ಮಾಡಿದಾಗ ದೊರಕಿದ ಅನುಭವ ಇದಾಗಿದೆ.
ಸಾವಯವ ಗೊಬ್ಬರದಲ್ಲಿ ಕೊಟ್ಟಿಗೆಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಬುಟ್ಟಿಗೊಬ್ಬರ, ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರದ ವಿಧಾನವಿದೆ. ಅವರು ರಚಿಸಿರುವ ಸಹಜ ಕೃಷಿ ಪುಸ್ತಕದಲ್ಲಿ ಈ ಗೊಬ್ಬರವನ್ನು ತಯಾರು ಮಾಡುವುದು ಹೇಗೆ, ಎಷ್ಟನ್ನು ಕೃಷಿಗೆ ಸಿಂಪಡಿಸಬೇಕು ಎಂಬ ಪೂರ್ಣ ವಿವರವನ್ನು ರೈತರಿಗೆ ಉಪಯುಕ್ತವಾಗಲಿ ಎಂಬ ಮಾಹಿತಿಯನ್ನೂ ಸಹ ನೀಡಲಾಗಿದೆ.
ಸಹಜ ಕೃಷಿ : ಸಹಜ ಕೃಷಿಯಲ್ಲಿ ಬಹುಪಾಲು ಕೆಲಸಗಳು ನಿಸರ್ಗಕ್ಕೆ ನೀಡಲಾಗಿದೆ. ಕಡಿಮೆ ಶ್ರಮದ ಮೂಲಕ ಕೃಷಿ ಮಾಡಲಾಗುತ್ತದೆ, ಪ್ರಕೃತಿಯಲ್ಲಿರುವ ಎಲ್ಲಾ ವಸ್ತು ಮತ್ತು ಜೀವಿಗಳ ನಡುವೆ ಇರುವ ಸಾವಯವ ಸಂಬಂಧವನ್ನು ಗಣನೆಗೆ ಪಡೆಯಲಾಗುತ್ತದೆ. ಇದು ಪ್ರಕೃತಿಯ ಸಹಜ ನಡೆಯೊಂದಿಗೆ ಬೇಸಾಯ ಹೊಂದಿರುತ್ತದೆ.
ಸಹಜ ಕೃಷಿಯಲ್ಲಿ ಕೃಷಿ ಭೂಮಿಗೆ ಉಳುಮೆ ಹಾಗೂ ಹೊರಗೆ ತಯಾರಿಸಿದ ಯಾವುದೇ ಸಾವಯವ ಗೊಬ್ಬರದ ಬಳಕೆ ಅಗತ್ಯವಿರುವುದಿಲ್ಲ. ತಾನಾಗಿಯೇ ಕೃಷಿಭೂಮಿಯಲ್ಲಿ ಬೆಳೆಯುವ ಕಳೆಗಳ ನಾಶ ಬೇಡವಾಗಿರುತ್ತದೆ. ಜೊತೆಗೆ ಯಾವುದೇ ಬಗೆಯ ವಿಷ ರಾಸಾಯನಿಕಗಳು ಇಲ್ಲಿ ಅವಶ್ಯವಿರುವುದಿಲ್ಲ ಅಂದರೆ, ಕೃಷಿ ಭೂಮಿಯ ಉಳುಮೆಯನ್ನು ನಿಲ್ಲಿಸಿದಾಗ ಅದರಲ್ಲಿ ಬೆಳೆಯುವ ಕಳೆ ಗಿಡಗಳು ತಮ್ಮ ಜೀವತಾವಧಿ ಮುಗಿಸಿದಾಗ ಅವುಗಳ ಬೇರು ಮಣ್ಣಿನ ಆಳದಲ್ಲಿ ಕೊಳೆಯುತ್ತವೆ. ಇದರಿಂದಾಗಿ ಮಣ್ಣಿನಲ್ಲಿ ವಿಫಲವಾದ ರಂಧ್ರಗಳಾಗಿ ಮಣ್ಣಿನ ಜೀವಿಗಳಾದ ಎರೆಹುಳು, ಗೆದ್ದಲು, ಇರುವೆ, ಸೂಕ್ಷ್ಮಾಣು ಜೀವಿಗಳು ವೃದ್ಧಿಸಿ ಮಣ್ಣಿನ ಸಹಜ ಉಳುಮೆ ಮಾಡುತ್ತವೆ ಎಂದು ಶಿವನಂಜಯ್ಯಬಾಳೆಕಾಯಿರವರು ಕೃಷಿ ವಿಜ್ಞಾನಿ ಪುಕುವೋಕ ತಿಳಿಸಿರುವ ಕೃಷಿ ತತ್ವವನ್ನು ತಮ್ಮ ಇದು ಸಹಜ ಕೃಷಿ ಪುಸ್ತಕದಲ್ಲಿ ತಿಳಿಸಿದ್ದಾರೆ. ಜೊತೆಗೆ ತಮ್ಮ ಜಮೀನಿನಲ್ಲೂ ಅಳವಡಿಸಿಕೊಂಡು ಯಶಸ್ವಿಯಾಗಿ ಇತರರಿಗೆ ಮಾದರಿಯಾಗಿದ್ದಾರೆ.
ಶಿವನಂಜಯ್ಯರವರ ಕೃಷಿ ಪದಾರ್ಪಣೆ : ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವನಂಜಯ್ಯರವರು ಮೂಲತಃ ಹಳ್ಳಿಯವರಾಗಿದ್ದರಿಂದ ಕೃಷಿಯ ಬಗ್ಗೆ ಒಲವಿತ್ತು. ವಿಜ್ಞಾನ, ತತ್ವಶಾಸ್ತ್ರ ಕಲಿತಿದ್ದ ಅವರು ಕೃಷಿಯ ಬಗ್ಗೆಯೂ ಹೆಚ್ಚು ತಿಳಿಯಲು ಬೆಂಗಳೂರಿನ ಕೃಷಿ ಕಾಲೇಜಿನ ಲೈಬ್ರರಿ ರಾಮನ್ ಇನ್‍ಸ್ಟಿಟ್ಯೂಟ್‍ನಲ್ಲಿ ಹೇರಳವಾಗಿರುವ ಕೃಷಿ ಸಾಹಿತ್ಯ ತೆಂಗು ಅಭಿವೃದ್ಧಿ ಮಂಡಳಿಯ ಪ್ರಕಟಣೆಗಳನ್ನು ಒಂದು ವರ್ಷಗಳ ಕಾಲ ಅಧ್ಯಯನ ಮಾಡಿದರು. ಜೊತೆಗೆ ಕೃಷಿ ಕಾಲೇಜು, ಲಾಲ್‍ಬಾಗ್‍ನಲ್ಲಿರುವ ಕೃಷಿ ತಜ್ಞರೊಡನೆ ಚರ್ಚೆ, ಸಂವಾದದ ಬಗ್ಗೆ ಮಾರ್ಗದರ್ಶನ ಪಡೆದುಕೊಂಡರು. ಈ ಎಲ್ಲಾ ಸಿದ್ದತೆ ಮಾಡಿಕೊಂಡು ಆಧುನಿಕ ಕೃಷಿ ಮಾಡಲು ಕೃಷಿಗೆ ಪಾದಾರ್ಪಣೆ ಮಾಡಿದರು.
ಹಲವರು ತೋಟಕ್ಕೆ ಭೇಟಿ : ರಾಸಾಯನಿಕ ಬಳಸದೆ ತೋಟದ ತುಂಬ ವಿವಿಧ ಬೆಳೆಗಳನ್ನು ಬೆಳೆದಿರುವ ಶಿವನಂಜಯ್ಯರವರ ತೋಟಕ್ಕೆ ಈಗಾಗಲೇ ರೈತರು, ಸಾಹಿತಿಗಳು, ವಿಜ್ಞಾನಿಗಳು, ವ್ಯಾಪಾರಸ್ಥರು ಆಗಮಿಸಿ ಹಲವು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಶಿವನಂಜಯ್ಯರವರು ಸಹ ತೋಟದಲ್ಲಿ ಸಭೆ ಏರ್ಪಡಿಸಿ ಕೃಷಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಶೂನ್ಯ ಕೃಷಿ ಬಳಗ, ಸಿರಿಸಮೃದ್ದಿ ಬಳಗದ ಸ್ಥಾಪಕ ಸಂಚಾಲಕರಾಗಿ ರೈತರ ಸಂಘಟನೆ ಮಾಡಿ ಸಾವಯವದ ಮಹತ್ವ ಅರಿವು ಮೂಡುವಂತೆ ಹಲವು ದಶಕಗಳಿಂದ ಕೆಲಸ ಮಾಡಿದ್ದಾರೆ.








