ತುಮಕೂರು : ವೇಶ್ಯಾವಾಟಿಕೆ ದಂಧೆ ಇನ್ನೂ ಜೀವಂತ..!

ತುಮಕೂರು:

ವಿಶೇಷ ವರದಿ:ಯೋಗೇಶ್ ಮಲ್ಲೂರು

     ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿ ಕಂಡು ಬರುತ್ತಿರುವ ವೇಶ್ಯಾವಾಟಿಕೆ ದಂಧೆಯು ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಬದಲಾಗಿ ಕಂಡೂ ಕಾಣದಂತೆ ಅಲ್ಲಲ್ಲಿ ಜೀವಂತಿಕೆ ಪಡೆದುಕೊಳ್ಳುತ್ತಿದೆ. ಬಡತನ, ನಿರುದ್ಯೋಗ ಹಾಗೂ ಸಾಂಸಾರಿಕ ಬದುಕಿನಿಂದ ಮುಕ್ತಗೊಂಡು ನೊಂದ ಮಹಿಳೆಯರ ಬದುಕಿನಲ್ಲಿ ಇದು ದಿನನಿತ್ಯ ನರಕಯಾತನೆಯನ್ನು ಉಂಟು ಮಾಡುತ್ತಿದೆ.

ಬಡತನ ಹಾಗೂ ಶಿಕ್ಷಣ ವಂಚನೆಯೆ ಕಾರಣೀಭೂತ :

     ಗ್ರಾಮೀಣ ಭಾಗಗಳಿಂದ ಕೂಲಿ ಕೆಲಸಗಳನ್ನು ಅರಸಿ ಮಹಿಳೆಯರು ನಗರ ಪ್ರದೇಶಗಳತ್ತ ವಲಸೆ ಬಂದು, ಈ ರೀತಿಯ ಅನಾಹುತಗಳಿಗೆ ಬಲಿಪಶುವಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ನಗರಗಳಲ್ಲಿನ ಕೈಗಾರಿಕೆಗಳು, ಕಾರ್ಖಾನೆಗಳಲ್ಲಿ ಸಂಬಳದ ಪ್ರಮಾಣ ಕಡಿಮೆಯಾದಂತೆ ಮಹಿಳೆಯರು ಅಡ್ಡದಾರಿ ಹಿಡಿಯುತ್ತಿದ್ದಾರೆ. ಆದ ಕಾರಣ ಮಹಿಳೆಯರು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಬಡತನದ ಜೊತೆಗೆ ಶಿಕ್ಷಣದಿಂದಲೂ ವಂಚಿತರಾಗಿದ್ದು, ಉದ್ಯೋಗಕ್ಕೆ ಸರಿಯಾದ ವಿದ್ಯಾರ್ಹತೆ ಇಲ್ಲದ್ದರಿಂದಲೂ ಕೆಲಸ ಕೈತಪ್ಪುವುದರಿಂದ ಹಣಕ್ಕಾಗಿ ವಿಧಿಯಿಲ್ಲದೆ ಈ ರೀತಿಯ ದಂಧೆಗಿಳಿಯುವುದು ಪ್ರಮುಖ ಕಾರಣಾಂಶವಾಗಿ ಕಂಡುಬರುತ್ತಿದೆ.

       ವೇಶ್ಯಾವಾಟಿಕೆ ಬಗ್ಗೆ ಮಾಹಿತಿ ತಿಳಿದು ಜಿಲ್ಲೆಯ ಪೋಲೀಸರು ಸಾಕಷ್ಟು ಬಾರಿ ದಾಳಿ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದರೂ, ಇತ್ತೀಚಿನ ದಿನಮಾನಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ದಂಧೆಗೆ ಒಳಪಟ್ಟ ಮಹಿಳೆಯರ ಸಂಖ್ಯೆ ದುಪ್ಪಟ್ಟಾದಂತೆ ಕಂಡು ಬರುತ್ತಿದೆ. ಇದರಿಂದ ರಸ್ತೆಗಳಲ್ಲಿ ಜನ ಸಾಮಾನ್ಯರು ಹಾಗೂ ಯುವ ಜನತೆ ಸಂಚರಿಸಲು ಮುಂಜುಗರ ಉಂಟಾಗಿದೆ.

       ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ 96 ವೇಶ್ಯಾವಾಟಿಕೆ ಪ್ರಕರಣಗಳು ದಾಖಲಾಗಿದ್ದು, 2011 ಮತ್ತು 2013ರಲ್ಲಿ ಜಿಲ್ಲೆಯಾದ್ಯಂತ ಹೆಚ್ಚು ಮಂದಿ ಮಹಿಳೆಯರನ್ನು ವೇಶ್ಯಾವಾಟಿಕೆ ಕೂಪದಿಂದ ಪೋಲೀಸರು ರಕ್ಷಿಸಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಹಣದ ಆಮಿಷವೊಡ್ಡಿ ಬಡ ಮಹಿಳೆಯರನ್ನು ಮಧ್ಯವರ್ತಿಗಳು ವೇಶ್ಯಾವಾಟಿಕೆ ದಂಧೆಗೆ ಸೆಳೆಯುತ್ತಿದ್ದಾರೆ. ಉಳಿದಂತೆ ಗ್ರಾಮೀಣ ಪ್ರದೇಶದ ಯುವತಿಯರನ್ನು ಉದ್ಯೋಗದ ಆಮಿಷವೊಡ್ಡಿ ಸಹ ದಂಧೆಗೆ ಬಳಸಿಕೊಳ್ಳಲಾಗುತ್ತಿದೆ.

ಕಳೆದ 10 ವರ್ಷದ ಪ್ರಕರಣಗಳು :

         ಕಳೆದ 10 ವರ್ಷಗಳಲ್ಲಿ ವರದಿಯಾಗಿರುವ ಪ್ರಕರಣಗಳನ್ನು ಗಮನಿಸಿದಾಗ 2009ರಲ್ಲಿ 13 ಪ್ರಕರಣ, 2010ರಲ್ಲಿ 7 ಪ್ರಕರಣ, 2011ರಲ್ಲಿ 13 ಪ್ರಕರಣ, 2012ರಲ್ಲಿ 6 ಪ್ರಕರಣ, 2013ರಲ್ಲಿ 14 ಪ್ರಕರಣ, 2014ರಲ್ಲಿ 12 ಪ್ರಕರಣ, 2015ರಲ್ಲಿ 11 ಪ್ರಕರಣ, 2016ರಲ್ಲಿ 9 ಪ್ರಕರಣ, 2017ರಲ್ಲಿ 4 ಪ್ರಕರಣ, 2018ರಲ್ಲಿ 3 ಪ್ರಕರಣ, 2019ರ ಇಲ್ಲಿಯವರೆಗೆ 4 ಪ್ರಕರಣಗಳು ದಾಖಲಾಗಿದ್ದು, ಸುಮಾರು 110 ಮಹಿಳೆಯರನ್ನು ರಕ್ಷಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ ದಂಧೆ ವ್ಯಾಪಕವಾಗಿ ನಡೆಯುತ್ತಿರುವುದು ಕಂಡುಬರುತ್ತಿದ್ದು, ಪ್ರಸ್ತುತ ವರ್ಷದಲ್ಲೂ ಈ ದಂಧೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದಂತಾಗಿದೆ.    ದಂಧೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲಾಖೆಯಲ್ಲಿ ಮೂವರು ಪೋಲೀಸರನ್ನೊಳಗೊಂಡ ವಿಶೇಷ ಕಮಿಟಿಯೊಂದನ್ನು ರಚಿಸಲಾಗಿದ್ದು, ಜಿಲ್ಲಾದ್ಯಂತ ದಾಳಿ ನಡೆಸಲಾಗುತ್ತಿದೆ. ವೇಶ್ಯಾವಾಟಿಕೆ ದಂಧೆ ನಡೆಯುವ ಮತ್ತು ನಡೆಸುವ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಸಂತ್ರಸ್ತ ಮಹಿಳೆಯರನ್ನು ರಕ್ಷಿಸುವ ಕಾರ್ಯವನ್ನು ಪೋಲೀಸ್ ಇಲಾಖೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ದಂಧೆಗಳನ್ನು ಬೆನ್ನಟ್ಟಿ ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ಸಂಪೂರ್ಣ ಕ್ಷೀಣಿಸುವಂತೆ ನಮ್ಮ ತಂಡ ಕೆಲಸ ಮಾಡುವ ಭರವಸೆ ಇದೆಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap