ಚಿತ್ರದುರ್ಗ:
ಬಡ್ತಿ ಮೀಸಲಾತಿ ಕಾಯ್ದೆ-2018 ನ್ನು ಜಾರಿಗೊಳಿಸದಂತೆ ಅಹಿಂಸಾ ಜಿಲ್ಲಾ ಘಟಕದ ನೌಕರರು ಗುರುವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದ ನೌಕರರಿಗೆ ಬಡ್ತಿಯಲ್ಲೂ ಮೀಸಲಾತಿಯನ್ನು ನೀಡುವುದಕ್ಕಾಗಿ ಕರ್ನಾಟಕ ಸರ್ಕಾರ 1978 ರಲ್ಲಿ ಕಾಯ್ದೆ ಜಾರಿಗೊಳಿಸಿತು. ಈ ನೀತಿ ಕೇವಲ ಲೋಯರ್ ಕ್ಲಾಸ್-1 ಹುದ್ದೆಯವರೆಗೂ ಅನ್ವಯಿಸುತ್ತದೆ. ಆದರೆ ಬಡ್ತಿ ಮೀಸಲಾತಿಯಿಂದ ಬಡ್ತಿ ಹುದ್ದೆಗಳನ್ನು ಪಡೆದುಕೊಂಡರೆ ಅವರುಗಳಿಗೆ ವೇಗೋತ್ಕರ್ಷ ಜೇಷ್ಟತೆಯನ್ನು ಸರ್ಕಾರ ನೀಡುತ್ತ ಬಂದ ಪರಿಣಾಮವಾಗಿ ಎಲ್ಲಾ ಬಡ್ತಿ ಹುದ್ದೆಗಳು ಬಹುಪಾಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಲಭಿಸಿದ್ದರಿಂದ ಶೇ.82 ರಷ್ಟು ಇತರೆ ವರ್ಗದ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾನಿರತ ಅಹಿಂಸಾ ನೌಕರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಗೋತ್ಕರ್ಷ ಜೇಷ್ಟತೆಯನ್ನು ಸಾಮಾನ್ಯ ವರ್ಗದ ನೌಕರರು 1992 ರಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿ ತದನಂತರ ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರಿಂದ 2017 ಫೆ.9 ರಂದು ನ್ಯಾಯ ದೊರಕಿದೆ.
ಸುಪ್ರಿಂಕೋರ್ಟ್ ಬಡ್ತಿ ಮೀಸಲಾತಿಯನ್ನು ರದ್ದು ಪಡಿಸಿಲ್ಲ. ಆದರೆ ವೇಗೋತ್ಕರ್ಷ ಜೇಷ್ಟತೆ ನೀಡಲು ಬರುವುದಿಲ್ಲವೆಂದು ತಿಳಿಸಿ ಆರು ತಿಂಗಳೊಳಗೆ ಆದೇಶವನ್ನು ಜಾರಿಮಾಡಲು ಸೂಚಿಸಿದೆ. ಸರ್ಕಾರ ಆದೇಶ ಜಾರಿ ಮಾಡದ ಕಾರಣ ನ್ಯಾಯಾಲಯ ನಿಂದನಾ ಅರ್ಜಿಯನ್ನು ಕೋರ್ಟ್ನಲ್ಲಿ ಹೂಡಲಾಗಿದೆ. ಆದರೂ ಸರ್ಕಾರ ಆದೇಶವನ್ನು ಜಾರಿಗೊಳಿಸದೆ ಸುಪ್ರೀಂಕೋರ್ಟ್ ಆದೇಶವನ್ನು ಅಸಿಂಧುಗೊಳಿಸಲು ಕಾಯ್ದೆ-2018 ನ್ನು ಜಾರಿಗೊಳಿಸಿದೆ.
ಈ ಕಾಯ್ದೆಯನ್ನು ಸಹ ಪ್ರಶ್ನಿಸಿದ್ದು, ಸುಪ್ರೀಂಕೋರ್ಟ್ನ ಆದೇಶದಂತೆ ಯಥಾಸ್ಥಿತಿ ಕಾಪಾಡಬೇಕು. ಕೆಲವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಚಿವರುಗಳ ಒತ್ತಾಯಕ್ಕೆ ಮಣಿದು ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದರೆ ರಾಜ್ಯಾದ್ಯಂತ ಸುಮಾರು ಹತ್ತು ಲಕ್ಷ ನಿವೃತ್ತ ಹಾಗೂ ಸೇವೆಯಲ್ಲಿರುವ ನೌಕರರು ಸೇರಿ ಅಸಹಾಕಾರ ಚಳುವಳಿ ಮಾಡಬೇಕಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಸಿದರು.
ಅಹಿಂಸಾ ನೌಕರರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನಯ್ಯ, ಚಿನ್ಮಯರೆಡ್ಡಿ, ನಾಗರಾಜ್ಸಂಗಂ, ಎನ್.ಆರ್.ತಿಪ್ಪೇಸ್ವಾಮಿ, ನವೀನ್, ಜಯಣ್ಣ, ಬಸವರಾಜು, ಗುರುಪ್ರಕಾಶ್ ಸೇರಿದಂತೆ ನೂರಾರು ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








