ತುಮಕೂರು
ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶಾದಾದ್ಯಂತ ಜನಸಾಮಾನ್ಯರು ಬಹುಮುಖ ಸಮಸ್ಯೆಗಳಿಂದ ಜರ್ಜರಿತರಾಗುತ್ತಿದ್ದಾರೆ. ಜನಸಾಮಾನ್ಯರು ಎದುರಿಸುತ್ತಿರುವ ಇಂತಹ ಸಮಸ್ಯೆಗಳನ್ನು ಪ್ರಸ್ತಾಪಿಸುವುದು ದೇಶದ್ರೋಹವೇ?-ಇದು ಎ.ಐ.ಟಿ.ಯು.ಸಿ. ರಾಜ್ಯ ಕಾರ್ಯದರ್ಶಿ ಎನ್.ಶಿವಣ್ಣ ಏರಿದ ದನಿಯಲ್ಲಿ ಆಕ್ರೋಶದಿಂದ ಮುಂದಿಟ್ಟ ಪ್ರಶ್ನೆ.
ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆ.ಸಿ.ಟಿ.ಯು.) ನೀಡಿದ್ದ ಕರೆಯಂತೆ ಬುಧವಾರ ಮಧ್ಯಾಹ್ನ ತುಮಕೂರು ನಗರದ ಅಶೋಕ ರಸ್ತೆಯಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ಕಚೇರಿ ಮುಂಭಾಗ ನಡೆಸಿದ ಪ್ರತಿಭಟನಾ ಸಭೆ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ದೇಶದ ಅರ್ಥ ವ್ಯವಸ್ಥೆ ಕುಸಿದಿರುವುದರಿಂದ ದೇಶದಾದ್ಯಂತ ಆರ್ಥಿಕ ವಲಯ ಏರುಪೇರಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಅನುಕೂಲವಾಗುವ ಸ್ವಾಮಿನಾಥನ್ ವರದಿಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿಲ್ಲ. ದೇಶದಲ್ಲಿ ಹೊಸದಾಗಿ ಯಾವುದೇ ಉದ್ಯೋಗ ಸೃಷ್ಟಿಗೊಳ್ಳುತ್ತಿಲ್ಲ; ಬದಲಾಗಿ ಇರುವ ಉದ್ಯೋಗಗಳನ್ನೂ ಜನರು ಕಳೆದುಕೊಳ್ಳು ವಂತಾಗುತ್ತಿದೆ. ಸಾರ್ವಜನಿಕ ವಲಯದ ಕೈಗಾರಿಕೆಗಳು-ಉದ್ದಿಮೆಗಳು ವ್ಯವಸ್ಥಿತವಾಗಿ ಮುಚ್ಚಲ್ಪಡುತ್ತಿವೆ.
ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ಏರುತ್ತಿವೆ. ದೈನಿಕ ಬಳಕೆಯ ಈರುಳ್ಳಿ ಬೆಲೆ ಗಗನಕ್ಕೇರಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅಂಬಾನಿ, ಆದಾನಿ ಮೊದಲಾದ ಕಾರ್ಪೊರೇಟ್ ಜಗತ್ತು ಮತ್ತಷ್ಟು ಬಲಿಷ್ಠವಾಗುತ್ತಿದೆ. ಇಂತಹ ಖಾಸಗಿ ವಲಯಕ್ಕೆ ಕೋಟಿಗಟ್ಟಲೆ ರಿಯಾಯಿತಿ ನೀಡಲಾಗುತ್ತಿದೆ. ಜಿ.ಡಿ.ಪಿ. ಹಿಂದೆಂದೂ ಕಾಣದಷ್ಟು ಕುಸಿತ ಕಂಡಿದೆ. ಇಂತಹ ವಿಚಾರಗಳನ್ನು ಪ್ರಸ್ತಾಪಿಸಿ ಮೋದಿ ಸರ್ಕಾರವನ್ನು ಟೀಕಿಸಿದರೆ ಸಾಕು, ಅದನ್ನು ದೇಶದ್ರೋಹವೆಂಬಂತೆ ಇಂದು ಬಿಂಬಿಸಲಾಗುತ್ತಿದೆ. ಇದು ನಾಚಿಕೆಗೇಡಿನ ವಿಷಯ ಎಂದು ಕಿಡಿಕಾರಿದರು.
ಬಿಜೆಪಿ ಪರ ಕಾರ್ಮಿಕ ಸಂಘಟನೆಯಾದ ಬಿ.ಎಂ.ಎಸ್. ಹೊರತಾಗಿ ದೇಶದ 11 ಕಾರ್ಮಿಕ ಸಂಘಟನೆಗಳು ಇಂದು ಈ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ದೇಶದಾದ್ಯಂತ ನಡೆಸುತ್ತಿವೆ. ಇದು 19 ನೇ ಮುಷ್ಕರವಾಗಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಆರು ವರ್ಷಗಳಲ್ಲೇ ಅತಿ ಹೆಚ್ಚು ಮುಷ್ಕರಗಳಾಗುವಂತಾಗಿದೆ. ಇಂತಹ ಸನ್ನಿವೇಶದಲ್ಲಿ ಜನರ ಗಮನವನ್ನು ಮೂಲಭೂತ ಸಮಸ್ಯೆಗಳಿಂದ ಬೇರೆಡೆ ಸೆಳೆಯುವ ಸಲುವಾಗಿ ಕೇಂದ್ರ ಸರ್ಕಾರ ಸಿ.ಎ.ಎ. ಹಾಗೂ ಎನ್.ಆರ್.ಸಿ. ಯಂತಹ ವಿಚಾರಗಳನ್ನು ಮುಂದಿಡುತ್ತಿದೆ ಎಂದು ಅವರು ಮೋದಿ ಸರ್ಕಾರವನ್ನು ಟೀಕಿಸಿದರು.
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸಂಭವಿಸಿರುವ ಘಟನಾವಳಿಯನ್ನು ಸೂಚ್ಯವಾಗಿ ಪ್ರಸ್ತಾಪಿಸಿದ ಶಿವಣ್ಣ, ಆ ವಿಶ್ವವಿದ್ಯಾನಿಲಯದಲ್ಲಿ ಎ.ಬಿ.ವಿ.ಪಿ. ಸೋತಿರುವುದರಿಂದ ಅಲ್ಲಿ ಇಂತಹ ಘಟನೆಗಳನ್ನು ಉಂಟುಮಾಡಿ ಭೀತಿಯನ್ನು ಸೃಷ್ಟಿಸಲಾಗುತ್ತಿದೆ. ಆದರೆ ಇಂತಹವುಗಳಿಗೆಲ್ಲ ನಾವು ವಿಚಲಿತರಾಗುವುದಿಲ್ಲ. ಹಿಂದುರಾಷ್ಟ್ರ ಮಾಡುವ ಅವರ ಕನಸೆಲ್ಲ ಕೇವಲ ಭ್ರಮೆಯಷ್ಟೇ. ಏಕೆಂದರೆ ಈ ದೇಶದಲ್ಲಿರುವ ನಾವೆಲ್ಲರೂ ಭಾರತೀಯರೇ ಆಗಿದ್ದೇವೆ ಎಂದು ಹೇಳಿದರು.
ದಮನಕಾರಿ ನೀತಿಗೆ ಧಿಕ್ಕಾರ
ಸಿ.ಐ.ಟಿ.ಯು. ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡುತ್ತ, ಪೊಲೀಸರನ್ನು ಬಳಸಿಕೊಂಡು ಜನಪರ ಹೋರಾಟಗಳನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಸರ್ಕಾರದ ದಮನಕಾರಿ ನೀತಿಗೆ ಸಭಿಕದಿಂದ ಧಿಕ್ಕಾರ ಕೂಗಿಸಿದರು.
ಕಳೆದ ರಾತ್ರಿಯಿಂದಲೂ ಪೊಲೀಸರು ನಡೆದುಕೊಂಡಿರುವುದನ್ನು ನೋಡಿದರೆ, ನಾವೇನು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆಯೇ ಅಥವಾ ಇಲ್ಲವೇ ಎಂಬ ಅನುಮಾನ ಬರುವಂತಿದೆ. ಏಕೆಂದರೆ ರೈತ ಮುಖಂಡರ ಮನೆಯ ಸುತ್ತ ಪೊಲೀಸ್ ಪಹರೆ ಹಾಕಲಾಗಿದೆ ಎಂದು ಕೋಪದಿಂದ ನುಡಿದರು.
ಜನಪರವಾದ ಹೋರಾಟ ಮಾಡಲು, ಜನಪರ ದನಿಯೆತ್ತಲು ಪೊಲೀಸರಿಗೆ ನಾವು ಏಕೆ ಮುಚ್ಚಳಿಕೆ ಬರೆದುಕೊಡಬೇಕು ಎಂದು ಮುಜೀಬ್ ಏರಿದ ದನಿಯಲ್ಲಿ ಪ್ರಶ್ನಿಸಿದರು.ಇಂದು ಯಾವುದೇ ಅಂಗಡಿ ಮಾಲೀಕರನ್ನು ಮಾತನಾಡಿಸಿದರೂ, ವ್ಯಾಪಾರ ಇಳಿಮುಖವಾಗಿದೆ ಎನ್ನುತ್ತಾರೆ. ಬಸ್ ಮಾಲೀಕರನ್ನು ಕೇಳಿದರೆ, ಡೀಸೆಲ್ ಬೆಲೆ ಏರಿಕೆಯಿಂದ ಸಮಸ್ಯೆಯಾಗುತ್ತಿದೆ ಎಂದು ಹೇಳುತ್ತಾರೆ. ಇನ್ನು ಮಹಿಳೆಯರ ಮೇಲಿನ ಅತ್ಯಾಚಾರ, ಶೋಷಣೆ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ನಾವಿಂದು ಪ್ರಶ್ನಿಸಲೇ ಆಗುತ್ತಿಲ್ಲ. ಈ ಹಿಂದೆ ಈರುಳ್ಳಿ ಬೆಲೆ ಏರಿದಾಗ ಈರುಳ್ಳಿ ಹಾರ ಹಾಕಿಕೊಂಡು ಪ್ರತಿಭಟಿಸುತ್ತಿದ್ದ ಬಿಜೆಪಿಯವರೇ ಇಂದು ಈರುಳ್ಳಿ ಬೆಲೆ ಏರಿಕೆಯ ಬಗ್ಗೆ ತೆಪ್ಪಗಿದ್ದಾರೆ. ಬೇರೆ ಯಾರಾದರೂ ಪ್ರಶ್ನಿಸಿದರೆ ಉರಿದೇಳುತ್ತಿದ್ದಾರೆ. ಇನ್ನು ಪ್ರಧಾನಿ ಮೋದಿ ಕೇವಲ ಸುಳ್ಳುಗಳ ಸರದಾರರಾಗಿದ್ದಾರೆ ಎಂದು ಸೈಯದ್ ಮುಜೀಬ್ ವಾಗ್ದಾಳಿ ನಡೆಸಿದರು.
ಬಿಜೆಪಿಯಿಂದ ನೆಮ್ಮದಿ ಹಾಳು
ಈ ಮುಷ್ಕರಕ್ಕೆ ಬೆಂಬಲ ನೀಡಿದ್ದ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡುತ್ತ, ಬಿಜೆಪಿ ಆಳ್ವಿಕೆಯಲ್ಲಿ ದೇಶದ ಜನರ ನೆಮ್ಮದಿ ಹಾಳಾಗಿದೆ. ಎಲ್ಲರೂ ಜಾತ್ಯತೀತವಾಗಿ ಜೀವನ ನಡೆಸುವುದನ್ನು ನೋಡಿ ಸಹಿಸದ ಬಿಜೆಪಿ, ಧರ್ಮ-ಧರ್ಮಗಳ ನಡುವೆ ವಿಷಬೀಜ ಬಿತ್ತಿ ಒಡೆಯುವ ಕುತಂತ್ರ ನಡೆಸುತ್ತಿದೆ ಎಂದು ಕಟುಟೀಕೆ ಮಾಡಿದರು.
ದೇಶದ ಕಾರ್ಮಿಕ ವಲಯ ಇಂದು ಸಂಕಷ್ಟದಲ್ಲಿದೆ. ಅದಕ್ಕಾಗಿ ಇಂದು ಈ ಮುಷ್ಕರ ದೇಶಾದ್ಯಂತದಂತೆ ತುಮಕೂರು ಜಿಲ್ಲೆಯಲ್ಲೂ ಯಶಸ್ವಿಯಾಗಿ ನಡೆದಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್, ಉಪಾಧ್ಯಕ್ಷ ದೇವರಾಜ್, ಜೆಡಿಎಸ್ ನಗರಾಧ್ಯಕ್ಷ ಬೆಳ್ಳಿ ಲೋಕೇಶ್, ಜೆಡಿಎಸ್‍ನ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಶಿವಕುಮಾರ್, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಕೃಷ್ಣಮೂರ್ತಿ, ಕೊಳಗೇರಿ ನಿವಾಸಿಗಳ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಮಿಕ ನಾಯಕ ಗಿರೀಶ್, ಎನ್.ಕೆ.ಸುಬ್ರಹ್ಮಣ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು. ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
ಮೆರವಣಿಗೆ
ಇದಕ್ಕೂ ಮೊದಲು ನಗರದ ಟೌನ್‍ಹಾಲ್ ವೃತ್ತದಿಂದ ಬಿ.ಎಸ್.ಎನ್.ಎಲ್. ಕಚೇರಿವರೆಗೆ ಅಶೋಕ ರಸ್ತೆಯಲ್ಲಿ ನೂರಾರು ಕಾರ್ಮಿಕರು ಮೆರವಣಿಗೆ ನಡೆಸಿದರು. ಬಿ.ಎಸ್.ಎನ್.ಎಲ್. ಕಚೇರಿ ಮುಂಭಾಗ ಉರಿಬಿಸಿಲಿನಲ್ಲೇ ಫುಟ್‍ಪಾತ್‍ನಲ್ಲಿ ನಿಂತು ಮುಖಂಡರುಗಳು ಮಾತನಾಡಿದರು. ಕಾರ್ಮಿಕರೆಲ್ಲ ರಸ್ತೆಯಲ್ಲೇ ಕುಳಿತು ಭಾಷಣ ಆಲಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಟೌನ್‍ಹಾಲ್ ವೃತ್ತ ಹಾಗೂ ಬಿ.ಎಸ್.ಎನ್.ಎಲ್. ಕಚೇರಿ ಮುಂಭಾಗ ಹಾಗೂ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಪ್ರತಿಭಟನೆ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಕೆಲಕಾಲ ಜನ-ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಖಾಲಿ ಬಸ್‍ಗಳ ಸಂಚಾರ
ಅಖಿಲ ಭಾರತ ಮುಷ್ಕರದ ಹಿನ್ನೆಲೆಯಲ್ಲಿ ನಗರಾದ್ಯಂತ ಭಾಗಶಃ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಚಿತ್ರಮಂದಿರಗಳು ತೆರೆದಿದ್ದವು. ಕೆ.ಎಸ್.ಆರ್.ಟಿ.ಸಿ. ಹಾಗೂ ಖಾಸಗಿ ಬಸ್‍ಗಳು ಎಂದಿನಂತೆ ಸಂಚರಿಸಿದವಾದರೂ, ಅತಿ ಕಡಿಮೆ ಪ್ರಯಾಣಿಕರಿದ್ದುದರಿಂದ ಬಸ್‍ಗಳು ಬಹುತೇಕ ಖಾಲಿ-ಖಾಲಿಯಾಗಿಯೇ ಸಂಚರಿಸುತ್ತಿದ್ದುದು ಕಂಡುಬಂದಿತು. ಬಸ್ ನಿಲ್ದಾಣಗಳಲ್ಲೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
